ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ದಾಣದಲ್ಲಿ ಸ್ವಚ್ಛತೆ, ಸೇವೆಯಲ್ಲಿ ದಕ್ಷತೆ ಇರಲಿ

ಬೀಚ್, ಟೆಂಪಲ್ ಟೂರಿಸಂ ಅಭಿವೃದ್ಧಿಗೆ ಒತ್ತು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 11 ಏಪ್ರಿಲ್ 2022, 15:45 IST
ಅಕ್ಷರ ಗಾತ್ರ

ಉಡುಪಿ: ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಅಡ್ಡಿಯಾಗಿರುವ ಸಿಆರ್‌ಝೆಡ್‌ ನಿಯಮಾವಳಿಗಳನ್ನು ಬದಲಿಸುವ ಬಗ್ಗೆ ಕೇಂದ್ರ ಪರಿಸರ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಸಕಾರಾತ್ಮಕ ಸ್ಪಂದನ ದೊರೆತಿದೆ. ಕರಾವಳಿಯಲ್ಲಿ ಬೀಚ್ ಹಾಗೂ ಟೆಂಪಲ್ ಟೂರಿಸಂಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದಿಂದ ನಿರ್ಮಿಸಿರುವ ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಸಿಎಂ, ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆಗಳನ್ನು ನೀಡಬೇಕು, ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂಬ ಉದ್ದೇಶದಿಂದ ಸಾರಿಗೆ ಇಲಾಖೆ ಇದ್ದರೂ ಸಾರಿಗೆ ಸಂಸ್ಥೆಗಳನ್ನು ಸರ್ಕಾರ ರಚಿಸಿದೆ. ಜನರ ಸೇವೆಯೇ ಸಾರಿಗೆ ಸಂಸ್ಥೆಗಳ ಮುಖ್ಯ ಉದ್ದೇಶ ಎಂದರು.

ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿರುವ ಸಾರಿಗೆ ವ್ಯವಸ್ಥೆಗೂ, ಕರಾವಳಿ ಸಾರಿಗೆ ವ್ಯವಸ್ಥೆಗೂ ಬಹಳಷ್ಟು ವ್ಯತ್ಯಾಸವಿದ್ದು, ಅದಕ್ಕೆ ಅನುಗುಣವಾಗಿ ಇಲ್ಲಿನ ಅಧಿಕಾರಿಗಳು ಉತ್ತಮ ಹಾಗೂ ದಕ್ಷವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಸಾರ್ವಜನಿಕ ಬದುಕಿನಲ್ಲಿ ಹೇಗೆ ಪ್ರಾಮಾಣಿಕವಾಗಿ ಆಡಳಿತ ನಡೆಸುಬಹುದು ಎಂಬುದನ್ನು ತೋರಿಸಿಕೊಟ್ಟವರು ಡಾ.ವಿ.ಎಸ್‌.ಆಚಾರ್ಯರು. ಸ್ಥಳೀಯ ಸಂಸ್ಥೆ ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ ದಕ್ಷವಾಗಿ ಕಾರ್ಯ ನಿರ್ವಹಿಸಿರುವ ವಿ.ಎಸ್‌.ಆಚಾರ್ಯರ ಹೆಸರನ್ನು ಬಸ್ ನಿಲ್ದಾಣಕ್ಕೆ ಇಟ್ಟಿರುವುದು ಅತ್ಯಂತ ಸೂಕ್ತವಾಗಿದೆ. ಅವರಂತೆಯೇ ಸ್ವಚ್ಛ ಹಾಗೂ ದಕ್ಷವಾಗಿ ಬಸ್‌ ನಿಲ್ದಾಣವನ್ನು ಇಟ್ಟುಕೊಳ್ಳಬೇಕು. ಆಗಮಾತ್ರ ಅವರ ಹೆಸರಿಗೆ ಸಾರ್ಥಕತೆ ಬರಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸಾರಿಗೆ ಸೇವೆಯಲ್ಲಿ ಸಮಯ ಹಾಗೂ ಬದ್ಧತೆ ಮುಖ್ಯ. ಖಾಸಗಿಯವರಿಗಿಂತ ದಕ್ಷತೆ ಹಾಗೂ ನಿಷ್ಠೆಯಿಂದ ಸಾರಿಗೆ ಸಂಸ್ಥೆಗಳು ಸೇವೆ ಸಲ್ಲಿಸಬೇಕು. ಶಾಲಾ ಕಾಲೇಜು ಮಕ್ಕಳಿಗೆ, ಆಸ್ಪತ್ರೆಗಳಿಗೆ ಹೋಗುವವರಿಗೆ ಉತ್ತಮ ಸೇವೆ ನೀಡಬೇಕು. ಬಸ್ ನಿಲ್ದಾಣದಲ್ಲಿ ಎರಡು ಮಲ್ಟಿಫ್ಲೆಕ್ಸ್‌ಗಳ ಸ್ಥಾಪನೆಗೆ ಶೀಘ್ರ ನಿರ್ಣಯ ತೆಗೆದುಕೊಳ್ಳಲಾಗುವುದು. ಪಿಪಿಪಿ ಅಥವಾ ಬೇರೆ ಮಾದರಿಯಲ್ಲಿ ಮಲ್ಪಿಫ್ಲೆಕ್ಸ್‌ಗಳ ಸ್ಥಾಪನೆಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸಾರಿಗೆ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಹಿಂದೆ ವಜಾಗೊಂಡಿದ್ದ ನೌಕರರನ್ನು ಮರು ನೇಮಿಸಿಕೊಳ್ಳಲಾಗುತ್ತಿದೆ ಎಂದರು.

ಒಳಚರಂಡಿ ಯೋಜನೆ ಅನುಷ್ಠಾನ: ಸಿಎಂ

ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸರ್ಕಾರ ಆದ್ಯತೆ ನೀಡಲಿದೆ. ಈಗಾಗಲೇ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ನಂತರ ಪಿಪಿಪಿ ಮಾದರಿಯ ಮೆಡಿಕಲ್‌ ಕಾಲೇಜು ಕೂಡ ಸ್ಥಾಪನೆಯಾಗಲಿದೆ. 8 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆಗೆ ಡಿಪಿಆರ್‌ ತಯಾರಿಸಲು ನಿರ್ದೇಶನ ನೀಡಲಾಗಿದ್ದು, ವರದಿ ಬಂದ ಬಳಿಕ ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾಗಲಿವೆ. ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯನ್ನು ಸರ್ಕಾರದ ವಶಕ್ಕೆ ಪಡೆಯಲು ನಿರ್ಧರಿಸಲಾಗಿದ್ದು, 200 ಹಾಸಿಗೆ ಸಾಮರ್ಥ್ಯದ ಸುಸಜ್ಜಿತವಾದ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯ ಸೇವೆ ಜಿಲ್ಲೆಗೆ ಸಿಗಲಿದೆ. ಕುಡಿಯುವ ನೀರು ಯೋಜನೆಯೂ ಜಾರಿಯಾಗುತ್ತಿದೆ. ಒಳಚರಂಡಿ ಯೋಜನೆ ಅನುಷ್ಠಾನಕ್ಕೂ ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಸಾರಿಗೆ, ವಿದ್ಯುತ್‌ ಸಂಸ್ಥೆಗಳ ಪುನಶ್ಚೇತನ’

ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳ ಹಾಗೂ ವಿದ್ಯುತ್ ಸರಬರಾಜು ಕಂಪೆನಿಗಳ ಸ್ವಾವಲಂಬನೆ, ಪುನಶ್ಚೇತನ ಹಾಗೂ ಪರಿವರ್ತನೆಗೆ ಒತ್ತು ನೀಡಲು ಸಮಿತಿ ರಚಿಸಲಾಗಿದೆ. ಎರಡೂ ಇಲಾಖೆಗಳನ್ನು ಸರಿಪಡಿಸಿದರೆ ರಾಜ್ಯದ ಜನರಿಗೆ ಉತ್ತಮ ಸಾರಿಗೆ ಸೇವೆ ಹಾಗೂ ನಿರಂತರ ವಿದ್ಯುತ್ ಸೇವೆ ದೊರೆಯಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT