ಗುರುವಾರ , ಆಗಸ್ಟ್ 11, 2022
21 °C
ಎನ್‌ಡಿಆರ್‌ಎಫ್‌ ತಂಡದ ಸಹಾಯಕ ಕಮಾಂಡೆಂಟ್‌ ಸೆಂಥಿಲ್ ಕುಮಾರ್

'ವಿಪತ್ತು ನಿರ್ವಹಣೆಗೆ ಸದಾ ಸನ್ನದ್ಧರಾಗಿರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಗತ್ತಿನಲ್ಲಿ ಹವಾಮಾನ ವೈಪರಿತ್ಯ ಹಾಗೂ ಜಾಗತಿಕ ತಾಪಮಾನ ಏರಿಕೆಯಿಂದ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಸಂಭವಿಸುತ್ತಿವೆ. ಪರಿಣಾಮ ಕರಾವಳಿಯಲ್ಲಿ ವಿಕೋಪಗಳು ಹೆಚ್ಚಾಗಿ ಸಂಭವಿಸುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ವಿಕೋಪ ಪರಿಸ್ಥಿತಿ ಎದುರಿಸಲು ಸದಾ ಸನ್ನದ್ಧವಾಗಿರಬೇಕು ಎಂದು 10ನೇ ಎನ್‌ಡಿಆರ್‌ಎಫ್ ತಂಡದ ಸಹಾಯಕ ಕಮಾಂಡೆಂಟ್ ಸೆಂಥಿಲ್ ಕುಮಾರ್ ಹೇಳಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎನ್‌ಡಿಆರ್‌ಎಫ್‌ ತಂಡದ ಅಣಕು ಪ್ರದರ್ಶನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿಂದೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಹಾನಿಗೊಳಗಾದ ಪ್ರದೇಶಗಳನ್ನು ಹಾಗೂ ನೆರೆ ನೀರು ತುಂಬಿದ ತಗ್ಗು ಪ್ರದೇಶಗಳನ್ನು ಪಟ್ಟಿ ಮಾಡಿಟ್ಟುಕೊಳ್ಳಬೇಕು. ಈ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ವಿಪತ್ತು ಪ್ರಾಧಿಕಾರಗಳಿಂದ ವಿಕೋಪ ಕುರಿತು ಮಾಹಿತಿ ಬಂದ ಕೂಡಲೇ, ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಸ್ಥಳಾಂತರಕ್ಕೂ ಮುನ್ನ ಸೂಕ್ತ ಪ್ರದೇಶವನ್ನು ಗುರುತಿಸಿಕೊಂಡಿರಬೇಕು ಎಂದು ಸೆಂಥಿಲ್ ಕುಮಾರ್ ತಿಳಿಸಿದರು.

ತಂತ್ರಜ್ಞಾನ ಮುಂದುವರಿದಿದ್ದು, ಸುನಾಮಿ, ಚಂಡಮಾರುತದಂತಹ ವಿಕೋಪಗಳನ್ನು ಮುಂಚಿತವಾಗಿ ಗುರುತಿಸಲು ಸಾಧ್ಯವಿದೆ. ಇದರಿಂದ ನಾಗರಿಕರ ಜೀವ ಉಳಿಸಲು ಸಾಧ್ಯವಾಗಿದೆ. ರಕ್ಷಣಾ ಕಾರ್ಯದ ಸಂದರ್ಭ ಮಕ್ಕಳು, ವೃದ್ದರು ಹಾಗೂ ಹಿರಿಯ ನಾಗರಿಕರ ರಕ್ಷಣೆಗೆ ಆದ್ಯತೆ ನೀಡಬೇಕು. ಸಾರ್ವಜನಿಕರ ಜೀವ ಉಳಿಸಲು ಆದ್ಯತೆ ನೀಡಬೇಕು ಎಂದರು.

ಪ್ರಾಕೃತಿಕ ವಿಕೋಪಗಳು ಎದುರಾಗುವ ಸಂದರ್ಭದಲ್ಲಿ ಹೆಚ್ಚು ಸಮಸ್ಯೆಗೀಡಾಗುವ ಜಿಲ್ಲೆಗಳನ್ನು ಎನ್‌ಡಿಆರ್‌ಎಫ್‌ನಿಂದ ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಅಣಕು ಕಾರ್ಯಾಚರಣೆ ಮೂಲಕ ವಿಕೋಪಗಳು ಎದುರಾಗುವ ಸಂದರ್ಭ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಅರಿವು ಮೂಡಿಸಲಾಗುತ್ತಿದೆ. ಅಗತ್ಯ ತರಬೇತಿ ಇಲ್ಲದಿದ್ದರೂ ಸಾಮಾನ್ಯ ವಿಧಾನಗಳ ಮೂಲಕ ಸಾರ್ವಜನಿಕರನ್ನು ಹೇಗೆ ರಕ್ಷಣೆ ಮಾಡಬೇಕು ಹಾಗೂ ವಿಶೇಷ ರಕ್ಷಣಾ ಕಾರ್ಯಚರಣೆ ವಿಧಾನಗಳನ್ನು ಜಿಲ್ಲಾಡಳಿತದ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸೆಂಥಿಲ್ ಕುಮಾರ್ ಹೇಳಿದರು.

ಈ ವರ್ಷ ಜಿಲ್ಲೆಯಲ್ಲಿ ಡಿ.1ರವರೆಗೆ 4,519 ಮಿ.ಮೀ ವಾಡಿಕೆ ಮಳೆ ಆಗಬೇಕಿದ್ದು, 5,140 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಶೇ 14ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಈ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ 77 ಗ್ರಾಮಗಳ 827 ಕುಟುಂಬಗಳ 2,874 ಮಂದಿಯನ್ನು ರಕ್ಷಿಸಲಾಗಿದೆ. 31 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 4,518 ಹಾನಿ ಪ್ರಕರಣಗಳಲ್ಲಿ ₹ 11.64 ಕೋಟಿ ಅಂದಾಜು ನಷ್ಟ ಸಂಭವಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಹಳ್ಳಿ ಮಾಹಿತಿ ನೀಡಿದರು.

ಡಿ.5ರಂದು ಬೆಳಿಗ್ಗೆ 8.30 ರಿಂದ 9.30ರವರೆಗೆ ಉದ್ಯಾವರ ನದಿ ತೀರದಲ್ಲಿ ಎನ್‌ಡಿಆರ್‌ಎಫ್‌ ಅಣಕು ಕಾರ್ಯಚರಣೆ ನಡೆಯಲಿದೆ. ಸಭೆಯಲ್ಲಿ ಪೊಲೀಸ್, ಅಗ್ನಿಶಾಮಕ ಮತ್ತು ಗೃಹರಕ್ಷಕ ದಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು