ಸೋಮವಾರ, ಸೆಪ್ಟೆಂಬರ್ 26, 2022
22 °C
ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಮಾಹೆ ಅಧ್ಯಕ್ಷ ಡಾ.ರಂಜನ್ ಆರ್ ಪೈ ಅಭಿಮತ

ಯುವಜನತೆಯಲ್ಲಿ ಅಭಿವೃದ್ಧಿಯ ತುಡಿತ ಇರಲಿ: ಡಾ.ರಂಜನ್ ಆರ್ ಪೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಯುವಜನಾಂಗದಲ್ಲಿ ಅಭಿವೃದ್ಧಿಯ ತುಡಿತ, ಉದಾರತೆ ಹಾಗೂ ಸಹಾನುಭೂತಿ ಗುಣಗಳು ಭವಿಷ್ಯದಲ್ಲಿ ಉತ್ತಮ ನಾಯಕರನ್ನು ಸೃಷ್ಟಿಸಲಿದೆ ಎಂದು ಮಾಹೆ ಅಧ್ಯಕ್ಷ ಡಾ.ರಂಜನ್ ಆರ್.ಪೈ ಅಭಿಪ್ರಾಯಪಟ್ಟರು.

ಡಾ.ರಾಮದಾಸ್‌ ಎಂ.ಪೈಗಳ 87ನೇ ಜನ್ಮದಿನದ ಅಂಗವಾಗಿ ಮಣಿಪಾಲದ ಮಾಹೆ ವತಿಯಿಂದ ಹಮ್ಮಿಕೊಂಡಿದ್ದ ‘ಸಮಾಜದ ಬದಲಾವಣೆಯಲ್ಲಿ ಯುವಶಕ್ತಿಯ ಪಾತ್ರ’ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವನ್ನು ಬದಲಿಸುವಂತಹ ಶಕ್ತಿ, ಯೋಚನೆ ಹಾಗೂ ಯೋಜನೆಯನ್ನು ಹೊಂದಿರುವ ದೇಶದ ಪ್ರತಿಭಾವಂತ ಯುವಶಕ್ತಿ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುವುದು ಶ್ಲಾಘನೀಯ. ಸಮ್ಮೇಳನ ಭವಿಷ್ಯದ ಕನಸುಗಳ ಸಾಕಾರಕ್ಕೆ ವೇದಿಕೆಯಾಗಲಿ ಎಂದು ಆಶಿಸಿದರು.

ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್ ಮಾತನಾಡಿ, ಮಾಹೆ ಪ್ರತಿವರ್ಷ ದಾನದ ಮಹತ್ವ ಹಾಗೂ ಶ್ರೇಷ್ಠತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ದೃಷ್ಟಿಯಿಂದ ಕಳೆದ 10 ವರ್ಷಗಳಿಂದ ಅ.2ರಿಂದ8ರವರೆಗೆ ದಾನ ಉತ್ಸವ ಪಾಕ್ಷಿಕ ಆಯೋಜಿಸಿಕೊಂಡು ಬರುತ್ತಿದೆ. ದಾನ ಉತ್ಸವದಂತಹ ಕಾರ್ಯಕ್ರಮಗಳು ಸಾಮಾಜಿಕ ಬದಲಾವಣೆಗಳಿಗೆ ಸಹಕಾರಿಯಾಗಿದೆ ಎಂದರು.

ಮಾಹೆ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ಭಾರತ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿದ್ದು, ಯುವಜನತೆ ಸಮಾಜದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತಹ ಶಕ್ತಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಸ್ವಯಂಪ್ರೇರಿತರಾಗಿ ಸಾಮಾಜಿಕ ಬದಲಾವಣೆಯಲ್ಲಿ ತೊಡಗಿಸಿಕೊಳ್ಳಲು ಯುವಶಕ್ತಿಗೆ ಮಾಹೆ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡುತ್ತಿದೆ ಎಂದರು.

ವಿದ್ಯಾರ್ಥಿಗಳ ಒಳಗೊಳ್ಳುವಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದು ಡಾ.ಎಂ.ಡಿ.ವೆಂಕಟೇಶ್ ಹೇಳಿದರು.

ಸಮಾಜಿಕ ಬದಲಾವಣೆ ವಿಚಾರವಾಗಿ 14 ವಿಷಯ ಮಂಡನೆ ನಡೆಯಿತು. 30 ತಂಡಗಳು ಭಾಗವಹಿಸಿದ್ದವು. ದ ಮಣಿಪಾಲ್ ಸೇವಾ ಮೇಳದ‌ಲ್ಲಿ 20 ಎನ್‌ಜಿಒಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ 700ಕ್ಕೂಹೆಚ್ಚು ವಿದ್ಯಾರ್ಥಿಗಳ ಭಾಗವಹಿಸಿದ್ದರು. ಮಾಹೆ ಕುಲಪತಿ ಡಾ.ಎಂ.ಡಿ.ವೆಂಕಟೇಶ್‌ ಸ್ವಾಗತಿಸಿದರು. ಪ್ರಿನ್ಸಿಪಲ್ ಟ್ರಸ್ಟಿ ವೆಂಕಟ ಕೃಷ್ಣನ್ ಮಾತನಾಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು