ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಪ್ಪು ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ನಾಯಕರು: ಕೋಟ ಶ್ರೀನಿವಾಸ ಪೂಜಾರಿ

ಬ್ರಹ್ಮಾವರ: ಬಿಜೆಪಿ ನಾಯಕರಿಗೆ ಅಭಿನಂದನಾ ಸಮಾರಂಭ
Published : 2 ಸೆಪ್ಟೆಂಬರ್ 2024, 3:30 IST
Last Updated : 2 ಸೆಪ್ಟೆಂಬರ್ 2024, 3:30 IST
ಫಾಲೋ ಮಾಡಿ
Comments

ಬ್ರಹ್ಮಾವರ: ಪ್ರಧಾನಿ ಮೋದಿ ಅವರು ವಿಶ್ವಮಟ್ಟದಲ್ಲಿ ಭಾರತಕ್ಕೆ ಗೌರವ ಹೆಚ್ಚಿಸುವ ಕೆಲಸ ಮಾಡುತ್ತಿರುವಾಗ, ರಾಜ್ಯದ ಕಾಂಗ್ರೆಸ್ ನಾಯಕರು ತಪ್ಪುಗಳನ್ನು ಮಾಡುತ್ತಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿ ದೇಶಕ್ಕೆ ಅವಮಾನಿಸಿದ್ದಾರೆ. ಹೆಂಡತಿಗೋಸ್ಕರ, ಸೈಟ್‌ಗೋಸ್ಕರ ಕೆಲಸ ಮಾಡುವ ಸಿ.ಎಂ ಕಾಂಗ್ರೆಸ್‌ನಲ್ಲಿ ಇದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿನ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆದ ಸಂಸದರು, ವಿಧಾನ ಪರಿಷತ್ ಸದಸ್ಯರು, ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಸಕ ಎಸ್‌.ಎಲ್‌. ಭೋಜೆಗೌಡ ಮಾತನಾಡಿ, ಆರೋಪ ಬಂದ ತಕ್ಷಣ ರಾಜೀನಾಮೆ ನೀಡಿ, ತನಿಖೆ ಎದುರಿಸಿದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಇದ್ದಾರೆ. ಸಿ.ಎಂ ಸಿದ್ದರಾಮಯ್ಯ ಆರೋಪ ಬಂದ ತಕ್ಷಣ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದರೆ ಮೆಚ್ಚಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಇಂದು ಸರ್ಕಾರದಲ್ಲಿ ಶಿಕ್ಷಕರಿಗೂ ಸಂಬಳ ಕೊಡುವಷ್ಟು ಹಣ ಇಲ್ಲ’ ಎಂದು ಆರೋಪಿಸಿದರು.

ಶಾಸಕ ಡಾ. ಧನಂಜಯ ಸರ್ಜಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ 23 ಕೋಟಿ ಮತದಾರರು ಬಿಜೆಪಿ ಬೆಂಬಲಿಸಿದರು. ಕಾಂಗ್ರೆಸ್‌ನ್ನು 13 ಕೋಟಿ ಮತದಾರರು ಬೆಂಬಲಿಸಿದರು. ಹೀಗಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಹಂ ಪ್ರದರ್ಶಿಸುತ್ತಿರುವುದು ಆಶ್ಚರ್ಯ ತರಿಸುತ್ತಿದೆ. ದೇಶವನ್ನು ತುಂಡರಿಸಿದ್ದು ಕಾಂಗ್ರೆಸ್‌ನವರು. ದೇಶ ಜೋಡಿಸಿದ್ದು ಬಿಜೆಪಿ. ಉತ್ತಮ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿ ಜೋಡಿಸುವ ಮೂಲಕ, 70ರಿಂದ 150 ವಿಮಾನ ನಿಲ್ದಾಣಗಳನ್ನು ಹೆಚ್ಚಿಸುವ ಮೂಲಕ, 4ಜಿ ಯಿಂದ 5ಜಿ ಸಂಪರ್ಕ ಕಲ್ಪಿಸುವ, ನದಿಗಳ ಜೋಡಣೆಯ ಮೂಲಕ ಭಾರತ ಜೋಡೋ ಮಾಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎಸ್‌.ಎಲ್‌. ಭೋಜೆಗೌಡ, ಡಾ. ಧನಂಜಯ ಸರ್ಜಿ, ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎನ್.ಶಂಕರ್ ಪೂಜಾರಿ, ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ಕಿರಣ್ ಕುಮಾರ್ ಉಡುಪಿ, ಧನಂಜಯ ಅಮೀನ್ ಪೇತ್ರಿ, ಜ್ಞಾನ ವಸಂತ ಶೆಟ್ಟಿ, ಹರಿಮಕ್ಕಿ ರತ್ನಾಕರ ಶೆಟ್ಟಿ, ಬಿಜೆಪಿ ನಗರ ಅಧ್ಯಕ್ಷ ದಿನೇಶ್ ಅಮೀನ್, ಕಾರ್ಯದರ್ಶಿ ರಾಘವೇಂದ್ರ ಕುಂದರ್, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು, ಮಂಡಲ ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ, ಉಡುಪಿ ಗ್ರಾಮಾಂತರ ಮಾಜಿ ಅಧ್ಯಕ್ಷೆ ವೀಣಾ ನಾಯ್ಕ ಇದ್ದರು.

ಶಾಸಕ ಯಶ್‌ಪಾಲ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ ಕುಲಾಲ ಆರೂರು ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಜಗದೀಶ ಆಚಾರ್ಯ ವಂದಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಮನೋಜ್ ಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT