ಪಡುಬಿದ್ರಿ: ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಲ್ಯ ಶ್ರೀ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ಜರಗುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಚಾಲನೆ ದೊರೆಯಿತು.
ಮೂರೂ ಮಾರಿಗುಡಿಗಳನ್ನು ವಿದ್ಯುತ್ ದೀಪ ಹಾಗೂ ಪುಷ್ಪಾಲಂಕಾರದೊಂದಿಗೆ ಸಿಂಗಾರ ಮಾಡಲಾಗಿದೆ. ರಾತ್ರಿ ಧಾರ್ಮಿಕ ವಿವಿಧಾನಗಳು ಆರಂಭಗೊಂಡಿದ್ದು ಭಕ್ತಾದಿಗಳು ಮೂರು ಗುಡಿಗಳಲ್ಲಿ ದೇವರ ದರ್ಶನ ಪಡೆದು ಗದ್ದುಗೆ ಪೂಜೆ, ಕುಂಕುಮಾರ್ಚನೆ ಸಹಿತ ಹರಕೆಗಳನ್ನು ಸಲ್ಲಿಸುತ್ತಿದ್ದಾರೆ.
ಮೂರೂ ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ನಡೆಯುವ ಸುಗ್ಗಿ ಮಾರಿಪೂಜೆಯಲ್ಲಿ ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲದೆ ಕಾಸರಗೋಡು, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮುಂಬೈ, ಬೆಂಗಳೂರು ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ವಿವಿಧ ಹರಕೆ, ಸೇವೆಗಳನ್ನು ಸಲ್ಲಿಸುತ್ತಾರೆ.
ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮಂಗಳವಾರ ರಾತ್ರಿ ಹಳೇ ಮಾರಿಗುಡಿಗೆ ವೆಂಕಟರಮಣ ದೇವಸ್ಥಾನದಿಂದ ಹಾಗೂ ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಬಿಂಬ ಮತ್ತು ಚಿನ್ನಾಭರಣಗಳನ್ನು ಶೋಭಾಯತ್ರೆಯಲ್ಲಿ ತಂದು ಗದ್ದೆಗೆಯೇರಿಸಿ ಮಾರಿಪೂಜೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬುಧವಾರ ಸಂಜೆ ದರ್ಶನ ಸೇವೆ ನಡೆದು ಬಳಿಕ ಮಾರಿಯಮ್ಮ ದೇವಿಯ ಬಿಂಬ ವಿಸರ್ಜಿಸಲಾಗುತ್ತದೆ.
ಕಾಪುವಿನಲ್ಲಿ ನಡೆಯುವ ಸುಗ್ಗಿ, ಆಟಿ ಮತ್ತು ಜಾರ್ದೆ ಮಾರಿಪೂಜೆಗಳ ಪೈಕಿ ಸುಗ್ಗಿ ಮಾರಿಪೂಜೆ ವಿಶೇಷವಾಗಿದೆ. ಎರಡು ದಿನಗಳ ಕಾಲ ನಡೆಯುವ ಮಾರಿಪೂಜೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಮಾತ್ರವಲ್ಲದೆ ದೂರದ ಮುಂಬೈ, ಬೆಂಗಳೂರು ಮೊದಲಾದ ಕಡೆಯಿಂದಲೂ ಲಕ್ಷಾಂತರ ಸಂಖ್ಯೆಯ ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.