ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಸಾಗಾಟ: ಕಾನೂನು ಕೈಗೆತ್ತಿಕೊಳ್ಳಬಾರದು

ಶಾಂತಿಯುತ ಬಕ್ರೀದ್ ಆಚರಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಮನವಿ
Last Updated 29 ಜುಲೈ 2020, 16:11 IST
ಅಕ್ಷರ ಗಾತ್ರ

ಉಡುಪಿ: ಬಕ್ರೀದ್ ಹಬ್ಬದ ಸಂದರ್ಭ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರಾಣಿಗಳನ್ನು ಸಾಗಾಟ ಮಾಡುವುದು ಕಂಡುಬಂದರೆ, ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ.

ಬಕ್ರೀದ್ ಸಂದರ್ಭ ಪ್ರಾಣಿಗಳ ಅನಧಿಕೃತ ಸಾಗಣೆ ಹಾಗೂ ವಧೆ ತಡೆ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಅಧಿಕೃತ ಜಾನುವಾರು ಸಾಗಾಟ ಮಾಡುವವರು ಪಶು ಸಂಗೋಪನಾ ಇಲಾಖೆ ನಿಗದಿಪಡಿಸಿದ ನಮೂನೆಯಲ್ಲಿ ಸ್ಥಳೀಯ ಸಂಸ್ಥೆಗಳ ಮತ್ತು ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ಅನಧಿಕೃತವಾಗಿ ಜಾನುವಾರು ಸಾಗಾಟ ಮಾಡುವಾಗ ವಶಪಡಿಸಿಕೊಂಡ ಜಾನುವಾರನ್ನು ಬಿಡಲು ಹತ್ತಿರದ ಗೋಶಾಲೆಗಳನ್ನು ಗುರುತಿಸುವಂತೆ ಪೊಲೀಸರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ತಹಶೀಲ್ದಾರರು ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಅಗತ್ಯವಿದ್ದಲ್ಲಿ ಶಾಂತಿ ಸಭೆಗಳನ್ನು ನಡೆಸಿ, ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಎಸ್‌ಪಿ ವಿಷ್ಣುವರ್ಧನ್ ಮಾತನಾಡಿ, ‘ಜಿಲ್ಲೆಯಲ್ಲಿ ರಾತ್ರಿ ಹಾಗೂ ಹಗಲಿನಲ್ಲಿ ತಪಾಸಣಾ ಕೇಂದ್ರಗಳನ್ನು ಹಾಕಲಾಗಿದ್ದು, ಜಾಗರೂಕತೆಯಿಂದ ಇರುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಉಪ ವಲಯ ಮಟ್ಟದಲ್ಲಿ ಪಿಎಸ್‌ಐ ಒಳಗೊಂಡ ವಿಶೇಷ ತಪಾಸಣಾ ತಂಡ ಅಕ್ರಮ ಜಾನುವಾರು ಸಾಗಾಟದ ಬಗ್ಗೆ ನಿಗಾ ವಹಿಸಲಿದೆ ಎಂದರು.

ಸಿಆರ್‌ಪಿಸಿ ಸೆಕ್ಷನ್ 107 ಅಡಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಬಂಧಕ ಕೇಸ್‌ಗಳನ್ನು ದಾಖಲಿಸಲಾಗಿದೆ. ಹಳೆಯ ಆರೋಪಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ, ಅವರ ಮೇಲೆ ನಿಗಾವಹಿಸಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಧಾರ್ಮಿಕ ಮುಖಂಡರೊಡನೆ ಸ್ನೇಹ ಸೌಹಾರ್ದ ಸಭೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಎಎಸ್‌ಪಿ ಕುಮಾರ ಚಂದ್ರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT