ಮಂಗಳವಾರ, ಸೆಪ್ಟೆಂಬರ್ 28, 2021
22 °C
ನೀರು ಲಭ್ಯವಾಗದಿದ್ದರೆ ಪರಿಸ್ಥಿತಿ ಗಂಭೀರ

ಶೌಚಕ್ಕೆ ಮಾತ್ರ ನೀರು; ಪ್ರವಾಸಿಗರ ಸ್ನಾನಕ್ಕೂ ನೀರು ಸಿಗುತ್ತಿಲ್ಲ !

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‘ನೀರಿನ ಸಮಸ್ಯೆ ಇರುವುದರಿಂದ ಪರ ಊರಿನ ಯಾತ್ರಾತ್ರಿಗಳು ಮಾತ್ರ ಈ ಶೌಚಾಲಯ ಉಪಯೋಗಿಸಬೇಕು’..ಹೀಗೆ, ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿರುವ ಯಾತ್ರಿಕರ ಶೌಚಾಲಯದ ಎದುರು ಫಲಕ ಹಾಕಲಾಗಿದೆ. ಈ ಸಂದೇಶ ಉಡುಪಿಯಲ್ಲಿ ನೀರಿನ ಸಮಸ್ಯೆಯ ಗಂಭೀರತೆಯನ್ನು ವಿವರಿಸುತ್ತದೆ.

ಉಡುಪಿ ನಗರ ಹಾಗೂ 8 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುವ ಬಜೆ ಜಲಾಶಯ ಬರಿದಾಗಿರುವುದರಿಂದ ನೀರಿಗೆ ತತ್ವಾರ ಉಂಟಾಗಿದೆ. ಪರಿಣಾಮ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬರುತ್ತಿರುವ ಸಾವಿರಾರು ಪ್ರವಾಸಿಗರಿಗೆ ಸ್ನಾನ ಮಾಡಲು ನೀರು ಸಿಗುತ್ತಿಲ್ಲ.

ಶ್ರೀಕೃಷ್ಣಮಠದ ಪರಿಸರದಲ್ಲಿ 2 ಯಾತ್ರಾತ್ರಿಗಳ ಶೌಚಾಲಯಗಳಿದ್ದು, ನೀರಿನ ಸಮಸ್ಯೆ ಗಂಭೀರವಾಗಿರುವ ಕಾರಣ ಪ್ರವಾಸಿಗರ ಸ್ನಾನಕ್ಕೆ ನೀರು ಸಿಗುತ್ತಿಲ್ಲ. ಮಲ–ಮೂತ್ರ ವಿಸರ್ಜನೆಗೆ ಮಾತ್ರ ನೀರು ನೀಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಶೌಚಾಲಯಗಳನ್ನು ಮುಚ್ಚಬೇಕಾಗುತ್ತದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಸ್ಥಳೀಯರಿಗೆ ನಿಷಿದ್ಧ:

ಇಲ್ಲಿನ ಪಾರ್ಕಿಂಗ್ ಪ್ರದೇಶದಲ್ಲಿರುವ ಯಾತ್ರಾತ್ರಿಗಳ ಶೌಚಗೃಹಕ್ಕೆ ಸ್ಥಳೀಯರ ಪ್ರವೇಶ ನಿಷೇಧಿಸಲಾಗಿದೆ. ಶ್ರೀಕೃಷ್ಣಮಠಕ್ಕೆ ಭೇಟಿನೀಡುವ ಪ್ರವಾಸಿಗರು ಮಾತ್ರ ಶೌಚಾಲಯ ಬಳಸಬೇಕು ಎಂದು ಬೋರ್ಡ್‌ ಹಾಕಲಾಗಿದೆ.

ಈ ಕುರಿತು ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ ‘ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸ್ಥಳೀಯರಿಗೆ ಅವಕಾಶ ನೀಡುತ್ತಿಲ್ಲ. ಸ್ನಾನಕ್ಕೆ ನೀರಿಲ್ಲ. ಮಲ–ಮೂತ್ರ ವಿಸರ್ಜಿಸಲು ನೀರು ಕೊಡಲಾಗುತ್ತಿದೆ’ ಎಂದರು.‌

ಶೌಚಾಲಯ ಬಳಕೆಗೆ ಹಣ ಪಡೆಯುವುದಿಲ್ಲ. ನಿತ್ಯ 500ಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೆಳಿಗ್ಗೆ 2 ಟ್ಯಾಂಕರ್ ನೀರನ್ನು ಸಂಪ್ ಹಾಗೂ ಸಿಂಟೆಕ್ಸ್‌ಗೆ ಭರ್ತಿ ಮಾಡುತ್ತೇವೆ. ಸಂಜೆಯಷ್ಟರಲ್ಲಿ ಖಾಲಿಯಾಗುತ್ತದೆ. ಮಳೆ ಬರುವವರೆಗೂ ಸಮಸ್ಯೆ ಇರಲಿದೆ ಎಂದರು.

ಮಧ್ವ ಸರೋವರದ ಬಳಿಯಿರುವ ಶೌಚಗೃಹದಲ್ಲೂ ಸ್ನಾನಕ್ಕೆ ನೀರು ಸಿಗುತ್ತಿಲ್ಲ. ನೀರಿಲ್ಲದೆ ಕಳೆದ ವಾರ 2 ದಿನ ಶೌಚಾಲಯ ಬಂದ್ ಮಾಡಲಾಗಿತ್ತು. ಪ್ರವಾಸಿಗರಿಗೆ ತೊಂದರೆಯಾಗಿದ್ದರಿಂದ ಮತ್ತೆ ಆರಂಭಿಸಿದ್ದೇವೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ನೀರಿನ ಸಮಸ್ಯೆ ಇಲ್ಲದಿರುವಾಗ ಪ್ರತಿದಿನ 400 ರಿಂದ 500 ಪ್ರವಾಸಿಗರು ಸ್ನಾನ ಮಾಡುತ್ತಿದ್ದರು. ಈಗ ಶೌಚಕ್ಕೆ ಸಾಲುವಷ್ಟು ಮಾತ್ರ ನೀರು ಸಿಗುತ್ತಿದೆ. ದಿನಕ್ಕೆ 50,000 ಲೀಟರ್ ನೀರು ಹಾಕಿಸಿಕೊಂಡರೂ ಸಾಲುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನಗರದ ಸಾರ್ವಜನಿಕ ಶೌಚಾಲಯಗಳಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ. ಹಲವು ಶೌಚಾಲಯಗಳು ಈಗಾಗಲೇ ಬಾಗಿಲು ಹಾಕಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು