ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಸಿಯಲ್ಲಿ ಯಶಸ್ವಿ ಮೂಳೆ ಮಜ್ಜೆ ಕಸಿ ಚಿಕಿತ್ಸೆ

Published 26 ಆಗಸ್ಟ್ 2023, 13:23 IST
Last Updated 26 ಆಗಸ್ಟ್ 2023, 13:23 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲಬಾರಿಗೆ ಯಶಸ್ವಿ ಗ್ರಾಫ್ಟ್ ಮ್ಯಾನಿಪುಲೇಟೆಡ್ ಅರ್ಧ-ಹೊಂದಾಣಿಕೆಯ ಮೂಳೆ ಮಜ್ಜೆಯ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ.

ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದ ಒಂದು ವರ್ಷದ ಮಗುವಿಗೆ ಸಿವಿಯರ್ ಕಂಬೈನ್ಡ್ ಇಮ್ಮುನೊ ಡೆಫಿಸಿನ್ಸಿ ಹೆಸರಿನ ತೀವ್ರ ತರಹದ ರೋಗ ನಿರೋಧಕ ಶಕ್ತಿ ಕೊರತೆ ಕಾಯಿಲೆ ಪತ್ತೆಯಾಗಿತ್ತು. ಅಸ್ಥಿಮಜ್ಜೆ ಕಸಿ ಮಾತ್ರವೇ ಮಗುವಿನ ಕಾಯಿಲೆ ಗುಣಪಡಿಸಬಲ್ಲ ಇದ್ದ ಏಕೈಕ ಚಿಕಿತ್ಸೆಯಾಗಿದ್ದರಿಂದ ಆಸ್ಪತ್ರೆಯ ವೈದ್ಯರ ತಂಡ ಮೂಳೆ ಮಜ್ಜೆ ಕಸಿಯನ್ನು ಯಶಸ್ವಿಯಾಗಿ ಮಾಡಿದೆ.

ಚಿಕಿತ್ಸಾ ಕ್ರಮ ಹೇಗೆ:

ಮೂಳೆ ಮಜ್ಜೆಯ ಕಸಿ ಸಂಕೀರ್ಣ ಚಿಕಿತ್ಸೆಯಾಗಿದ್ದು, ಥಲಸ್ಸೆಮಿಯಾ, ಮೂಳೆ ಮಜ್ಜೆಯ ವೈಫಲ್ಯ, ಇಮ್ಯುನೊ ಡಿಫಿಶಿಯನ್ಸಿ ಹಾಗೂ ಕ್ಯಾನ್ಸರ್‌ನಂತಹ ರೋಗಗಳನ್ನು ಶಾಶ್ವತವಾಗಿ ಗುಣಪಡಿಸುವ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯಲ್ಲಿ ರೋಗಗ್ರಸ್ತ ಮೂಳೆ ಮಜ್ಜೆಯನ್ನು ತೆಗೆದು ಹಾಕಿ ಬದಲಿಗೆ ರೋಗಮುಕ್ತ ಕಾಂಡಕೋಶಗಳನ್ನು ಬಳಸಿ ಆರೋಗ್ಯಕರ ರಕ್ತದ ಕಣಗಳನ್ನು ತಯಾರಿಸುವ ಮೂಳೆ ಮಜ್ಜೆಯನ್ನು ಕಸಿ ಮಾಡಲಾಗುತ್ತದೆ.

ಆದರೆ, ಕಾಂಡಕೋಶವನ್ನು ದಾನ ಮಾಡಲು ಪೂರ್ಣ ಎಚ್ಎಲ್ಎ-ಹೊಂದಾಣಿಕೆಯ ದಾನಿಗಳು ಬೇಕಾಗುತ್ತದೆ. ಪ್ರಸ್ತುತ ಲಭ್ಯವಿರುವ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪ್ರಗತಿಯೊಂದಿಗೆ, ಅರ್ಧ- ಹೊಂದಾಣಿಕಯ ದಾನಿಗಳಿಂದಲೂ ಮೂಳೆ ಮಜ್ಜೆಯ ಕಸಿಯನ್ನು ಯಶಸ್ವಿಯಾಗಿ ಮಾಡಬಹುದಾಗಿದ್ದರಿಂದ ಮಗುವಿನ ತಂದೆಯನ್ನು ಅಸ್ತಿಮಜ್ಜೆ ಕಸಿಗೆ ದಾನಿಯಾಗಿ ಆಯ್ಕೆ ಮಾಡಿಕೊಳ್ಳಲಾಯಿತು.

ರೋಗಿಯು ಮಾರಣಾಂತಿಕ ಕ್ಷಯ ಸೋಂಕಿನಿಂದ ಬಳಲುತ್ತಿದ್ದ ಕಾರಣ ಕಿಮೋಥೆರಪಿ ಮತ್ತು ಇಮ್ಯುನೊಸಪ್ರೆಸಿವ್ ಔಷಧಗಳನ್ನು ಬಳಸದೆ ಟಿಸಿಆರ್ ಆಲ್ಫಾ ಬೀಟಾ ಡಿಪ್ಲೀಷನ್ ಎಂದು ಕರೆಯಲ್ಪಡುವ ಸ್ಟೆಮ್ ಸೆಲ್ ಗ್ರಾಫ್ಟ್ ಮ್ಯಾನಿಪ್ಯುಲೇಷನ್ ತಂತ್ರಜ್ಞಾನ ಬಳಸಲಾಯಿತು. ಇದು ಕಸಿ ಸಮಯದಲ್ಲಿ ಸಹಜವಾಗಿ ಪ್ರಕ್ರಿಯೆ ನಡೆಯಲು ಸಹಾಯ ಮಾಡುತ್ತದೆ ಮತ್ತು ಅಡ್ಡಪರಿಣಾಮ ಕಡಿಮೆ ಮಾಡುತ್ತದೆ ಎಂದು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ತಿಳಿಸಿದ್ದಾರೆ.

ಮಗುವಿಗೆ ಮೂಳೆ ಮಜ್ಜೆಯ ಕಸಿ ಮಾಡಿ 6 ವಾರಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು ಮಗು ರೋಗ ಮತ್ತು ಸೋಂಕಿನಿಂದ ಮುಕ್ತವಾಗಿ ಆರೋಗ್ಯಕರ ಜೀವನ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಇಮ್ಯುನೊ ಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗದ ಮುಖ್ಯಸ್ಧೆ ಡಾ.ಶಮೀ ಶಾಸ್ತ್ರಿ ನೇತೃತ್ವದ ರಕ್ತ ಕೇಂದ್ರದ ವೈದ್ಯರ ತಂಡವು ಅಪರೂಪದ ಕಸಿ ಚಿಕಿತ್ಸೆಗೆ ಸಹಕರಿಸಿದೆ. ಡಾ.ವಾಸುದೇವ ಭಟ್ ಚಿಕಿತ್ಸಾ ತಂಡದಲ್ಲಿದ್ದರು.

ಅಪರೂಪದ ರಕ್ತದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಜೀವ ಉಳಿಸಲು ಶ್ರಮಿಸಿದ ವೈದ್ಯರ ತಂಡದ ಕಾರ್ಯ ಶ್ಲಾಘನೀಯ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT