ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಂಪೇಗೌಡರ ಆಡಳಿತ ಸರ್ವಕಾಲಕ್ಕೂ ಮಾದರಿ’

ನಾಡಪ್ರಭು ಕೆಂಪೇಗೌಡರ ರಥಕ್ಕೆ ಸ್ವಾಗತ: ಮೃತ್ತಿಕೆ ಸಮರ್ಪಣೆ: ಸಚಿವ ಎಸ್‌.ಅಂಗಾರ ಭಾಗಿ
Last Updated 5 ನವೆಂಬರ್ 2022, 14:18 IST
ಅಕ್ಷರ ಗಾತ್ರ

ಉಡುಪಿ: ಇತಿಹಾಸ ತಿಳಿಯದೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಹೋರಾಟಗಾರರ ತ್ಯಾಗ ಬಲಿದಾನದಿಂದ ದೊರೆತಿರುವ ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಎಸ್. ಅಂಗಾರ ಹೇಳಿದರು.

ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನಾ ಸಮಾರಂಭಕ್ಕೆ ಪೂರ್ವಭಾವಿಯಾಗಿ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹಿಸುವ ಅಭಿಯಾನದ ಕೆಂಪೇಗೌಡ ರಥಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಆರತಿ ಬೆಳಗಿ, ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಬೆಂಗಳೂರಿನ ಸಮಗ್ರ ಬೆಳವಣಿಗೆಗೆ ವ್ಯವಸ್ಥಿತ ಯೋಜನೆಗಳನ್ನು ರೂಪಿಸಿ, ಹಲವು ಕೆರೆಗಳನ್ನು ನಿರ್ಮಿಸಿ, ಮಾದರಿ ನಗರ ನಿರ್ಮಾಣಕ್ಕೆ ಕಾರಣಕರ್ತರಾಗಿರುವ ಕೆಂಪೇಗೌಡರು ಎಲ್ಲ ಆಡಳಿತಗಾರರಿಗೆ ಸದಾ ಮಾದರಿ ಎಂದರು.

ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಬೃಹತ್ ಪ್ರತಿಮೆ ನಿರ್ಮಾಣ ಮಾಡಿರುವಂತೆ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ. ಪ್ರತಿಮೆ ಉದ್ಘಾಟನೆಗೆ ಎಲ್ಲ ಜಿಲ್ಲೆಗಳಿಂದಲೂ ಮೃತ್ತಿಕೆ ಸಂಗ್ರಹ ಕಾರ್ಯ ನಡೆಯುತ್ತಿದೆ. ನ.11ರಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಕೆಂಪೇಗೌಡರು ನಿರ್ಮಾಣ ಮಾಡಿದ್ದ ಕೆರೆಗಳನ್ನು ಉಳಿಸಿಕೊಂಡಿದ್ದರೆ ಅತಿವೃಷ್ಟಿಯಿಂದ ಬೆಂಗಳೂರಿನಲ್ಲಿ ಮನೆಗಳಿಗೆ ನೀರು ನುಗ್ಗಿ ಜನಸಾಮಾನ್ಯರು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಉಡುಪಿಯಲ್ಲಿ ಎರಡು ದಿನ ಕೆಂಪೇಗೌಡರ ರಥ ಸಂಚರಿಸಲಿದ್ದು ಮೃತ್ತಿಕೆ ಸಂಗ್ರಹಿಸಿ ಬೆಂಗಳೂರು ತಲುಪಲಿದೆ. ನಾಡಿನ ಮಣ್ಣಿನ ಮಹತ್ವ ತಿಳಿಸಲು ರಥಯಾತ್ರೆ ಎಲ್ಲೆಡೆ ತೆರಳುತ್ತಿದ್ದು ಅಭೂತಪೂರ್ವ ಸ್ವಾಗತ ನೀಡಬೇಕು ಎಂದರು.

ಈ ಸಂದರ್ಭ ಶಾಸಕ ಕೆ.ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್, ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಪ್ರಸನ್ನ, ತರಬೇತಿ ನಿರತ ಐಎಎಸ್‌ ಅಧಿಕಾರಿ ಯತೀಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಯೋಜನಾ ನಿರ್ದೇಶಕ ಬಾಬು ಉಪಸ್ಥಿತರಿದ್ದರು. ಎನ್.ಆರ್.ಎಲ್.ಎಂ ವ್ಯವಸ್ಥಾಪಕ ಪ್ರಭಾಕರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.

ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದಿಂದ ಕೆಂಪೇಗೌಡರ ರಥಕ್ಕೆ ಪುಷ್ಪ ನಮನ ಸಲ್ಲಿಸಿ, ಮೃತ್ತಿಕೆ ಅರ್ಪಿಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಂ.ಸುರೇಶ್‌, ಮುಖಂಡರಾದ ಮಂಜುನಾಥ್‌ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT