ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಕ್ಕೆ ಸುಬ್ರಹ್ಮಣ್ಯ: ಪೂಜಾಪದ್ಧತಿ ಬದಲಾವಣೆ ಸಲ್ಲದು’

ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿ ಒತ್ತಾಯ
Last Updated 25 ಫೆಬ್ರುವರಿ 2021, 14:55 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶೈವ ಸಂ‍ಪ್ರದಾಯದಂತೆ ಪೂಜೆ ನಡೆಯಬೇಕು ಎಂದು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ಸಮಿತಿ ಒತ್ತಾಯ ಮಾಡುತ್ತಿರುವುದು ಸರಿಯಲ್ಲ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆಯೇ ಪೂಜೆಗಳು ನಡೆಯಬೇಕು ಎಂದು ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿಯ ಪ್ರೊ.ಎ.ಹರಿದಾಸ ಭಟ್ಟ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಪಲಿಮಾರು ಮಠದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸುಬ್ರಹ್ಮಣ್ಯ ದೇಗುಲ ಶೈವ ದೇವಸ್ಥಾನವಾಗಿದ್ದು, ಶಿವರಾತ್ರಿಯ ದಿನ ಶೈವ ಪದ್ಧತಿಯಂತೆಯೇ ಪೂಜೆಗಳು ನಡೆಯಬೇಕು ಎಂದು ದೇವಸ್ಥಾನದ ಪ್ರಧಾನ ಅರ್ಚಕರಿಗೆ ಹಾಗೂ ಕಾರ್ಯ ನಿರ್ವಹಣಾಧಿಕಾರಿಗೆ ಸಮಿತಿಯು ಮನವಿ ಸಲ್ಲಿಸಿದೆ.

ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಹಿಂದಿನಿಂದಲೂ ನಿಶ್ಚಿತ ರೀತಿಯಲ್ಲಿ ಆಯಾ ಆಗಮಗಳ ಸಂಪ್ರದಾಯದಂತೆ ಪೂಜಾ ಪದ್ಧತಿ ನಡೆದುಕೊಂಡು ಬಂದಿವೆ. ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೂ ಅನಾದಿ ಕಾಲದಿಂದಲೂ ತಂತ್ರಸಾರ ಹಾಗೂ ವೈಖಾನಸ ಆಗಮದ ಸಂಪ್ರದಾಯಕ್ಕೆ ಬದ್ಧವಾಗಿ ಪೂಜೆ ನಡೆಯುತ್ತಿದೆ. ಮುಂದೆಯೂ ಇದೇರೀತಿ ನಡೆಯಬೇಕು. ಬದಲಾವಣೆಗೆ ಅವಕಾಶ ನೀಡಬಾರದು ಎಂದು ಹರಿದಾಸ ಭಟ್ಟ ಹೇಳಿದರು.

ಪೂಜಾ ಕ್ರಮ ಬದಲಾವಣೆ ವಿರೋಧಿಸಿ ಶಿವಳ್ಳಿ ಮಾಧ್ವ ಸಮಾಜದ ವಿದ್ವಾಂಸರು ಶೀಘ್ರ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ. ಸಮಾಜದಲ್ಲಿ ಬಿರುಕು ಸೃಷ್ಟಿಸುವಂತಹ ಇಂತಹ ಪ್ರಯತ್ನಗಳು ಸಲ್ಲದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿಗೂ ಮಾಧ್ವ ಸಮಾಜದ ಹಲವು ದೇವಸ್ಥಾನಗಳಲ್ಲಿ ಸ್ಮಾರ್ಥ ಹಾಗೂ ಶೈವ ಪದ್ಧತಿಯ ಪೂಜೆ ಅನುಸರಿಸಲಾಗುತ್ತಿದೆ. ಹಿಂದಿನಿಂದಲೂ ಪೂಜಾ ಪದ್ಧತಿ ಅನುಸರಿಸಿಕೊಂಡು ಬಂದಿರುವುದರಿಂದ ಮಾಧ್ವ ಸಮಾಜ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದರು.

ಸಮಿತಿಯ ಸಂಚಾಲಕ ಡಾ.ಎಸ್‌.ಆನಂದ ತೀರ್ಥ ಮಾತನಾಡಿ, ಪೂಜಾ ಕ್ರಮ ಬದಲಾವಣೆಗೆ ಕೆಲವರು ಅಷ್ಟಮಂಗಲ ಪ್ರಶ್ನೆಯ ವಿಚಾರ ಮುಂದಿಡುತ್ತಿದ್ದಾರೆ. ಪೂಜಾ ಪದ್ಧತಿಯಿಂದ ಭಕ್ತರಿಗೆ ಹಾಗೂ ಊರಿಗೆ ತೊಂದರೆಯಾದರೆ ಮಾತ್ರ ಬದಲಾವಣೆ ಚರ್ಚೆ ಮಾಡಬಹುದು. ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಪೂಜಾಕ್ರಮದಿಂದ ಭಕ್ತರು ಸಂತುಷ್ಟರಾಗಿದ್ದಾರೆ. ಪೂಜಾ ಫಲವೂ ಸಿಗುತ್ತಿದೆ. ಹೀಗಿರುವಾಗ ಪೂಜಾ ಪದ್ಧತಿ ಬದಲಾವಣೆ ಚರ್ಚೆ ಅಪ್ರಸ್ತುತ ಎಂದರು.

ಹಿತರಕ್ಷಣಾ ಸಮಿತಿ ಒತ್ತಾಯ ಏನು?

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶಿವ–ಪಾರ್ವತಿಯ ಪುತ್ರನಾದ ಸುಬ್ರಹ್ಮಣ್ಯ ದೇವರನ್ನು ಪ್ರಧಾನವಾಗಿ ಆರಾಧಿಸಲಾಗುತ್ತಿದೆ. ಉಮಾ ಮಹೇಶ್ವರ, ಕುಕ್ಕೆಲಿಂಗ, ಕಾಲಭೈರವ ದೇವರು ಪರಿವಾರ ದೇವರುಗಳಾಗಿವೆ. ಇದು ಶೈವ ದೇಗುಲವಾಗಿದ್ದು, ಶಿವನಿಗೆ ಪ್ರಿಯವಾದ ರೀತಿಯಲ್ಲಿ ಪೂಜೆಗಳು ನಡೆಯಬೇಕು. ಮಹಾ ಶಿವರಾತ್ರಿ ದಿನ ಭಕ್ತರ ಆಶಯದಂತೆ ಪೂಜೆ, ಅರ್ಚನೆ, ಅಭಿಷೇಕ, ಅಹೋರಾತ್ರಿ ಪಾರಾಯಣ, ಶಿವರಾತ್ರಿ ಆಚರಣೆ ನಡೆಯಬೇಕು. ಭಕ್ತರ ಆಶಯದಂತೆ ಪೂಜೆ ನಡೆಯಬೇಕೆ ವಿನಾ ಅರ್ಚಕರ ಸ್ವಹಿತದ ಪೂಜೆ ನಡೆಯಬಾರದು.

ಪ್ರಧಾನ ಅರ್ಚಕರ (ಪ್ರಭಾರ) ನಿಲುವು

ಜಿಲ್ಲಾಧಿಕಾರಿಯಿಂದ ಅನುಮೋದಿಸಲ್ಪಟ್ಟ ದೇವಳದ ದಿಟ್ಟಂ ಪ್ರಕಾರ ಹಾಗೂ ತಂತ್ರಸಾರಾಗಮ, ವೈಖಾನಸಾಗಮ ಮಾದರಿಯಲ್ಲಿಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಕ್ರಮ ಅನುಸರಿಸಲಾಗುತ್ತಿದೆ. ಮಹಾಶಿವರಾತ್ರಿಯ ದಿನವೂ ಇದೇ ಪದ್ಧತಿ ಅನುಸರಿಸಿಕೊಂಡು ಬರಲಾಗುತ್ತಿದೆ. ಭಕ್ತರು ತಿಳಿಸಿರುವಂತೆ ದೇವಸ್ಥಾನದಲ್ಲಿ ಶೈವಾಗಮ ರೀತಿಯ ಪೂಜಾ ವಿಧಾನ ನಡೆಯುತ್ತಿಲ್ಲ. ಹಿಂದಿನ ಪದ್ಧತಿಯಂತೆಯೇ ಪೂಜಾ ಕೈಂಕರ್ಯಗಳು ನೆರವೇರಿಸಲು ಅನುಮತಿ ನೀಡಬೇಕು, ಇದರಲ್ಲಿ ಹಸ್ತಕ್ಷೇಪ ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT