ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ತತ್ವಜ್ಞಾನ, ಜ್ಞಾನ ಕಲಿಕೆಯ ಕೇಂದ್ರವಾಗಲಿ- ಬಸವರಾಜ ಬೊಮ್ಮಾಯಿ

Last Updated 11 ಏಪ್ರಿಲ್ 2022, 16:12 IST
ಅಕ್ಷರ ಗಾತ್ರ

ಉಡುಪಿ: ಮನುಷ್ಯ ಸಾಮಾಜಿಕ ಜೀವಿಯಾಗಿ ಬದಲಾದ ನಂತರ ಜ್ಞಾನ ಸಂಪಾದಿಸಿದ. ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನ ಸಂಪಾದಿಸಿದ. ಹೀಗೆ, ಪ್ರತಿ ಬದಲಾವಣೆಯೂ ಬದುಕಿನ ಆಯಾಮಗಳನ್ನು ಬದಲಿಸುತ್ತಾ ಹೋಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಜ್ಜರಕಾಡಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ, ಬನ್ನಂಜೆ ಗೋವಿಂದಾಚಾರ್ಯರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಸಿಎಂ, ‘ತತ್ವಜ್ಞಾನ ಮನುಷ್ಯನ ಗುಣಧರ್ಮಗಳನ್ನು ರೂಪಿಸುವಂಥದ್ದು. ನ್ಯಾಯ, ನೀತಿ, ಧರ್ಮಗಳ ಪಾಲನೆ, ಸರಿ–ತಪ್ಪುಗಳ ಮಂಥನ, ಪಾಪ–ಪುಣ್ಯಗಳ ಗಳಿಕೆಯೇ ತತ್ವಜ್ಞಾನ ಎಂದರು.

ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಹೇಳಿಕೊಡುವುದೇ ತತ್ವಜ್ಞಾನ. ತತ್ವಜ್ಞಾನ ಹಾಗೂ ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತತ್ವಜ್ಞಾನ ವಿಜ್ಞಾನ, ತತ್ವಜ್ಞಾನಕ್ಕೆ ವಿಜ್ಞಾನ ಸ್ಫೂರ್ತಿ ಕೊಡುತ್ತದೆ. ಎಲ್ಲ ವಿಜ್ಞಾನಿಗಳೂ ತತ್ವಜ್ಞಾನಿಗಳಾಗಿರುವುದು ಇದಕ್ಕೆ ಸಾಕ್ಷಿ ಎಂದರು.

ಚಿಂತನೆಗಳಿಂದ ತರ್ಕ, ತರ್ಕದಿಂದ ಸರಿ ತಪ್ಪುಗಳ ಅರಿವಾಗುತ್ತದೆ. ತತ್ವಜ್ಞಾನ ಹಾಗೂ ವಿದ್ಯೆಯಲ್ಲಿ ಪಾಂಡಿತ್ಯ ಪಡೆದ ಪದ್ಮಶ್ರೀ ಡಾ.ಬನ್ನಂಜೆ ಗೋವಿಂದಾಚಾರ್ಯ ಅವರ ಹೆಸರನ್ನು ಗ್ರಂಥಾಲಯಕ್ಕೆ ಇರಿಸಿರುವುದು ಉತ್ತಮ ಕಾರ್ಯ. ತತ್ವಜ್ಞಾನ ಹಾಗೂ ವಿಜ್ಞಾನವನ್ನು ಕಲಿಸುವ ಕೆಲಸ ಗ್ರಂಥಾಲಯದಲ್ಲಿ ನಡೆಯಲಿ. ಡಿಜಿಟಲ್ ಲೈಬ್ರರಿಯಲ್ಲಿ ಕಾಲಕ್ಕೆ ತಕ್ಕಂತೆ ತಂತ್ರಾಂಶಗಳ ಬದಲಾವಣೆಯಾಗಲಿ ಎಂದು ಆಶಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಯಲು ಪ್ರತ್ಯೇಕ ಡಿಜಿಟಲ್ ವಿಭಾಗ, ಮಕ್ಕಳಿಗಾಗಿ ವಿಶೇಷ ವಿಭಾಗ, ತತ್ವಶಾಸ್ತ್ರದ ಅಧ್ಯಯನಕ್ಕೆ ಒತ್ತು ಹೀಗೆ ಹತ್ತು ಹಲವು ಚಟುವಟಿಕೆಗಳಿಗೆ ಗ್ರಂಥಾಲಯದಲ್ಲಿ ಅವಕಾಶ ನೀಡಿರುವುದು ಗಮನಿಸಿದರೆ, ಕ್ರಿಯಾಶೀಲವಾಗಿಯೂ ಗ್ರಂಥಾಲಯವನ್ನು ನಿರ್ಮಿಸಬಹುದು ಎಂಬುದನ್ನು ಸಾಬೀತುಪಡಿಸಿದಂತಾಗಿದೆ ಎಂದು ಶ್ಲಾಘಿಸಿದರು.

ಕರಾವಳಿ ಭಾಗದಲ್ಲಿ ಉದ್ಯಮಶೀಲತೆ ಇದ್ದು, ಆಡಳಿತ ಸೇವೆಗೆ ಬರುವವರ ಸಂಖ್ಯೆ ಕಡಿಮೆ ಇದೆ. ನಾಡು ಕಟ್ಟಲು ಬುದ್ಧಿವಂತರು, ಪ್ರಮಾಣಿಕರ ಅಗತ್ಯವಿದ್ದು, ಕರಾವಳಿಗರು ಆಡಳಿತ ವರ್ಗಕ್ಕೆ ಬರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಬಜೆಟ್‍ನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪಠ್ಯಕ್ರಮ ಪ್ರಶ್ನೆಪತ್ರಿಕೆ ವ್ಯವಸ್ಥೆಯಿರುವ ‘ಮುಖ್ಯಮಂತ್ರಿ ಮಾರ್ಗದರ್ಶಿ’ಯನ್ನು ಗ್ರಂಥಾಲಯದಲ್ಲಿ ಬಳಸಿಕೊಳ್ಳಬೇಕು. ಎಲ್ಲ ಮಕ್ಕಳಿಗೂ ಇದರ ಲಾಭ ಸಿಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಯುವಕರು ದೇಶ, ನಾಡು, ಬದುಕಿನ ಬಗ್ಗೆ ಆದರ್ಶಗಳನ್ನು ತುಂಬಿಕೊಂಡಿದ್ದು, ಆದರ್ಶಗಳು ದಾರಿದೀಪವಾಗಲಿವೆ. ಸಾಧನೆಗಳು ಹಾಗೂ ಅಸ್ತಿತ್ವದ ಮೇಲೆ ನಂಬಿಕೆಯಿಟ್ಟಾಗ ಜಗತ್ತನ್ನು ಗೆಲ್ಲಬಹುದು' ಎಂದು ಮುಖ್ಯಮಂತ್ರಿ ಬೊಮ್ಮಾಯಿ ಯುವಕರಿಗೆ ಕಿವಿ ಮಾತು ಹೇಳಿದರು.‌

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ ತುಳುನಾಡಿನ ಶೈಲಿಯಲ್ಲಿ ಗ್ರಂಥಾಲಯ ನಿರ್ಮಾಣವಾಗಿದ್ದು, ಶಾಂತ ಹಾಗೂ ಸುಂದರ ಪರಿಸರದಲ್ಲಿ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಗ್ರಂಥಾಲಯ ನಿರ್ಮಾಣವಾಗಿದೆ ಎಂದರು.

ಮಠಗಳಿಗೆ ಸೀಮಿತವಾಗಿದ್ದ ತತ್ವಜ್ಞಾನವನ್ನು ಶ್ರೀಸಾಮಾನ್ಯನಿಗೂ ಮುಟ್ಟಿಸಿದ ಹಾಗೂ ಜಗತ್ತಿಗೆ ಪಸರಿಸಿದ ಕೀರ್ತಿ ಬನ್ನಂಜೆ ಗೋವಿಂದಾಚಾರ್ಯರಿಗೆ ಸಲ್ಲುತ್ತದೆ. ಅವರ ಹೆಸರನ್ನು ಗ್ರಂಥಾಲಯಕ್ಕೆ ಇಟ್ಟಿರುವುದು ಶ್ಲಾಘನೀಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಊಟಕ್ಕೆ ತೃಪ್ತಿ ಇದೆ, ಆದರೆ, ಜ್ಞಾನ ಸಂಪಾದನೆಗೆ ತೃಪ್ತಿ ಇಲ್ಲ. ಜ್ಞಾನ ಸಂಪಾದನೆಗೆ ಗ್ರಂಥಾಲಯಗಳು ಬಹಳ ಮುಖ್ಯ. ಬನ್ನಂಜೆ ಗೋವಿಂದಾಚಾರ್ಯರ ಬದುಕೇ ಗ್ರಂಥಾಲಯವಿದ್ದಂತೆ ಎಂದು ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ವಿಧಾನಪರಿಷತ್ ಶಾಸಕ ಮಂಜುನಾಥ ಭಂಡಾರಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಸಿಇಒ ಡಾ. ನವೀನ್ ಭಟ್ ವೈ, ಎಸ್‌ಪಿ ವಿಷ್ಣುವರ್ಧನ್, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ, ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಐ.ನಳಿನಿ ಬನ್ನಂಜೆ ಗೋವಿಂದಾಚಾರ್ಯರ ಪುತ್ರ ವಿನಯ ಭೂಷಣ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT