ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಮುಕ್ತ; ಸ್ವಸ್ಥ ಸಮಾಜದತ್ತ...

ಕೋಡಿ ಬೆಂಗ್ರೆ ಬೆನ್ನಲ್ಲೇ ತಂಬಾಕು ಮುಕ್ತ ಸಂಕಲ್ಪ ಮಾಡಿರುವ ರೆಂಜಾಳ, ಕೊರ್ಗಿ ಗ್ರಾಮಗಳು
Last Updated 23 ಜುಲೈ 2022, 19:30 IST
ಅಕ್ಷರ ಗಾತ್ರ

ಉಡುಪಿ: ಕೋಡಿ ಬೆಂಗ್ರೆ ಜಿಲ್ಲೆಯ ಮೊದಲ ತಂಬಾಕು ಮುಕ್ತ ಗ್ರಾಮವಾಗಿ ಘೋಷಣೆಯಾದ ಬೆನ್ನಲ್ಲೇ ಹಲವು ಗ್ರಾಮಗಳು ತಂಬಾಕು ಮುಕ್ತ ಗ್ರಾಮಗಳಾಗುವ ಸಂಕಲ್ಪ ತೊಟ್ಟಿದ್ದು ಕಾರ್ಯೋನ್ಮುಖವಾಗಿವೆ.

ಕಾರ್ಕಳ ತಾಲ್ಲೂಕಿನ ರೆಂಜಾಳ ಹಾಗೂ ಕುಂದಾಪುರ ತಾಲ್ಲೂಕಿನ ಕೊರ್ಗಿ ಗ್ರಾಮಗಳು ತಂಬಾಕು ಮುಕ್ತ ಗ್ರಾಮಗಳಾಗಲು ಉತ್ಸುಕತೆ ತೋರಿದ್ದು, ಎಲ್ಲವೂ ನಿರೀಕ್ಷೆಯಂತೆ ನಡೆದರೆ 2023 ಮೇ 31ರ ವಿಶ್ವ ತಂಬಾಕು ವಿರೋಧಿ ದಿನದಂದು ಎರಡೂ ಗ್ರಾಮಗಳನ್ನು ತಂಬಾಕು ಮುಕ್ತ ಎಂದು ಜಿಲ್ಲಾಡಳಿತ ಘೋಷಣೆ ಮಾಡಲಿದೆ.

‘ತಂಬಾಕು ಮುಕ್ತ ಗ್ರಾಮ’ವಾಗಿ ಘೋಷಣೆಯಾಗಬೇಕಾದರೆ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಮುಖ್ಯವಾಗಿ ತಂಬಾಕು ಮುಕ್ತವಾಗಲು ಬಯಸುವ ಗ್ರಾಮಗಳಲ್ಲಿರುವ ಜನರ ಸಹಭಾಗಿತ್ವ ಬೇಕು. ತಂಬಾಕು ಸೇವಿಸುವುದಿಲ್ಲ ಎಂದು ದೃಢವಾದ ನಿಶ್ಚಯ ಮಾಡಬೇಕು.

ಸ್ಥಳೀಯ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ಒಟ್ಟಾಗಿ ತಂಬಾಕು ಮುಕ್ತ ಗ್ರಾಮ ನಿರ್ಮಾಣಕ್ಕೆ ಜಿಲ್ಲಾಡಳಿತದ ಜತೆಗೆ ಕೈಜೋಡಿಸಬೇಕು. ಹೊರಗಿನಿಂದ ಬರುವವರಿಗೂ ಗ್ರಾಮದಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ನಿಷೇಧವಿರುವ ಬಗ್ಗೆ ಅರಿವು ಮೂಡಿಸಬೇಕು.

ಗ್ರಾಮಗಳಲ್ಲಿರುವ ಗೂಡಂಗಡಿಗಳ ಮಾಲೀಕರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು. ತಂಬಾಕು ಬಳಕೆ ಹಾಗೂ ಮಾರಾಟ ನಿರ್ಬಂಧ ಎಂಬ ಜಾಗೃತಿ ಫಲಕಗಳನ್ನು ಅಂಗಡಿಗಳ ಮುಂದೆ ಪ್ರದರ್ಶಿಸಬೇಕು. ಇವಿಷ್ಟು ಗ್ರಾಮಸ್ಥರ ಜವಾಬ್ದಾರಿಯಾದರೆ ಜಿಲ್ಲಾಡಳಿತದ ಕರ್ತವ್ಯಗಳು ಕೂಡ ಬಹಳಷ್ಟಿವೆ.

ಜಿಲ್ಲಾಡಳಿತದ ಕರ್ತವ್ಯ ಏನು?

ತಂಬಾಕು ಮುಕ್ತ ಸಂಕಲ್ಪ ಮಾಡುವ ಗ್ರಾಮಗಳಲ್ಲಿ ಎಷ್ಟು ಜನಸಂಖ್ಯೆ ಇದೆ, ಅಲ್ಲಿ ತಂಬಾಕು ಸೇವನೆ ಮಾಡುವವರು ಎಷ್ಟಿದ್ದಾರೆ. ಎಷ್ಟು ತಂಬಾಕು ಮಾರಾಟ ಮಾಡುವ ಅಂಗಡಿಗಳಿವೆ ಎಂದು ಜಿಲ್ಲಾಡಳಿತ ಸಮೀಕ್ಷೆ ನಡೆಸಲಿದೆ.

ಬಳಿಕ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಸಮೀಕ್ಷೆಯಲ್ಲಿ ಪತ್ತೆಯಾಗುವ ವ್ಯಸನಿಗಳಿಗೆ ಅಗತ್ಯವಿದ್ದರೆ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ನೀಡಲಾಗುತ್ತದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಅರಿವು ಮೂಡಿಸಲಾಗುತ್ತದೆ. ಮಾರಾಟದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

ಈ ಎಲ್ಲ ಜಾಗೃತಿ ಕಾರ್ಯಕ್ರಮಗಳು ಜಿಲ್ಲಾಡಳಿತ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಯುವಕ ಸಂಘಗಳು ಹಾಗೂ ಸಂಘಟನೆಗಳ ಮೂಲಕ ನಡೆಯಲಿದೆ. ನಿರಂತರ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಹೊರತಾಗಿಯೂ ಗ್ರಾಮಗಳ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡಿದರೆ ನಿರಂತರ ದಾಳಿಗಳನ್ನು ನಡೆಸಿ ದಂಡ ವಿಧಿಸಲಾಗುತ್ತದೆ.

ಇದಲ್ಲದೆ ಅಧಿಕಾರಿಗಳ ತಂಡ ಹಲವು ಬಾರಿ ನಿರ್ಧಿಷ್ಟ ಗ್ರಾಮಗಳಿಗೆ ಭೇಟಿನೀಡಿ ತಂಬಾಕು ಉತ್ಪನ್ನಗಳ ಬಳಕೆ ಇದೆಯೇ, ಮಾರಾಟ ಮಾಡಲಾಗುತ್ತದೆಯೇ ಎಂಬುದನ್ನು ಪರಿಶೀಲಿಸುತ್ತದೆ. ಸಮೀಕ್ಷೆ ವೇಳೆ ತಂಬಾಕು ಬಳಕೆ ಶೂನ್ಯ ಎಂದು ಖಚಿತವಾದರೆ ಮಾತ್ರ ತಂಬಾಕು ಮುಕ್ತ ಗ್ರಾಮ ಎಂದು ಘೋಷಣೆ ಮಾಡಲು ಜಿಲ್ಲಾಡಳಿತಕ್ಕೆ ಶಿಫಾರಸು ಮಾಡುತ್ತದೆ.

ತಂಬಾಕು ಮುಕ್ತ ಸಂಕಲ್ಪ ಮಾಡುವ ಗ್ರಾಮಗಳಿಗೆ ಸಮಾಜದಲ್ಲಿ ವಿಶೇಷ ಗೌರವ ದೊರೆಯುವುದರ ಜತೆಗೆ ಜಿಲ್ಲಾಡಳಿತ ಕೆಲವು ಆರೋಗ್ಯ ಸಂಬಂಧಿ ಸೇವೆಗಳನ್ನು ಉಚಿತವಾಗಿ ನೀಡಲಿದೆ. ಗ್ರಾಮಗಳಲ್ಲಿ ನಿರಂತರವಾಗಿ ಉಚಿತವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತದೆ.

ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಮಲೇರಿಯಾ, ಡೆಂಗಿ, ದಂತ ಚಿಕಿತ್ಸೆ, ಎಚ್‌ಐವಿ, ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳನ್ನು ಪತ್ತೆ ಹಚ್ಚುವ ಶಿಬಿರಗಳನ್ನು ನಡೆಸಿ ಅಗತ್ಯವಿದ್ದರಿಗೆ ಚಿಕಿತ್ಸೆಗೆ ನೆರವು ನೀಡುವ ಮೂಲಕ ಗ್ರಾಮಸ್ಥರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುವುದು ಎನ್ನುತ್ತಾರೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಮಂಜುಳಾ ಶೆಟ್ಟಿ.

2 ದಶಕಗಳ ಶ್ರಮಕ್ಕೆ ಸಿಕ್ಕ ಫಲ

20 ವರ್ಷಗಳ ಅವಿರತ ಶ್ರಮದ ಫಲವಾಗಿ ಕೋಡಿಬೆಂಗ್ರೆ ಗ್ರಾಮ ತಂಬಾಕು ಮುಕ್ತ ಗ್ರಾಮವಾಗಿ ಘೋಷಣೆಯಾಗಿದೆ. ಈ ಸಾಧನೆಯ ಹಿಂದೆ ಊರಿನ ಗ್ರಾಮಸ್ಥರು, ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಹಾಗೂ ಅಂಗಡಿ ಮಾಲೀಕರ ಸಹಕಾರ ದೊಡ್ಡದು. ಇದರ ಫಲವಾಗಿ ಕೋಡಿ ಬೆಂಗ್ರೆ ಗ್ರಾಮಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ ಲಭಿಸಿದೆ.

ಗ್ರಾಮಸ್ಥರ ಸಹಕಾರದಿಂದ ತಂಬಾಕು ಮುಕ್ತ

ಜಿಲ್ಲೆಯ ಮೊದಲ ತಂಬಾಕು ಮುಕ್ತ ಕೋಡಿಬೆಂಗ್ರೆ ಗ್ರಾಮದಲ್ಲಿ 290 ಮನೆಗಳಿದ್ದು 1,375ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಒಂದು ಶಾಲೆ, 6 ದೇವಸ್ಥಾನ, 1 ಮಸೀದಿ, 12 ದಿನಸಿ ಅಂಗಡಿಗಳು ಇವೆ. ಹಿಂದೆ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಯುವಕರು ಪಾನಮತ್ತರಾಗುವುದನ್ನು ಕಂಡು ಊರಿನ ಹಿರಿಯರು ಮದ್ಯಪಾನ ಹಾಗೂ ನಶಾ ಮುಕ್ತ ಗ್ರಾಮವಾಗಿಸಲು ದೃಢ ಸಂಕಲ್ಪ ಮಾಡಿದ್ದರು. ಅವರ ಸಂಕಲ್ಪ ಈಗ ಈಡೇರಿದೆ. ಅನಧಿಕೃತ ಮದ್ಯದಂಗಡಿ ತೆರವುಗೊಳಿಸುವಲ್ಲಿ ಮಹಿಳೆಯರ ಪಾತ್ರವೂ ಪ್ರಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT