ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲೂರಿನಿಂದ ಕೊಡಚಾದ್ರಿ ಪ್ರಯಾಣ: ಕೇಬಲ್ ಕಾರ್ ಯೋಜನೆಗೆ ಅನುಮೋದನೆ

ಡಿಪಿಆರ್‌ ಸಿದ್ಧತೆಗೆ ಅಧಿಕಾರಿಗಳ ಭೇಟಿ
Last Updated 25 ನವೆಂಬರ್ 2022, 4:32 IST
ಅಕ್ಷರ ಗಾತ್ರ

ಕುಂದಾಪುರ: ಕೊಡಚಾದ್ರಿ ಬೆಟ್ಟ ಏರಲು ಕಡಿದಾದ ರಸ್ತೆಯಲ್ಲಿ ಜೀಪ್‌ನಲ್ಲಿ 40 ಕಿ.ಮೀ ಪ್ರಯಾಣಿಸಿ, ನಂತರ 2 ಕಿ.ಮೀ ಎತ್ತರದ ಕಿರಿದಾದ ರಸ್ತೆಯಲ್ಲಿ ಪ್ರಯಾಣಿಸಬೇಕು. ಈ ಪ್ರಯಾಸದ ರಸ್ತೆ ಪ್ರಯಾಣಕ್ಕೆ ಪರ್ಯಾಯವಾಗಿ ಕೇಬಲ್‌ ಕಾರ್‌ನಲ್ಲಿ 20 ನಿಮಿಷದಲ್ಲಿ ತಲುಪಬಹುದಾದ ಯೋಜನೆಗೆ ಅನುಮೋದನೆ ದೊರೆತಿದೆ.

ಕೇಂದ್ರ ಭೂಸಾರಿಗೆ ಸಚಿವಾಲಯವು ಪರ್ವತಮಾಲಾ ಯೋಜನೆಯಡಿ ಅಂದಾಜು ₹ 300 ಕೋಟಿ ವೆಚ್ಚದ ಯೋಜನೆಗೆ ಡಿಪಿಆರ್‌ ತಯಾರಿಸಲು ಅನುಮೋದನೆ ನೀಡಿ, ದೆಹಲಿಯ ಕೆ ಅಂಡ್ ಜೆ ಕನ್ಸಲ್ಟನ್ಸಿಗೆ ಕಾರ್ಯಾದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಅಧ್ಯಯನ ತಂಡವು ನ.19 ಹಾಗೂ 20ರಂದು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಕಾರ್ಯ ನಡೆಸಿತು. ಕೊಡಚಾದ್ರಿ ಬೆಟ್ಟದ ಸರ್ವಜ್ಞ ಪೀಠದಿಂದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಎದುರು ಇರುವ ಗೋಶಾಲೆ ಹಾಗೂ ಇತರ ಜಾಗಗಳ ವಿವರಗಳನ್ನು ಪರಿಶೀಲಿಸಿ, 6 ಪಥ ನಕ್ಷೆಗಳನ್ನು ತಯಾರಿಸಲಿದೆ. ಎದುರಾಗಬಹುದಾದ ಅಡಚಣೆ ನಿವಾರಿಸಿ, ಪಥ ನಕ್ಷೆ ಅಂತಿಮಗೊಳಿಸಲು ಸಂಬಂಧಿಸಿದ ಪ್ರವಾಸೋದ್ಯಮ, ಅರಣ್ಯ ವನ್ಯಜೀವಿ ವಿಭಾಗ, ಕಂದಾಯ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಿದೆ. ಒಂದು ತಿಂಗಳ ಅವಧಿಯೊಳಗೆ ಡಿಪಿಆರ್ ತಯಾರಿಸಿ ಮಂಜೂರಾತಿ ಪಡೆದು ಯೋಜನೆಯ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಎನ್‌ಎಚ್ಎಲ್ಎಂಎಲ್‌ನ ಹಿರಿಯ ವ್ಯವಸ್ಥಾಪಕ ಅನುರಾಗ್ ತ್ರಿಪಾಟಿ, ಬೆಂಗಳೂರಿನ ವ್ಯವಸ್ಥಾಪಕ ರೀನಾ ಪವಾರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಶಿವಮೊಗ್ಗದ ಪೀರ್ ಪಾಷಾ, ಡಿಪಿಆರ್ ಕನ್ಸಲ್ಟೆಂಟ್ ಶ್ರವಣ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಗುರುಪ್ರಸಾದ್, ವನ್ಯಜೀವಿ ಹಾಗೂ ಅರಣ್ಯ ಇಲಾಖೆಯ ಸಂಪತ್ ಶಾಸ್ತ್ರಿ, ಬೈಂದೂರಿನ ಉದ್ಯಮಿ ವೆಂಕಟೇಶ್ ಕಿಣಿ, ಸಂಸದರ ಕಚೇರಿಯ ಶಿವಕುಮಾರ್ ಇದ್ದರು.

‘ಯೋಜನೆ ಅನುಷ್ಠಾನಗೊಂಡರೆ, ಬೆಟ್ಟ ಏರುವ ಪ್ರಯಾಸ ಕಡಿಮೆಯಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಜತೆಗೆ ಉದ್ಯೋಗದ ಅವಕಾಶ ಹೆಚ್ಚುತ್ತದೆ’ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಪ್ರತಿಕ್ರಿಯಿಸಿದರು. ಸಂಸದ ಬಿ.ವೈ. ರಾಘವೇಂದ್ರ ಅವರ ಸತತ ಪ್ರಯತ್ನದಿಂದ ಈ ಯೋಜನೆಗೆ ಅನುಮೋದನೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT