ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಂದೂರು: ಧರಣಿ ಹಿಂಪಡೆದ ಶಾಸಕ ಗಂಟಿಹೊಳೆ

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿದ್ಯಾಕುಮಾರಿ
Published 14 ಆಗಸ್ಟ್ 2024, 4:36 IST
Last Updated 14 ಆಗಸ್ಟ್ 2024, 4:36 IST
ಅಕ್ಷರ ಗಾತ್ರ

ಬೈಂದೂರು: ‘ಜಿಲ್ಲಾಡಳಿತವು ಶಾಸಕರ ಅಧಿಕಾರ ಮೊಟಕುಗೊಳಿಸಿಲ್ಲ, ಖಾಸಗಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂಬ ದೂರಿನ ಕಾರಣಕ್ಕೆ ಸರ್ಕಾರಿ ಕಚೇರಿಯಲ್ಲಿ ಸಭೆ ನಡೆಸುವಂತೆ ತಿಳಿಸಿದ್ದೇನೆ. ಜನರ ಪ್ರತಿನಿಧಿಯಾಗಿ ಶಾಸಕರು ಮಾಡಬೇಕಾದ ಕೆಲಸಗಳಿಗೆ ಸಹಕಾರ ನೀಡುತ್ತೇವೆ. ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಸ್ಪಷ್ಟೀಕರಣ ಪಡೆದು ಉತ್ತರ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಭರವಸೆ ನೀಡಿದ ನಂತರ ಶಾಸಕ ಗುರುರಾಜ್ ಗಂಟಿಹೊಳೆ ಧರಣಿ ಹಿಂದಕ್ಕೆ ಪಡೆದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆ ಚರ್ಚಿಸಲು ಶಾಸಕರು ಉಪ್ಪುಂದದಲ್ಲಿರುವ ಖಾಸಗಿ ಕಚೇರಿಗೆ ಅಧಿಕಾರಿಗಳ ಸಭೆ ಕರೆದಿದ್ದರು. ಆ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸದಂತೆ ಜಿಲ್ಲಾಡಳಿತ ಮೌಖಿಕ ಸೂಚನೆ ನೀಡಿದ ಕಾರಣಕ್ಕೆ ಸಭೆ ರದ್ದುಗೊಂಡಿತ್ತು. ಇದು ಶಾಸಕರ ಅಧಿಕಾರ ಚ್ಯುತಿ ಎಂದು ಆರೋಪಿಸಿ, ಗುರುರಾಜ್ ಗಂಟಿಹೊಳೆ ಬೈಂದೂರಿನ ಆಡಳಿತ ಸೌಧದ ಎದುರು ಸೋಮವಾರ ಸಂಜೆಯಿಂದ ಧರಣಿ ಆರಂಭಿಸಿದ್ದರು.

ಅಹೋರಾತ್ರಿ ನಡೆದ ಧರಣಿ ಸ್ಥಳಕ್ಕೆ ಶಾಸಕರಾದ ಕಿರಣ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ ಬೆಂಬಲ ವ್ಯಕ್ತಪಡಿಸಿದ್ದರು. ‘ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವ ತನಕ ಧರಣಿ ಮುಂದುವರಿಯುತ್ತದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದರು.

ನೂರಾರು ಕಾರ್ಯಕರ್ತರು ಧರಣಿ ಸ್ಥಳದಲ್ಲಿ ಚಾಪೆ ಹಾಸಿ ಮಲಗಿದರು. ಬಿಜೆಪಿ ಮುಖಂಡರಾದ ಸದಾನಂದ ಉಪ್ಪಿನಕುದ್ರು, ಬಿ. ಎಸ್. ಸುರೇಶ್ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಉಮೇಶ್ ಶೆಟ್ಟಿ ಕಲ್ಗದ್ದೆ, ರಾಜೇಶ್ ಕಾವೇರಿ, ಶಿವರಾಜ ಪೂಜಾರಿ ಇದ್ದರು. ಮಂಗಳವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಜರಾದರು. ನಂತರ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ., ತಹಶೀಲ್ದಾರ್ ಪ್ರದೀಪ್ ಆರ್. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT