ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಭ ಕುಸಿದರೂ ಹೈನುಗಾರರ ಹಿತಕಾಯತ್ತಿರುವ ಒಕ್ಕೂಟ‘

ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್
Last Updated 20 ನವೆಂಬರ್ 2020, 14:46 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, ಕ್ಯಾಂಪ್ಕೊ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕರಾವಳಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್ ಹೇಳಿದರು.

67ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ‘ಕೊರೊನಾ ಸೋಂಕು–ಆತ್ಮನಿರ್ಭರ ಭಾರತ–ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯದೊಂದಿಗೆ ‘ಸಹಕಾರ ಸಂಘಗಳ ಮೂಲಕ ಆರ್ಥಿಕ ಸೇರ್ಪಡೆ, ಡಿಜಿಟೈಸೇಷನ್‌ ಹಾಗೂ ಸಾಮಾಜಿಕ ಜಾಲತಾಣ’ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕೊರೊನಾ ಕಾರಣದಿಂದಾಗಿ ಹಾಲು ಉತ್ಪಾದಕರ ಒಕ್ಕೂಟಗಳು ನಷ್ಟದ ಸುಳಿಗೆ ಸಿಲುಕಿವೆ. ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಪ್ರತಿದಿನ 4.85 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 4.25 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಉಳಿದ 60 ಸಾವಿರ ಲೀಟರ್ ಹಾಲಿನ ಪುಡಿಯಾಗಿ ಪರಿವರ್ತಿತವಾಗುತ್ತಿದೆ. ಇದರಿಂದ ಒಕ್ಕೂಟದ ಲಾಭದ ಪ್ರಮಾಣ ಇಳಿಕೆಯಾಗಿದೆ. ಆದರೂ, ಹೈನುಗಾರರ ಹಿತ ಕಾಯುವ ಉದ್ದೇಶದಿಂದ ಒಕ್ಕೂಟ ಹಾಲಿನ ದರ ಇಳಿಕೆ ಮಾಡಿಲ್ಲ ಎಂದರು.

ನೆರೆಯ ಶಿವಮೊಗ್ಗ ಜಿಲ್ಲೆಯ ಹಾಲು ಒಕ್ಕೂಟ ₹ 7 ದರ ಇಳಿಕೆ ಮಾಡಿದೆ. ಆದರೆ, ದಕ್ಷಿಣ ಕನ್ನಡ ಒಕ್ಕೂಟ ₹ 1 ರಿಂದ 1.50 ಮಾತ್ರ ಇಳಿಕೆ ಮಾಡಿದೆ. ಜತೆಗೆ ತಂತ್ರಜ್ಞಾನ ಅಳವಡಿಕೆಯಂತಹ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಸ್ವಂತವಾಗಿ ಪಶು ಆಹಾರ ಉತ್ಪನ್ನ ತಯಾರಿಕಾ ಕಾರ್ಖಾನೆ ಹಾಗೂ ಹಾಲಿನ ಪುಡಿ ತಯಾರಿಕಾ ಘಟಕವನ್ನು ಸ್ಥಾಪಿಸಿದರೆ ಒಕ್ಕೂಟದ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಬಹುದು ಎಂದು ರಾಜೇಂದ್ರ ಕುಮಾರ್ ಸಲಹೆ ನೀಡಿದರು.

ಹಸು ಸಾಕಲು ಹಸಿರುಪೀಠದ ಅಪ್ಪಣೆ ಏಕೆ:

ಹಸು ಸಾಕಲು ಹಸಿರು ಪೀಠದ ಅನುಮತಿ ಪಡೆಯಬೇಕು ಎಂಬ ನಿಯಮ ಜಾರಿ ಹಂತದಲ್ಲಿದೆ. ಈ ನಿಯಮದ ವಿರುದ್ಧ ಹಾಲು ಒಕ್ಕೂಟಗಳು ಹಾಗೂ ಹೈನುಗಾರರು ಪ್ರತಿರೋಧ ವ್ಯಕ್ತಪಡಿಸಬೇಕು. ಹಳ್ಳಿಗಳಲ್ಲಿ ಲಕ್ಷಾಂತರ ಬಡವರು ಒಂದು ಹಸು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅನುಮತಿ ಪಡೆದು ಹಸು ಸಾಕಬೇಕು ಎಂಬ ನಿಯಮ ಜಾರಿಯಾದರೆ ಅವರಿಗೆಲ್ಲ ತೊಂದರೆಯಾಗಲಿದೆ ಎಂದರು.

ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಮಾತನಾಡಿ, ‘ಒಕ್ಕೂಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಲಾಗುತ್ತಿದೆ. ಹಿಂದೆ ಡೀಲರ್‌ಗಳಿಂದ ಹಾಲಿನ ಹಾಗೂ ಹಾಲಿನ ಉತ್ಪನ್ನಗಳ ಬೇಡಿಕೆ ಪಟ್ಟಿ ಪಡೆಯುವಾಗ ಬಹಳ ಸಮಯ ವ್ಯರ್ಥವಾಗುತ್ತಿತ್ತು. ಈಗ ಮೊಬೈಲ್‌ ಮೂಲಕವೇ ಡೀಲರ್‌ಗಳು ಇಂಡೆಂಟ್‌ ಹಾಕುತ್ತಿದ್ದಾರೆ. ಶೇ 95ರಷ್ಟು ಬೇಡಿಕೆ ಮೊಬೈಲ್‌ನ ಮೂಲಕವೇ ಒಕ್ಕೂಟಕ್ಕೆ ಬರುತ್ತಿದೆ ಎಂದರು.‌

ಮುಂದೆ ಡೈರಿಗೆ ಹಾಲು ಹಾಕಿದ ಕೂಡಲೇ ಹೈನುಗಾರನ ಮೊಬೈಲ್‌ಗೆ ಹಾಲಿನ ಗುಣಮಟ್ಟ, ದರ ಹಾಗೂ ಕೊಬ್ಬಿನ ಮಾಹಿತಿಯ ಸಂದೇಶ ರವಾನೆಯಾಗುವಂತಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದರು.

ಇದೇವೇಳೆ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ‘ನಂದಿನಿ ಆನ್ ವೀಲ್ಸ್‌’ ವಾಹನಗಳಿಗೆ ಚಾಲನೆ ನೀಡಲಾಯಿತು. ಹಾಲಿನ ಡೀಲರ್‌ಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಡೀಲರ್‌ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಪ್ರಕಾಶ್‌ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮುಖಂಡರಾದ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

‘ಮಾರಾಟ ಮಂಡಳಕ್ಕೆ ಜನೌಷಧ ಕೇಂದ್ರ ಏಜೆನ್ಸಿ’

ಪ್ರಧಾನಮಂತ್ರಿ ಜನೌಷಧ ಮಳಿಗೆ ಸ್ಥಾಪನೆ ಏಜೆನ್ಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಸಿಕ್ಕಿದೆ. ಇದರ ಸಂಪೂರ್ಣ ಲಾಭ ಸಹಕಾರ ಕ್ಷೇತ್ರಕ್ಕೆ ಸಿಗಬೇಕು ಎಂಬ ದೃಷ್ಟಿಯಿಂದ ಖಾಸಗಿ ವ್ಯಕ್ತಿಗಳಿಗೆ ಜನೌಷಧ ಮಳಿಗೆ ತೆರೆಯಲು ಅನುಮತಿ ನೀಡದೆ ಸಹಕಾರ ಕ್ಷೇತ್ರದಲ್ಲಿದ್ದವರಿಗೆ ಮಾತ್ರ ನೀಡಲು ನಿರ್ಧರಿಸಲಾಗಿದೆ. ನಿರೀಕ್ಷೆಗೂ ಮೀರಿ ಬೇಡಿಕೆಗಳು ಬರುತ್ತಿವೆ ಎಂದು ರಾಜೇಂದ್ರ ಕುಮಾರ್ ಹೇಳಿದರು.

‘ಯೂರಿಯಾ ಕಾರ್ಖಾನೆ ಆರಂಭಕ್ಕೆ ಚಿಂತನೆ’

ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಯೂರಿಯಾ ಗೊಬ್ಬರ ತಯಾರಿಕಾ ಕಾರ್ಖಾನೆ ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಈಗಾಗಲೇ ಹರಿಹರ ತಾಲ್ಲೂಕಿನಲ್ಲಿ 300 ಎಕೆರೆ ಜಾಗ ಗುರುತಿಸಲಾಗಿದ್ದು, ತುಂಗಭದ್ರಾ ನದಿಯ ನೀರು ಬಳಕೆಯ ಉದ್ದೇಶವಿದೆ. ಕೇಂದ್ರ ಸಚಿವ ಸದಾನಂದ ಗೌಡರು ಕೂಡ ಕಾರ್ಖಾನೆ ಸ್ಥಾಪನೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಯೋಜನೆ ಸಾಕಾರಗೊಂಡರೆ ಸಹಕಾರ ಕ್ಷೇತ್ರ ಮತ್ತಷ್ಟು ಬಲಗೊಳ್ಳಲಿದೆ ಎಂದು ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT