ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಗರಿಗೆ ಅನ್ಯಾಯ, ಅವಮಾನ: ಸರ್ಕಾರದ ನಿರ್ಧಾರಕ್ಕೆ ಆಕ್ರೋಶ, ಧರಣಿ

ವೈದ್ಯಕೀಯ ವೆಚ್ಚ ಮರುಪಾವತಿ ಮಾಡದ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ, ಧರಣಿ
Last Updated 12 ಸೆಪ್ಟೆಂಬರ್ 2022, 13:45 IST
ಅಕ್ಷರ ಗಾತ್ರ

ಉಡುಪಿ: ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ ವೈದ್ಯಕೀಯ ವೆಚ್ಚ ಮರುಪಾವತಿ ತಡೆಯುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಕೊರಗರ ಸಂಘದ ಅಧ್ಯಕ್ಷೆ ಗೌರಿ ವಾಗ್ದಾಳಿ ನಡೆಸಿದರು.

ಸೋಮವಾರ ಕೊರಗರ ಸಂಘದಿಂದ ಮಣಿಪಾಲದ ಟೈಗರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹಕ್ಕೊತ್ತಾಯ ಜಾಥಾ ನಡೆಸಿ, ಬೇಡಿಕೆಗಳ ಈಡೇರಿಕೆಗೆ ನಡೆದ ಧರಣಿಯಲ್ಲಿ ಮಾತನಾಡಿದರು.

ಹಿಂದೆ, ಗಂಭೀರ ಕಾಯಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರಗರು ಚಿಕಿತ್ಸೆ ಪಡೆದರೆ ಐಟಿಡಿಪಿ ಇಲಾಖೆಯ ಮೂಲಕ ವೈದ್ಯಕೀಯ ವೆಚ್ಚವನ್ನು ಮರುಪಾವತಿ ಮಾಡಲಾಗುತ್ತಿತ್ತು. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಕೊರಗರಿಗೆ ಉಚಿತ ವೈದ್ಯಕೀಯ ಸೇವೆ ಹೆಚ್ಚು ಉಪಯುಕ್ತವಾಗಿತ್ತು.

ಆದರೆ, ಸರ್ಕಾರ ಈಚೆಗೆ ಐಟಿಡಿಪಿ ಇಲಾಖೆಯ ಮೂಲಕ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲು ಸಾದ್ಯವಿಲ್ಲ ಎಂಬ ಆದೇಶ ಹೊರಡಿಸಿದೆ. ಜತೆಗೆ ಕೊರಗರು ಮದ್ಯಪಾನ ಹಾಗೂ ದುಶ್ಚಟಗಳ ಕಾರಣದಿಂದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡುವ ಮೂಲಕ ಕೊರಗ ಸಮುದಾಯವನ್ನು ಅವಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರಗರು ಗಂಭೀರ ಕಾಯಿಲೆಗಳಿಂದ ನರಳುತ್ತಿದ್ದು ಜನಸಂಖ್ಯೆ ದಿನೇ ದಿನೇ ಕ್ಷೀಣವಾಗುತ್ತಿದೆ. ಅಳಿವಿನಂಚಿಗೆ ಸಾಗುತ್ತಿರುವ ಸಮುದಾಯದ ಸಮಸ್ಯೆಗೆ ಸ್ಪಂದಿಸಬೇಕಾದ ಸರ್ಕಾರವು ಕೊರಗರ ವಿರೋಧಿ ನಿಲುವು ತಾಳಿರುವುದು ಎಂದು ಬೇಸರ ತಂದಿದೆ ಎಂದರು.

ಮದ್ಯಪಾನ, ದುಶ್ಚಟಗಳಿಂದ ಕೊರಗರು ಮೃತಪಡುತ್ತಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. ಸರ್ಕಾರದಿಂದ ವೈದ್ಯಕೀಯ ವೆಚ್ಚ ಮರುಪಾವತಿ ಪಡೆದಿರುವ ಫಲಾನುಭವಿಗಳಲ್ಲಿ ಹೆಚ್ಚಿನವರು ಹೃದ್ರೋಗಿಗಳು, ಕಿಡ್ನಿ ವೈಫಲ್ಯ ಹೊಂದಿರುವವರು, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತುತ್ತಾದವರು ಇದ್ದಾರೆ. ಸರ್ಕಾರ ಒಮ್ಮೆ ಪರಿಶೀಲಿಸಲಿ ಎಂದರು.

ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಕೊರಗರಲ್ಲಿ ಮದ್ಯಪಾನಿಗಳು ಹೆಚ್ಚಾಗಿದ್ದಾರೆ ಎಂದು ಆರೋಪ ಹೊರಿಸಿರುವ ಸರ್ಕಾರ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನು ರದ್ದುಗೊಳಿಸಿದೆ. ಅಧಿಕಾರಿಗಳ ಆರೋಪಕ್ಕೆ ಸೂಕ್ತ ಆಧಾರಗಳಿಲ್ಲ. ಸಂವಿಧಾನ ಧನಿ ಇಲ್ಲದವರಿಗೆ ನೀಡಿರುವ ಸೌಲಭ್ಯಗಳನ್ನು ಹಂತ ಹಂತವಾಗಿ ಹಿಂಪಡೆಯುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದರು.

ಕೊರಗ ಮುಖಂಡ ಗಣೇಶ್ ಕೊರಗ ಮಾತನಾಡಿ, ಇಂದಿಗೂ ಕೊರಗರು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವುದಿಲ್ಲ ಎಂದು ಹೇಳಿರುವುದು ಕೊರಗರು ಮನೆಯಲ್ಲಿಯೇ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಮುಂದೆ ಕೊರಗ ಸಮುದಾಯ ಸಂಪೂರ್ಣವಾಗಿ ನಶಿಸಿಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT