ಮಂಗಳವಾರ, ಜನವರಿ 31, 2023
18 °C
ತಹಶೀಲ್ದಾರರಿಗೆ ಸಚಿವ ವಿ. ಸುನಿಲ್‌ ಕುಮಾರ್ ಸೂಚನೆ

ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಿ: ಸಚಿವ ವಿ. ಸುನಿಲ್‌ ಕುಮಾರ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಡಿಸೆಂಬರ್ ತಿಂಗಳೊಳಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನಲ್ಲಿ 94ಸಿ ಮತ್ತು 94ಸಿಸಿ ಅಡಿ ವಿಲೇವಾರಿಗೆ ಬಾಕಿಯಿರುವ ಒಟ್ಟು 850 ಅರ್ಜಿಗಳನ್ನು ಡಿಸೆಂಬರ್ ತಿಂಗೊಳಗೆ ವಿಲೇಗೊಳಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕಾಗಿದೆ. ನಮೂನೆ- 53ರ ಅಡಿಯಲ್ಲಿ ಸಲ್ಲಿಕೆಯಾದ ಒಟ್ಟು 2,294 ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿಗೊಳಿಸಲು ಕ್ರಮಕೈಗೊಳ್ಳಬೇಕು. ಮುಂದೆ ನಮೂನೆ- 57ರಡಿ ಸಲ್ಲಿಕೆಯಾದ ಅರ್ಜಿಗಳ ಕಡೆ ಗಮನ ಹರಿಸಬೇಕು ಎಂದರು.

2018ರಲ್ಲಿ ಸಿದ್ಧಪಡಿಸಿದ ಅರ್ಜಿಗಳ ವಿವರದ ಪ್ರಕಾರ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ರಹಿತರ ಬೇಡಿಕೆ ಪಟ್ಟಿಯಡಿ 5,500 ಅರ್ಜಿಗಳು ಸಲ್ಲಿಕೆಯಾಗಿವೆ. ನಿವೇಶನ ಹಂಚಿಕೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಮುಂದಿನ ಬೇಡಿಕೆಗಳಿದ್ದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಬೇಡಿಕೆ ಪಟ್ಟಿ ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು.

ಜಲಜೀವನ ಮಿಷನ್ ಅಡಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಿಶೀಲನೆ ನಡೆಸಬೇಕು. ಈಗಾಗಲೇ ನಿರ್ಮಾಣಗೊಂಡ ಓವರ್ ಹೆಡ್ ಟ್ಯಾಂಕ್ ಗುಣಮಟ್ಟ, ನೀರು ಸರಬರಾಜು ವ್ಯವಸ್ಥೆ ಹಾಗೂ ಮನೆಗಳಿಗೆ ಸಂಪರ್ಕ ಕಲ್ಪಿಸಿದ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಬೇಕು ಎಂದರು.

ಲೋಕೋಪಯೋಗಿ ಇಲಾಖೆಯಡಿ ಮಂಜೂರಾತಿಗೊಂಡ ₹ 52 ಕೋಟಿ ವೆಚ್ಚದ 150 ಕಾಮಗಾರಿಗಳನ್ನು ನವೆಂಬರ್ 30ರೊಳಗೆ ಆರಂಭಿಸುವಂತೆ ಕ್ರಮ ಕೈಗೊಳ್ಳಬೇಕು. ಕುಕ್ಕುಂದೂರು ಜೋಡುರಸ್ತೆಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಂಜೂರಾದ ₹6.5 ಕೋಟಿ ಕಾಮಗಾರಿ ಡಿಸೆಂಬರ್ ಮೊದಲ ವಾರದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್., ಹೆಬ್ರಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಹೆಬ್ರಿ ತಹಶೀಲ್ದಾರ್ ಪುರಂದರ್, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಪ್ರತಿಭಾ,
ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಕೆಪಿಸಿ ಸದಸ್ಯ ಅಂತೋನಿ ಡಿಸೋಜಾ ನಕ್ರೆ, ಹರಿಶ್ಚಂದ್ರ ತೆಂಡುಲ್ಕರ್ ಮಾಳ,
ಸುಂದರ ಬಿ. ನಲ್ಲೂರು ಮತ್ತು ಮೋಹನ್‌ದಾಸ್ ಅಡ್ಯಂತಾಯ ಕಾಂತಾವರ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು