ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಸತಿ ಶಾಲೆ: ಆತಂಕ ನಿವಾರಣೆ ಆಶಯ

ಸೌಡದಲ್ಲಿ ನಿರ್ಮಾಣ ಕಾಮಗಾರಿ ನಡೆಯುವ ಪ್ರದೇಶಕ್ಕೆ ಮಾಜಿ ಶಾಸಕ ಗೋಪಾಲ ಪೂಜಾರಿ ಭೇಟಿ
Published : 18 ಆಗಸ್ಟ್ 2024, 6:25 IST
Last Updated : 18 ಆಗಸ್ಟ್ 2024, 6:25 IST
ಫಾಲೋ ಮಾಡಿ
Comments

ಕುಂದಾಪುರ: ತಾಲ್ಲೂಕಿನ ಶಂಕರನಾರಾಯಣ ಸಮೀಪದ ಸೌಡದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮಾದರಿ ವಸತಿ ಶಾಲೆ ಪ್ರದೇಶಕ್ಕೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಈಚೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಜನೆಯ ಅನುಷ್ಠಾನ ಅವೈಜ್ಞಾನಿಕವಾಗಿ ನಡೆಯಬಾರದು. ಇದರ ಸಾಧಕ ಬಾಧಕಗಳನ್ನು ಮನಗಂಡು ಕಾಮಗಾರಿ ನಡೆಸುವಂತೆಯೂ ಗುಡ್ಡ ಕುಸಿತದ ಆತಂಕ ಇದ್ದರೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದರು.

ಕಟ್ಟಡ ನಿರ್ಮಾಣಕ್ಕೆ ಬೆಟ್ಟ–ಗುಡ್ಡಗಳಿರುವ ಈ ಜಾಗ ಗುರುತಿಸಿರುವುದೇ ಸರಿಯಲ್ಲ ಎಂಬ ಅಭಿಪ್ರಾಯವಿದೆ. ಜಾಗ ನಿಗದಿ ಮಾಡುವ ಮೊದಲು ಮಣ್ಣಿನ ಗುಟಮಟ್ಟ ಪರೀಕ್ಷೆ ನಡೆಸಿರುವ ಕುರಿತು ಅನುಮಾನವಿದೆ. ಅಪಾಯ ಇಲ್ಲ ಎಂದು ಮನವರಿಕೆ ಮಾಡಿದರೆ ಮಾತ್ರ ಸ್ಥಳೀಯರು ಕಾಮಗಾರಿ ಮುಂದುವರಿಸಲು ಅವಕಾಶ ನೀಡುತ್ತಾರೆ ಎಂಬುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ವೈಜ್ಞಾನಿಕ ಸಲಹೆ ಪಡೆದುಕೊಳ್ಳದೆ ಕಾಮಗಾರಿ ಮುಂದುವರಿಸಿ ಸಮಸ್ಯೆ ಆದರೆ ₹ 24 ಕೋಟಿ ಪೋಲಾಗಲಿದೆ. ಈಗ ಕಾಮಗಾರಿ ನಡೆಯುತ್ತಿರುವುದನ್ನು ಗಮನಿಸಿದರೆ ಯೋಜನಾ ವೆಚ್ಚ ಹೆಚ್ಚಾಗುವ ಸಾಧ್ಯಗೆ ಕಾಣುತ್ತಿದೆ ಎಂದ ಅವರು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಳ್ಳುವಂತೆ ಗುತ್ತಿಗೆ ಕಂಪೆನಿಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ವಂಡ್ಸೆ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್‌ ಕುಮಾರ ಶೆಟ್ಟಿ ಕಾವ್ರಾಡಿ ಹಾಗೂ ಶಂಕರನಾರಾಯಣ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಣ್ಣು ತೆಗೆದು ನೆಲ ಸಮತಟ್ಟುಗೊಳಿಸಿ ಕಾಮಗಾರಿ ಆರಂಭಿಸಬೇಕಾಗಿತ್ತು. ಹಾಗೆ ಮಾಡದೆ ಮಣ್ಣು ಕುಸಿತ ತಡೆಯಲು ಗೋಡೆಯನ್ನು ನಿರ್ಮಿಸಲಾಗುತ್ತಿದೆ. ಒತ್ತಡದಿಂದ ಅದು ಕುಸಿಯುವ ಭೀತಿ ಇದೆ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ, ಎಸ್‌ಸಿ ಘಟಕದ ಶೇಷು ನಾಯ್ಕ, ತಾ.ಪಂ ಮಾಜಿ ಸದಸ್ಯ ವಾಸುದೇವ ಪೈ ಸಿದ್ದಾಪುರ, ಸಂಪಿಗೇಡಿ ಸಂಜೀವ ಶೆಟ್ಟಿ, ಶಾಡಿಗುಂಡಿ ರಾಜೀವ ಶೆಟ್ಟಿ, ಶ್ರೀನಿವಾಸ ಸೌಡ, ಗುರುದತ್ ಶೇಟ್, ಸುಧಾಕರ ಶೆಟ್ಟಿ ಉಳ್ಳೂರು, ರಾಘವೇಂದ್ರ ಕೊಠಾರಿ, ಎ.ಪಿ.ಶೆಟ್ಟಿ, ರಾಮಚಂದ್ರ ದೇವಾಡಿಗ, ಮಂಜುನಾಥ ಶೆಟ್ಟಿ ಗುಡಿಬೆಟ್ಟು, ಬಾಲಚಂದ್ರ ಕುಲಾಲ್, ಅನಿತಾ ಶೆಟ್ಟಿ, ಸಂತೋಷ್ ಶೆಟ್ಟಿ ಹೊಸಂಗಡಿ ಇದ್ದರು.

ಕಳೆದ ವರ್ಷ ಕಾಮಗಾರಿ ಆರಂಭ

ಈ ಯೋಜನೆ 2015-16ರಲ್ಲಿ ಮಂಜೂರಾಗಿದ್ದರೂ ಕಟ್ಟಡಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ಇದ್ದ ಕಾರಣ  ಗುದ್ದಲಿ ಪೂಜೆಗೆ ಸಮಯ ಆಗಿರಲಿಲ್ಲ. ಕಳೆದ ವರ್ಷ ಜನಪ್ರತಿನಿಧಿಗಳು ಮುತುರ್ಜಿ ವಹಿಸಿ ರಾಜಿ ಪಂಚಾಯಿತಿ ಮಾಡಿ ಮಾರ್ಚ್‌ನಲ್ಲಿ ಶಿಲಾನ್ಯಾಸ ಆಗಿತ್ತು. ಮಣ್ಣು ಕುಸಿಯದಂತೆ ನಿರ್ಮಿಸಿರುವ ತಡೆಗೋಡೆಗೆ ಹಾನಿಯಾಗಿದ್ದು ಗುಡ್ಡ ಜರಿದು ಮಣ್ಣಿನ ಒತ್ತಡ ಹೆಚ್ಚಾದರೆ ತಡೆಗೋಡೆ ಮುರಿಯುವ ಅಪಾಯವಿದೆ ಎನ್ನುವುದು ಸ್ಥಳೀಯರ ಆತಂಕ. ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಅನಾಹುತ ಘಟಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಗುತ್ತಿಗೆ ಕಂಪನಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT