ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಸದ್ದು ಮಾಡಿದ ಮಾನಸಿ‌ ಹಾಡು

Last Updated 24 ಆಗಸ್ಟ್ 2020, 14:55 IST
ಅಕ್ಷರ ಗಾತ್ರ

‘ಏನಿ ಅದ್ಭುತವೇ ಗೆಳತಿ’ ಗೀತೆಯ ಭಾವಾಭಿನಯದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದಉಡುಪಿಯ ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ದಿ.ಮುಂಡಾಜೆ ರಾಮಚಂದ್ರ ಭಟ್‌ ಅವರುಕನ್ನಡ ವರ್ಣಮಾಲೆಯ ಸ್ವರಾಕ್ಷರಗಳಿಂದ ರಚಿಸಿರುವ ಗಣಪ‍ತಿಯ ಕುರಿತ ಶಿಶುಗೀತೆಗೆ ಅದ್ಭುತ ಭಾವ ತುಂಬಿ ಪ್ರಸ್ತುತಪಡಿಸಿರುವ ಮಾನಸಿ ಸುಧೀರ್ ವಿಡಿಯೊ ವೈರಲ್‌ ಆಗಿದೆ.

ಗಣೇಶ ಹಬ್ಬದ ದಿನವೇ ಬಿಡುಗಡೆಯಾಗಿರುವ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಕವಯತ್ರಿ ಎಸ್‌.ಅಭಿಲಾಷಾ ರಚಿಸಿರುವ ‘ನನ್ನವ್ವ ಗೌರಮ್ಮ ಬಿಡುಬಿಡು ಮುನಿಸನ್ನ’ ಎಂಬ ಪಾರ್ವತಿ ಹಾಗೂ ಗಣೇಶನ ನಡುವಿನ ಸಂಭಾಷಣೆ ರೂಪದ ಹಾಡಿಗೂ ಭಾವತುಂಬಿದ್ದಾರೆ ಮಾನಸಿ ಸುಧೀರ್. ಬಾಲ ಗಣೇಶನ ಪಾತ್ರದಲ್ಲಿ ಪುತ್ರಿ ಸುರಭಿ ಸುಧೀರ್‌ ಅಭಿನಯವೂ ಗಮನ ಸೆಳೆಯುತ್ತದೆ.

ಹಾಡಿನ ಸಾಹಿತ್ಯಕ್ಕೆ ಕೆ.ಮುರಳೀಧರ ಸಂಗೀತ ನೀಡಿದ್ದು, ವಿಡಿಯೊ ಚಿತ್ರೀಕರಣಕ್ಕೆ ಪತಿ ಸುಧೀರ್ ರಾವ್‌ ಸಾಥ್ ನೀಡಿದ್ದಾರೆ. ಈ ವಿಡಿಯೊ ಕೂಡ ಎಲ್ಲೆಡೆ ಸದ್ದು ಮಾಡಿದೆ.

ಲಾಕ್‌ಡೌನ್ ಸಂದರ್ಭ ಹೊಸತನದ ಪ್ರಯೋಗದ ಭಾಗವಾಗಿ ಹಿರಿಯ ಸಾಹಿತಿಗಳ ಹಾಗೂ ಗೀತ ರಚನೆಕಾರರ ಹಾಡುಗಳಿಗೆ ಅಭಿನಯದ ಮೂಲಕ ಪ್ರಸ್ತುತಪಡಿಸುವ ವಿಭಿನ್ನ ಪ್ರಯೋಗಕ್ಕೆ ಕೈಹಾಕಿದ್ದರು ಮಾನಸಿ ಸುಧೀರ್. ಗುರುಗಳಾದ ಗುರುರಾಜ ಮಾರ್ಪಳ್ಳಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಗೀತೆಗಳಿಗೆ ಅಭಿನಯಿಸಿ ತಮ್ಮ ಯೂಟ್ಯೂಬ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು.

ಮಾನಸಿ ಅವರ ‘ಏನೀ ಗೆಳತಿ, ಅದ್ಭುತವೇ’ ಹಾಡು ಅತಿ ಹೆಚ್ಚು ಜನಮನ್ನಣೆ ಪಡೆದಿತ್ತು. ಲಕ್ಷಾಂತರ ಮಂದಿ ವಿಡಿಯೊ ವೀಕ್ಷಿಸಿ ಬೆಂಬಲ ನೀಡಿದ್ದರು.

ವಿದುಷಿ ಮಾನಸಿ ಸುಧೀರ್ ಭರತನಾಟ್ಯ ಕಲಾವಿದೆ. ಉಡುಪಿಯಲ್ಲಿ ನೃತ್ಯ ನಿಕೇತನ ಕೊಡವೂರು ಸಂಸ್ಥೆಯನ್ನು ಪತಿ ಸುಧೀರ್ ಅವರೊಂದಿಗೆ ಮುನ್ನಡೆಸುತ್ತಿದ್ದಾರೆ.

ಮೆಚ್ಚುಗೆ ಸಿಕ್ಕಿತು

ಗೌರಿಹಬ್ಬದ ದಿನ ಪರಿಚಿತರೊಬ್ಬರು ವಾಟ್ಸ್‌ ಆ್ಯಪ್‌ಗೆ ಕಳುಹಿಸಿದ ಶಿಶುಗೀತೆಗೆ ಅಭಿನಯಿಸುವ ಮನಸ್ಸಾಗಿ, ಗುರುಗಳಾದ ಗುರುರಾಜ ಮಾರ್ಪಳ್ಳಿ ಅವರಿಗೆ ಸಂಗೀತ ಸಂಯೋಜಿಸುವಂತೆ ಮನವಿ ಮಾಡಿದೆ. ಐದೇ ನಿಮಿಷದಲ್ಲಿ ಹಾಡು ಸಂಯೋಜಿಸಿದರು. ಅದೇ ದಿನ ಚಿತ್ರೀಕರಿಸಿ ಜಾಲತಾಣಗಳಿಗೆ ಅಪ್‌ಲೋಡ್‌ ಕೂಡ ಮಾಡಿದೆ. ಮುಖ್ಯವಾಗಿ ಮೊದಲು ಶಿಶುಗೀತೆ ರಚಿಸಿದ್ದು ಯಾರು ಎಂಬುದು ತಿಳಿದಿರಲಿಲ್ಲ. ಹಾಡು ವೈರಲ್ ಆದ ಬಳಿಕ ಹಾಡಿನ ರಚನೆಕಾರರಾದ ದಿ.ಮುಂಡಾಜೆ ರಾಮಚಂದ್ರ ಭಟ್‌ ಅವರ ಕುಟುಂಬಸ್ಥರೇ ಕರೆ ಮಾಡಿ ವಿಷಯ ತಿಳಿಸಿ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿದರು ಎಂದರು ಮಾನಸಿ ಸುಧೀರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT