ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಾಪುರ | ಸಮುದಾಯ ತಿಂಗಳ ಓದು ‘ಬುದ್ಧನ ಬೆಳಕಿನಲ್ಲಿ’

Published 28 ಮೇ 2024, 14:46 IST
Last Updated 28 ಮೇ 2024, 14:46 IST
ಅಕ್ಷರ ಗಾತ್ರ

ಕುಂದಾಪುರ: ಸಾಮಾನ್ಯವಾಗಿ ಸಿದ್ದಾರ್ಥ ನಡುರಾತ್ರಿಯಲ್ಲಿ ತನ್ನ ಕಂದ ರಾಹುಲ, ಪತ್ನಿ ಯಶೋದರೆಯನ್ನು ತೊರೆದು ಯಾರಿಗೂ ಹೇಳದೆ ಅರಮನೆಯಿಂದ ಹೋದ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಇದೆ ಎಂದು ಸಂಬುದ್ಧ ಟ್ರಸ್ಟ್ ಕಾರ್ಯದರ್ಶಿ, ವಕೀಲ ಮಂಜುನಾಥ್ ವಿ. ಹೇಳಿದರು.‌

ಇಲ್ಲಿನ ಸಮುದಾಯ ಕುಂದಾಪುರ ಸಂಘಟನೆ ಆಶ್ರಯದಲ್ಲಿ ಪ್ರತಿ ತಿಂಗಳ ಕಾರ್ಯಕ್ರಮ ಮತ್ತು ಬುದ್ಧ ಪೂರ್ಣಿಮೆ ಪ್ರಯುಕ್ತ ಆಯೋಜಿಸಲಾದ ‘ಬುದ್ಧನ ಬೆಳಕಿನಲ್ಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯದಿಂದಲೂ ಕರುಣೆ, ಅನುಕಂಪ, ಮಾನವೀಯ ಗುಣಗಳೊಂದಿಗೆ ಸತ್ಯ, ಅಹಿಂಸೆ, ನ್ಯಾಯದ ಪರವಾಗಿ ಪರಿಕಲ್ಪನೆಗಳನ್ನು ರೂಡಿಸಿಕೊಂಡಿದ್ದ ಸಿದ್ದಾರ್ಥ, ದೇಶಾಂತರ ಹೋಗಲು ಕಾರಣವಾದ ಅಂಶವೆಂದರೆ ರೋಹಿಣಿ ನದಿಯ ವಿವಾದದಲ್ಲಿ ಶಾಕ್ಯ ಸಂಘದ ನಿಯಮದಂತೆ ದೇಶಾಂತರ ಹೋಗುವ ಶಿಕ್ಷೆ ಆಯ್ದುಕೊಂಡಿದ್ದ. ಹಾಗಾಗಿ ಹೆಂಡತಿ, ಕುಟುಂಬದ ಸದಸ್ಯರ ಗಮನಕ್ಕೂ ತಂದು, ಎಲ್ಲರನ್ನು ಒಪ್ಪಿಸಿ ಹಾಡು ಹಗಲಿನಲ್ಲೇ ದೇಶಾಂತರ ಹೊರಡುವ ತೀರ್ಮಾನ ಕೈಗೊಳ್ಳುತ್ತಾನೆ. ಈ ರೀತಿ ಸತ್ಯಕ್ಕೆ ವಿರುದ್ಧವಾಗಿ ಕನ್ನಡ ಸಾಹಿತ್ಯದಲ್ಲಿ ಅನೇಕ ತಪ್ಪು ಸಂದೇಶ ನೀಡುವ ಸಂಕಥನಗಳು ಹುಟ್ಟಿಕೊಂಡಿವೆ. ಅದೇ ಸತ್ಯವೆಂದು ನಂಬಿದವರು ಇದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಬುದ್ಧನ ಪಂಚಶೀಲ ತತ್ವ, ಅಷ್ಟಾಂಗ ಮಾರ್ಗ, ಬೌದ್ಧ ಚಿಂತನ ವಿಧಾನಗಳ ಕುರಿತು ವಿವರಿಸಿದರು.

ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ. ದಿನೇಶ್ ಹೆಗ್ಡೆ ಅವರು ಸಂವಿಧಾನ ಶಿಲ್ಪಿ ಬಿ.ಆರ್‌.ಅಂಬೇಡ್ಕರ್ ಅವರ ಮೇಲೆ ಬೌದ್ಧ ಚಿಂತನೆಗಳ ಪ್ರಭಾವಗಳ ಬಗ್ಗೆ ವಿವರಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ರೇಖಾ ಬನ್ನಾಡಿ ‘ಬುದ್ಧನ ಚಿಂತನೆಗಳ ಪ್ರಸ್ತುತತೆ’ ಕುರಿತು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮುದಾಯದ ಅಧ್ಯಕ್ಷ ಸದಾನಂದ ಬೈಂದೂರು, ನಿಧನರಾದ ಸಾಹಿತಿ ಲಕ್ಕೂರು ಆನಂದ, ಆರ್. ಜಯಕುಮಾರ್, ಪರಿಸರ ಪ್ರೇಮಿ ಡಾ.ಎಚ್.ಎಸ್.ಮಲ್ಲಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಗಣೇಶ್ ಶೆಟ್ಟಿ, ಚಿನ್ನ ಗಂಗೇರ, ಅವಂತಿ ಬುದ್ಧನ ನಲ್ನುಡಿಗಳನ್ನು ವಾಚಿಸಿದರು.

ಪ್ರಾಧ್ಯಾಪಕರು, ಶಿಕ್ಷಕರು, ವಕೀಲರು, ವೈದ್ಯರು, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸದಸ್ಯರು, ಸಂಬುದ್ಧ ಟ್ರಸ್ಟ್ ಪದಾಧಿಕಾರಿಗಳು, ಸಮುದಾಯದ ಸಂಘಟನೆ ಸದಸ್ಯರು ಇದ್ದರು. ಪುಸ್ತಕ ಸರಸ್ವತಿ ವತಿಯಿಂದ ಬುದ್ಧನ ಕುರಿತ0 ಪುಸ್ತಕಗಳ ಪ್ರದರ್ಶನ, ಮಾರಾಟ ವ್ಯವಸ್ಥೆಯನ್ನು ತಿಮ್ಮಪ್ಪ ಗುಲ್ವಾಡಿ ನಿರ್ವಹಿಸಿದ್ದರು. ಬಾಲಕೃಷ್ಣ ಕೆ.ಎಂ, ವಿಕ್ರಂ ಕೆ.ಎಸ್. ಸಹಕರಿಸಿದರು. ಸಮುದಾಯದ ಕಾರ್ಯದರ್ಶಿ ವಾಸುದೇವ ಗಂಗೇರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT