ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಕೃಷ್ಣ ತುಲಾಭಾರ ಮಹೋತ್ಸವ 5ರಂದು

ರಥಬೀದಿಯಲ್ಲಿ ಕೃಷ್ಣನ ಉತ್ಸವ ಮೂರ್ತಿಗೆ ಸುವರ್ಣ ತುಲಾಭಾರ
Last Updated 25 ಡಿಸೆಂಬರ್ 2019, 9:46 IST
ಅಕ್ಷರ ಗಾತ್ರ

ಉಡುಪಿ: ಕೃಷ್ಣಮಠದ ರಥಬೀದಿಯಲ್ಲಿ ಜ.5ರಂದು ಸಂಜೆ 5ಕ್ಕೆ ಶ್ರೀಕೃಷ್ಣ ತುಲಾಭಾರ ಮಹೋತ್ವವ ನಡೆಯಲಿದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕೃಷ್ಣನ ತುಲಾಭಾರ ಮಹೋತ್ಸವ ನಡೆಯುತ್ತಿದೆ. ಅಂದು ರಥಬೀದಿಯಲ್ಲಿ ತಕ್ಕಡಿಯೊಳಗೆ ಕೃಷ್ಣನ ಉತ್ಸವ ಮೂರ್ತಿಯನ್ನು ಕೂರಿಸಿ, ಚಿನ್ನದಿಂದ ತುಲಾಭಾರ ನೆರವೇರಿಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಮಹಾಭಾರತ ಪ್ರವಚನ ಮಾಲಿಕೆ ಮುಕ್ತಾಯ ಹಂತ ತಲುಪಿದ್ದು ಡಿ.30 ರಂದು ಉತ್ತರಾಧಿ ಮಠದ ಶ್ರೀಗಳು ಮಂಗಲ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. 28 ರಿಂದ 30ರವರೆಗೆ ಸುಧಾ ಮಂಗಳ ನಡೆಯಲಿದೆ ಎಂದರು.

ಜ.2ರಂದು ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮಠದ ಸುಬ್ರಹ್ಮಣ್ಯನ ಸನ್ನಿಧಾನದಲ್ಲಿ ನಾಗಮಂಡಲ ನಡೆಯಲಿದೆ. 6ರಂದು ವೈಕುಂಠ ಏಕಾದಶಿ ಅಂಗವಾಗಿ ಜಾಗರ ಉತ್ಸವ ನಡೆಯಲಿದೆ. ಮೈಸೂರಿನ ರಾಮಚಂದ್ರಾಚಾರ್ ನೇತೃತ್ವದಲ್ಲಿ ಅಂದು ರಾತ್ರಿ 8 ರಿಂದ ಬೆಳಿಗ್ಗೆ 8ರವರೆಗೆ ಅಖಂಡ ಜಾಗರ ಉತ್ಸವ ನಡೆಯಲಿದೆ. ಪಲಿಮಾರು ಪರ್ಯಾಯ ಅವಧಿಯಲ್ಲಿ 50ನೇ ಏಕಾದಶಿ ಉತ್ಸವ ನಡೆಯುತ್ತಿರುವುದು ವಿಶೇಷ. 7ರಂದು ಜಾಗರ ಉತ್ಸವದ ಸಮಾರೋಪ ನಡೆಯಲಿದೆ ಎಂದು ಮಾಹಿತಿ ನೀಡಿದರು.

8ರಂದು ಪುರ ಪ್ರವೇಶ:

ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಜ.8ರಂದು ಅದಮಾರು ಮಠಾಧೀಶರ ಪುರ ಪ್ರವೇಶ ನಡೆಯಲಿದೆ. 9ರಂದು ಸಪ್ತೋತ್ಸವ ಆರಂಭವಾಗಲಿದ್ದು, 7 ದಿನ ಏಳು ಶಾಸ್ತ್ರಗಳ ಚಿಂತನೆ ನಡೆಯಲಿದೆ. 29ರಿಂದ 18 ದಿನಗಳ ಕಾಲ ನಿರಂತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಪಲಿಮಾರು ಶ್ರೀಗಳು ಮಾಹಿತಿ ನೀಡಿದರು.

ಬಂಗಾರದ ಕೊರತೆ:

ಸುವರ್ಣ ಗೋಪುರ ಸಮರ್ಪಣೆ ಯೋಜನೆಗೆ ನಿರೀಕ್ಷಿತ ಮಟ್ಟದಲ್ಲಿ ಭಕ್ತರಿಂದ ಬಂಗಾರದ ದೇಣಿಗೆ ಬಂದಿಲ್ಲ. ಸುಮಾರು 10 ಕೆ.ಜಿ ಕೊರತೆ ಬಂದಿದ್ದು, ಸಾಲರೂಪದಲ್ಲಿ ಪಡೆಯಲಾಗಿದೆ. ಅಂದು ಸುವರ್ಣ ಗೋಪುರಕ್ಕೆ ಚಿನ್ನವನ್ನು ಸಮರ್ಪಿಸದವರು ಕೃಷ್ಣ ತುಲಾಭಾರ ಮಹೋತ್ಸವದಲ್ಲಿ ಚಿನ್ನವನ್ನು ಸಮರ್ಪಿಸಬಹುದು ಎಂದು ಕೊರ್ಲಹಳ್ಳಿ ವೆಂಕಟೇಶಾಚಾರ್ಯ ತಿಳಿಸಿದರು.

ತುಲಾಭಾರದಿಂದ ಅನಿಷ್ಠ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಭಾಗವಹಿಸಬೇಕು. ಅಂದು ಅಷ್ಠಮಠಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT