ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಪಟ್ಟಿ ವಿಳಂಬ | ಮಂಗಳೂರು ವಿವಿ ಧೋರಣೆ ವಿರುದ್ಧ ABVP ಆಕ್ರೋಶ

ಕುಂದಾಪುರದಲ್ಲಿ ಬೀದಿಗಿಳಿದ ವಿದ್ಯಾರ್ಥಿ ಸಮೂಹ: ಅಂಕಪಟ್ಟಿ ವಿಳಂಬಕ್ಕೆ ಅಸಮಾಧಾನ
Last Updated 16 ಡಿಸೆಂಬರ್ 2022, 5:29 IST
ಅಕ್ಷರ ಗಾತ್ರ

ಕುಂದಾಪುರ: ಪದವಿ ಪರೀಕ್ಷೆಗಳ ಅಂಕಪಟ್ಟಿ ವಿತರಣೆಯ ವಿಳಂಬ ಸೇರಿದಂತೆ ಮಂಗಳೂರು ವಿಶ್ವ ವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ನಿರಂತರ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಗುರುವಾರ ಕುಂದಾಪುರದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

‘ಅಂಕಪಟ್ಟಿ ಇಲ್ಲದೆ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗೆ ಸೇರಲು, ಕೆಲಸಕ್ಕೆ ಹೋಗಲು ಸಮಸ್ಯೆಯಾಗುತ್ತದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಆಗುತ್ತಿಲ್ಲ. ಅಂಕಪಟ್ಟಿ ಪಡೆದುಕೊಳ್ಳಲು ಮಂಗಳೂರು ವಿಶ್ವವಿದ್ಯಾಲಯ ಕಚೇರಿಗೆ ಹೋಗುವುದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದರೂ, ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಪರೀಕ್ಷಾ ಮೌಲ್ಯಮಾಪನಗಳು ಸೂಕ್ತ ಸಮಯ ದಲ್ಲಿ ಆಗುತ್ತಿಲ್ಲ. ಮರು ಪರೀಕ್ಷೆಯ ಫಲಿತಾಂಶಗಳು ವಿಳಂಬವಾಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಂಕಪಟ್ಟಿಯಲ್ಲಿ ಸಾಕಷ್ಟು ದೋಷಗಳಿವೆ. ಗ್ರೇಸ್ ಅಂಕಗಳನ್ನು ನೀಡಿ ತೇರ್ಗಡೆ ಮಾಡುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿಶ್ವವಿದ್ಯಾಲಯದವರಿಗೆ ಗೊಂದಲವಿದೆ. ಅದರ ಅನುಷ್ಠಾನ ವನ್ನು ಸರಿಯಾಗಿ ಮಾಡಿಲ್ಲ’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಶಾಸ್ತ್ರಿ ಸರ್ಕಲ್‌ನಿಂದ ಮಿನಿ ವಿಧಾನಸೌಧದ ವರೆಗೆ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಸಾಗುತ್ತಾ ವಿ.ವಿ. ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎಬಿವಿಪಿ ಘಟಕದ ಅಧ್ಯಕ್ಷ ವಿಘ್ನೇಶ್ ಶೆಟ್ಟಿ ಪ್ರತಿಭಟನೆಯಲ್ಲಿ ಮಾತನಾಡಿ, ‘ಮಂಗಳೂರು ವಿಶ್ವವಿದ್ಯಾಲಯದ ಧೋರಣೆಯಿಂದಾಗಿ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಪದವಿ ಶಿಕ್ಷಣದ ಬಳಿಕ ಬದುಕಿನ ಕನಸುಗಳನ್ನು ಕಟ್ಟಿಕೊಂಡಿರುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಯಲ್ಲಿ ಇಡುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ’ ಎಂದು ಆರೋಪಿಸಿದರು.

ವಿದ್ಯಾರ್ಥಿನಿ ಪ್ರತೀಕ್ಷಾ ಮಾತನಾಡಿ, ‘ನಮಗೆ ವೈವಿಧ್ಯಮಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ವಿಶ್ವವಿದ್ಯಾಲಯವನ್ನು ಕೇಳುತ್ತಿಲ್ಲ. ನಿಮ್ಮ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಿ ಎನ್ನುತ್ತಿದ್ದೇವೆ. ಅವರ ಕರ್ತವ್ಯ ನಿರ್ವಹಣೆ ಮಾಡದೆ ಇರೋದರಿಂದ ನಾವು ಬೀದಿಯಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಅಂಕ ಪಟ್ಟಿಯಲ್ಲಿ ಶೇಕಡವಾರು ಫಲಿತಾಂಶ ಪ್ರಕಟಿಸುವಾಗಲೂ ತುಂಬಾ ತಪ್ಪುಗಳಾಗುತ್ತಿದೆ. ಪರೀಕ್ಷಾ ಶುಲ್ಕ ಕಟ್ಟಲು ತಡವಾದರೆ ದಂಡ ವಿಧಿಸುವ ವಿಶ್ವವಿದ್ಯಾಲಯ, ಪರೀಕ್ಷಾ ಫಲಿತಾಂಶ ಹಾಗೂ ಅಂಕಪಟ್ಟಿಯನ್ನು ನೀಡಲು ನಿಗದಿತ ಸಮಯಪಾಲನೆ ಮಾಡದೆ ಇದ್ದರೆ ಅವರಿಗೆ ದಂಡ ವಿಧಿಸುವವರು ಯಾರು’ ಎಂದು ಪ್ರಶ್ನಿಸಿದರು.

ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಭಂಡಾರ್‌ಕಾರ್ಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಕೋಟೇಶ್ವರ-ಕಾಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಉಡುಪಿ ಜಿಲ್ಲಾ ಎಬಿವಿಪಿ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ವಿಭಾಗ ಸಹ ಸಂಚಾಲಕ ಸುಮಕ್ ಭಟ್, ಜಿಲ್ಲಾ ಸಂಚಾಲಕ ಯುಕೇಶ್ ಇಂದಬೆಟ್ಟು, ತಾಲ್ಲೂಕು ಸಂಚಾಲಕ ಧನುಷ್, ತಾಲ್ಲೂಕು ವಿದ್ಯಾರ್ಥಿನಿ ಪ್ರಮುಖ್ ಧ್ವನಿ, ತಾಲ್ಲೂಕು ಸಂಪರ್ಕ ಪ್ರಮುಖ್ ರಾಹುಲ್, ಭಂಡಾರ್ ಕಾರ್ಸ್ ಕಾಲೇಜು ಘಟಕದ ಅಧ್ಯಕ್ಷ ವೀಕ್ಷಿತ್, ಕಾರ್ಯದರ್ಶಿ ಅಭಿಲಾಷ್, ನಗರ ಸಹ ಕಾರ್ಯದರ್ಶಿ ದರ್ಶನ್, ನಗರ ಸಹ ಕಾರ್ಯದರ್ಶಿ ವಿಘ್ನೇಶ್, ಕಾಗೇರಿ ಸರ್ಕಾರಿ ಕಾಲೇಜು ಘಟಕದ ಅಧ್ಯಕ್ಷ ಚೇತನ್, ಪ್ರಮುಖ ಕಾರ್ಯಕರ್ತರಾದ ಸಾತ್ವಿಕ್, ಅಪೂರ್ವಾ, ಪ್ರಜ್ಞಾ, ಪ್ರತೀಕ್ಷಾ ಹಾಗೂ ಅಮೃತಾ ಇದ್ದರು.

ಕುಂದಾಪುರ ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಸದಾಶಿವ ಆರ್. ಗವರೋಜಿ, ಸುಧಾ ಪ್ರಭು ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT