ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಜಿಲ್ಲೆಯಲ್ಲಿ ಐಸಿಯು ಬೆಡ್‌ಗಳು ಭರ್ತಿ

ಸೋಂಕು ಲಕ್ಷಣಗಳಿದ್ದರೆ ಪರೀಕ್ಷೆ ಮಾಡಿಸಿಕೊಳ್ಳಿ: ಸಮುದಾಯಕ್ಕೆ ಹರಡಿದರೆ ಕ್ರಿಮಿನಲ್ ಕೇಸ್‌: ಜಿಲ್ಲಾಧಿಕಾರಿ
Last Updated 5 ಸೆಪ್ಟೆಂಬರ್ 2020, 15:20 IST
ಅಕ್ಷರ ಗಾತ್ರ

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಹರಡಿರುವ ವದಂತಿಗಳನ್ನು ನಂಬಿ ತಂದೆ–ತಾಯಿ, ಅಜ್ಜ–ಅಜ್ಜಿ ಹಾಗೂ ಕುಟುಂಬದ ಪ್ರೀತಿ ಪಾತ್ರರ ಜೀವಕ್ಕೆ ಕುತ್ತು ತರಬೇಡಿ. ಸೋಂಕಿನ ಲಕ್ಷಣಗಳಿದ್ದರೆ ತಕ್ಷಣ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಶನಿವಾರ ಕಚೇರಿಯಲ್ಲಿ ಮಾತನಾಡಿದ ಅವರು, ‘ಜಾಲತಾಣಗಳ ಸುಳ್ಳು ಸುದ್ದಿಗಳನ್ನು ನಂಬಿ ಸಾರ್ವಜನಿಕರು ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಸೋಂಕಿನ ಲಕ್ಷಣಗಳಿದ್ದರೂ ಮನೆಯಲ್ಲಿಯೇ ಕಷಾಯ, ಮಾತ್ರೆಗಳನ್ನು ಸೇವಿಸಿ, ಮನೆಯವರಿಗೆ ಸೇರಿ ಸಮುದಾಯಕ್ಕೆ ಸೋಂಕು ಹರಡುತ್ತಿದ್ದಾರೆ’ ಎಂದರು.

ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದ ಬಳಿಕ ಐಸಿಯು ಚಿಕಿತ್ಸೆಗಾಗಿ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಐಸಿಯು ಬೆಡ್‌ಗಳಿಲ್ಲ.ಲಭ್ಯವಿದ್ದ ಎಲ್ಲ 82 ಐಸಿಯು ಬೆಡ್‌ಗಳು ಭರ್ತಿಯಾಗಿವೆ. ಸೋಂಕಿತರ ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ನಿರ್ಲಕ್ಷ್ಯದಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆತಂಕ ವ್ಯಕ್ತಪಡಿಸಿದರು.

ಸೋಂಕು ಪತ್ತೆಯಾದರೆ ಆಸ್ಪತ್ರೆಗೆ ದಾಖಲಾಗಬೇಕು ಎಂಬ ನಿಯಮವಿಲ್ಲ. ರೋಗ ಲಕ್ಷಣಗಳು ಇಲ್ಲದಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಸೋಂಕು ಸಮುದಾಯಕ್ಕೆ ಹರಡಬಾರದು, ಸಾವಿನ ಸಂಖ್ಯೆ ಹೆಚ್ಚಾಗಬಾರದು ಎಂಬುದಷ್ಟೆ ಜಿಲ್ಲಾಡಳಿತದ ಕಾಳಜಿ ಎಂದರು.

ಮನೆಯ ಒಬ್ಬರಲ್ಲಿ ಸೋಂಕು ಕಂಡುಬಂದರೆ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಶೇ 45ರಷ್ಟು ಜನರಲ್ಲಿ ಪಾಸಿಟಿವ್ ಕಂಡುಬರುತ್ತಿದೆ. ಹಾಗಾಗಿ, ಪ್ರಾಥಮಿಕ ಸಂಪರ್ಕಿತರು ನಿರ್ಲಕ್ಷ್ಯ ತೋರದೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳು ಭರ್ತಿಯಾಗಿವೆ. ಹೆಚ್ಚುವರಿ ಐಸಿಯು ಬೆಡ್‌ಗಳನ್ನು ಹಾಕಿದರೂ ನಿರ್ವಹಣೆಗೆ ತಜ್ಞ ಸಿಬ್ಬಂದಿ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಗೆ ಕೊರೊನಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವದಂತಿ ಕಾರಣ ಎಂದರು.

ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್‌ಪಿ ವಿಷ್ಣುವರ್ಧನ್‌, ಡಾ.ಟಿಎಂಎ ಪೈ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶಶಿಕಿರಣ್ ಉಮಾಕಾಂತ್‌, ಡಿಎಚ್‌ಒ ಸುಧೀರ್ ಚಂದ್ರ ಸೂಡಾ, ಕೋವಿಡ್‌ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್‌ ಇದ್ದರು.

‘ಕ್ರಿಮಿನಲ್‌ ಪ್ರಕರಣ: ಲೈಸೆನ್ಸ್‌ ರದ್ದು’

ಸೋಂಕಿನ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದೆ ಸಮುದಾಯಕ್ಕೆ ಹರಡಿದರೆ ಅಂಥವರ ವಿರುದ್ಧ ಎಪಿಡಮಿಕ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು.ಜತೆಗೆ, ಸೋಂಕಿನ‌ ಲಕ್ಷಣಗಳಿದ್ದರೂ ಪರೀಕ್ಷೆ ಮಾಡದೆ ರೋಗಿಗಳಿಗೆ ಮಾತ್ರೆ ಕೊಟ್ಟು ಮನೆಗೆ ಕಳುಹಿಸುವ ಆಸ್ಪತ್ರೆಗಳ ಹಾಗೂ ಕ್ಲಿನಿಕ್‌ಗಳ ಲೈಸೆನ್ಸ್‌ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT