ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಾಲು: ಅವೈಜ್ಞಾನಿಕ ರಸ್ತೆ ನಿರ್ಮಾಣ; ತಪ್ಪದ ಅಪಘಾತ

Published 3 ಮಾರ್ಚ್ 2024, 12:26 IST
Last Updated 3 ಮಾರ್ಚ್ 2024, 12:26 IST
ಅಕ್ಷರ ಗಾತ್ರ

ಹೆಬ್ರಿ: ಹೆಬ್ರಿ-ಕಾರ್ಕಳ ಮುಖ್ಯರಸ್ತೆಯ ಮುನಿಯಾಲು ಪೇಟೆಯಲ್ಲಿ ಅವೈಜ್ಞಾನಿಕವಾಗಿ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ರಸ್ತೆ ನಿರ್ಮಾಣ ಮಾಡಿದ್ದರಿಂದ, 1 ತಿಂಗಳಿನಲ್ಲಿ 8ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ.

ಗುರುವಾರ 2 ಕಾರುಗಳ ಮುಖಾಮುಖಿ ಅಪಘಾತದಿಂದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮುನಿಯಾಲು ಮಂಜುನಾಥ ಪೈ ಅವರ ಮನೆ ಬಳಿಯಲ್ಲಿ ಅತ್ಯಂತ ತಿರುವು ಮುರುವಿನ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ವಾಹನಗಳು ಬಂದರೆ ಕಾಣಿಸುವುದಿಲ್ಲ. ಸ್ಥಳೀಯ ಮುಖಂಡರು ಒಂದೆರಡು ಖಾಸಗಿ ವ್ಯಕ್ತಿಗಳ ಮನೆಯ ಕೌಂಪೌಂಡು ಉಳಿಸುವ ಉದ್ದೇಶದಿಂದ ಸಾರ್ವಜನಿಕ ರಸ್ತೆಯನ್ನು ಕಡಿದಾದ ತಿರುವು ಮಾಡಿ ನಿರ್ಮಿಸಿದ್ದಾರೆ. ಇದರಿಂದ ನಿತ್ಯವೂ ಅಪಘಾತ ಸಂಭವಿಸುತ್ತಿದೆ.

ಉಬ್ಬು ತಗ್ಗುಗಳನ್ನು ತೆಗೆದು ನೇರವಾಗಿ ರಸ್ತೆ ನಿರ್ಮಿಸುವ ಅಗತ್ಯ ಇದ್ದರೂ ಲಾಬಿ ಮಣಿದು ಅಪಯಕಾರಿಯಾಗಿ ರಸ್ತೆ ನಿರ್ಮಿಸಿದ್ದಾರೆ. ಬಡವರ ಜಾಗವಾಗಿದ್ದರೆ ಕಿತ್ತೊಗೆಯುತ್ತಿದ್ದರು, ಸ್ಥಿತಿವಂತರಾಗಿರುವ ಕಾರಣ ಹುನ್ನಾರ ಮಾಡಿ ರಸ್ತೆಯನ್ನೇ ತಿರುಗಿಸಿ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಮುನಿಯಾಲು ಚಟ್ಕಲ್ ಪಾದೆಯ ಜಂಕ್ಷನ್‌ನಲ್ಲೂ ಇದೇ ರೀತಿ ಅಸಮರ್ಪಕವಾಗಿ ರಸ್ತೆ ನಿರ್ಮಿಸಿದ್ದಾರೆ. ಚಟ್ಕಲ್‌ಪಾದೆ ಜಂಕ್ಷನ್‌ ಅಪಾಯಕಾರಿ ತಿರುವು ಇದ್ದು ವಾಹನ ಸವಾರರಿಗೆ ತಿಳಿಯದೆ ಅಪಘಾತಗಳು ಸಂಭವಿಸುತ್ತಿವೆ.

ಇದೇ ಜಾಗದಲ್ಲಿ ವಾಹನಗಳು ದಿಢೀರ್‌ ಮುಗ್ಗರಿಸಿದಂತೆ, ಒಂದು ಬದಿಗೆ ಎಳೆದುಕೊಂಡು ಹೋದಂತೆ ಆಗಿ ಅವಘಡಗಳು ನಡೆಯುತ್ತಿವೆ. ಲೋಕೋಪಯೋಗಿ ಇಲಾಖೆಯ ನಿರ್ಲಕ್ಷದಿಂದಲೇ ಈ ಎಲ್ಲಾ ಸಮಸ್ಯೆಗಳು ಸಂಭವಿಸುತ್ತಿವೆ. ಇಲಾಖೆಯ ಉನ್ನತಾಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಬೇಕು, ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ರಸ್ತೆಯನ್ನು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರ ಪ್ರಾಣ ಉಳಿಸಬೇಕು. ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸ್ಥಳೀಯ ನಾಗೇಶ ನಾಯಕ್ ಒತ್ತಾಯಿಸಿದ್ದಾರೆ. ‌

ಪೇಟೆಯಲ್ಲಿ ಪಟ್ಟಾ ಜಾಗ ಇರುವುದರಿಂದ ಸಮಸ್ಯೆ ಆಗಿದೆ. ಕಾಮಗಾರಿ ಆರಂಭದಲ್ಲಿ ಜಾಗದವರನ್ನು ಬಿಡಿಸಲು ಹೇಳಿದ್ದರೆ, ಏನಾದರೂ ಮಾಡಬಹುದಿತ್ತು. ಕೊನೆಯ ಒಂದು ಯೋಜನೆಯಂತೆ ವರಂಗ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಸ್ಥಳದವರನ್ನು ಮನವೊಲಿಸಿ ಒಪ್ಪಿಗೆ ಸಿಕ್ಕರೆ ತೊಡಕಾಗಿರುವ ರಸ್ತೆಯನ್ನು ಸರಿಪಡಿಸುವ ಅವಕಾಶವಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ತ್ರಿನೇಶ್ವರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT