ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಕೈಗೆಟುಕದ ಆನ್‌ಲೈನ್‌ ‌ಪಾಠ: ಪೋಷಕರಿಗೆ ಶುಲ್ಕ ಪಾವತಿ ಸಂಕಟ

ಜಿಲ್ಲೆಯಾದ್ಯಂತ ಆನ್‌ಲೈನ್‌ ತರಗತಿಗಳು ಆರಂಭ; 1,48,222 ವಿದ್ಯಾರ್ಥಿಗಳ ದಾಖಲಾತಿ
Last Updated 4 ಜುಲೈ 2021, 19:30 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌–19 ಕಾರಣದಿಂದ ಕಳೆದ ವರ್ಷ ಮಕ್ಕಳು ಸರಿಯಾಗಿ ಶಾಲೆಯ ಮುಖ ನೋಡಲು ಸಾಧ್ಯವಾಗಲಿಲ್ಲ. ಈ ವರ್ಷವೂ ಶಾಲೆಗಳ ಆರಂಭಕ್ಕೆ ಕೊರೊನಾ ಮೂರನೇ ಅಲೆ ಅಡ್ಡಿಯಾಗುವ ಆತಂಕ ಕಾಡುತ್ತಿದ್ದು, ಸದ್ಯಕ್ಕೆ ಮಕ್ಕಳಿಗೆ ಆನ್‌ಲೈನ್ ಶಿಕ್ಷಣವೇ ಗತಿ ಎಂಬಂತಾಗಿದೆ. ಆದರೆ, ಜಿಲ್ಲೆಯಲ್ಲಿ ಆನ್‌ಲೈನ್‌ ಶಿಕ್ಷಣ ಪಡೆಯಲು ಅಗತ್ಯ ಸೌಲಭ್ಯಗಳಿಲ್ಲದ ಸಾವಿರಾರು ಮಕ್ಕಳಿದ್ದು, ಅವರ ಶೈಕ್ಷಣಿಕ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿರುವ 2,688 ವಿದ್ಯಾರ್ಥಿಗಳ ಮನೆಯಲ್ಲಿ ಸ್ಮಾರ್ಟ್ ಫೋನ್‌ಗಳಿಲ್ಲ, ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠ ಕೇಳಲೂ ಮನೆಗಳಲ್ಲಿ ಟಿ.ವಿ ಇಲ್ಲ.

ಇನ್ನೂ ಸ್ಮಾರ್ಟ್ ಫೋನ್‌ ಇಲ್ಲದ ವಿದ್ಯಾರ್ಥಿಗಳ ಸಂಖ್ಯೆ 25,832. ಕೀಪ್ಯಾಡ್‌ ಮೊಬೈಲ್‌ ಅಂದರೆ ಸ್ಮಾರ್ಟ್‌ ಫೋನ್‌ ಅಲ್ಲದ ಮೊಬೈಲ್‌ಗಳನ್ನು ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆಯೇ 12,624 ಇದೆ. ಇವರೆಲ್ಲರಿಗೂ ಆದ್ಯತೆಯ ಮೇಲೆ ಶಿಕ್ಷಣ ನೀಡಬೇಕಾದ ಸವಾಲು ಹಾಗೂ ಹೊಣೆಗಾರಿಕೆ ಶಿಕ್ಷಣ ಇಲಾಖೆಯ ಮೇಲಿದೆ.

ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸ್ಮಾರ್ಟ್‌ ಫೋನ್‌ ಸೌಲಭ್ಯ ಇಲ್ಲದ, ಚಂದನ ವಾಹಿನಿ ವೀಕ್ಷಣೆಗೂ ವ್ಯವಸ್ಥೆ ಇಲ್ಲದ ಜಿಲ್ಲೆಯ 2,688 ವಿದ್ಯಾರ್ಥಿಗಳನ್ನು ಗುರುತಿಸಿದ್ದು, ಅವರಿಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಶಿಕ್ಷಣ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಟಿ.ವಿ ಇಲ್ಲದ ಮಕ್ಕಳಿಗೆ ಟಿ.ವಿ ವೀಕ್ಷಣೆಗೆ ಅನುಕೂಲ ಮಾಡಿಕೊಡುವಂತೆ ಹಳ್ಳಿಗಳಿಗೆ ತೆರಳಿ ಅಕ್ಕಪಕ್ಕದ ಮನೆಗಳಿಗೆ ಮನವಿ ಮಾಡಲಗುತ್ತಿದೆ ಎನ್ನುತ್ತಾರೆ ಡಿಡಿಪಿಐ ಎನ್‌.ಎಚ್‌.ನಾಗೂರ.

ಚಂದನ ವಾಹಿನಿಯಲ್ಲಿ ಜುಲೈ 5ರಿಂದ ಪ್ರಸಾರವಾಗುವ ವಿದ್ಯಾಗಮ ಸಂವೇದ ದೂರದರ್ಶನ ಆಧಾರಿತ ಕಲಿಕಾ ಕಾರ್ಯಕ್ರಮ ವೀಕ್ಷಣೆಗೆ ಟಿ.ವಿ ಇಲ್ಲದ ವಿದ್ಯಾರ್ಥಿಗಳಿಗೆ ‌ಅನುಕೂಲ ಮಾಡಿಕೊಡುವಂತೆ ಚುನಾಯಿತ ಪ್ರತಿನಿಧಿಗಳು, ಎಸ್‌ಡಿಎಂಸಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರಿಗೆ ಮನವಿ ಮಾಡಲಾಗಿದೆ. ಜತೆಗೆ, ಸ್ಮಾರ್ಟ್‌ಫೋನ್ ಇಲ್ಲದ ಮಕ್ಕಳಿಗೆ ಪಾಠಕೇಳಲು ಮೊಬೈಲ್‌ ಬಳಕೆಗೆ ಅವಕಾಶ ನೀಡುವಂತೆಯೂ ಕೋರಲಾಗುತ್ತಿದೆ ಎಂದರು ಡಿಡಿಪಿಐ.

ಟಿವಿ ಹಾಗೂ ಮೊಬೈಲ್ ಇಲ್ಲದ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿನೀಡಿ ವರ್ಕ್‌ಶೀಟ್‌ಗಳನ್ನು ವಿತರಿಸುತ್ತಿದ್ದು, ವಾರಕ್ಕೊಮ್ಮೆ ವಿದ್ಯಾರ್ಥಿಗಳಿಂದ ವರ್ಕ್‌ಶೀಟ್ ಸಂಗ್ರಹಿಸಿ ಕಲಿಕೆ ಸ್ಥಗಿತವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಪದವೀಧರರು, ವಿದ್ಯಾವಂತರು ಸೇವಾ ಮನೋಭಾವದಿಂದ ಪಾಠ ಮಾಡುವಂತೆ ಮನವಿ ಮಾಡಲಾಗಿದೆ ಎನ್ನುತ್ತಾರೆ ಡಿಡಿಪಿಐ.

2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸಲು ಸರ್ಕಾರದಿಂದ ಆದೇಶ ಬಂದಿದ್ದು, ಆನ್‍ಲೈನ್‌ನಲ್ಲಿ ಕಲಿಕೆ ಆರಂಭವಾಗಿವೆ. ಮಕ್ಕಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಿ ಪ್ರತಿ ಶಾಲೆಯಲ್ಲಿ 10 ರಿಂದ 15 ಮಕ್ಕಳ ಗುಂಪು ಮಾಡಿ ಒಬ್ಬರು ಶಿಕ್ಷಕರನ್ನು ಮೆಂಟರ್ ಆಗಿ ನೇಮಿಸಲಾಗಿದೆ. ಗುಂಪಿನ ಕಲಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಮೆಂಟರ್‌ಗೆ ವಹಿಸಲಾಗಿದೆ.

1-10ನೇ ತರಗತಿಗೆ ಆನ್‌ಲೈನ್‌ನಲ್ಲಿ ಪರ್ಯಾಯ ಭೋಧನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಕಲಿಕಾ ವಿಧಾನ ಹೇಗಿರಬೇಕು ಎಂಬ ಬಗ್ಗೆ ಜೂನ್ 21ಕ್ಕೆ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ. ಅದಕ್ಕೆ ಅನುಗುಣವಾಗಿ ಶಿಕ್ಷಕರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದರು ಡಿಡಿಪಿಐ.

ಜುಲೈನಲ್ಲಿ ಎಲ್ಲ ತರಗತಿಗಳಿಗೆ ಸೇತುಬಂಧ ಕಾರ್ಯಕ್ರಮ ಮಾಡಲಾಗುತ್ತದೆ. ತಿಂಗಳು ಪೂರ್ತಿ ಹಿಂದಿನ ವರ್ಷದ ಕಲಿಕೆಯ ಅಭ್ಯಾಸ ಮಾಡಿಸಿ ತಿಂಗಳ ಕೊನೆಯಲ್ಲಿ ಸಾಫಲ್ಯ ಪರೀಕ್ಷೆ ಮಾಡಲಾಗುವುದು. ಇದರ ಜತೆಗೆ, ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ವಿದ್ಯಾಗಮ ಸಂವೇದ ಕಾರ್ಯಕ್ರಮದ ವೇಳಾಪಟ್ಟಿಯನ್ನು ಮಕ್ಕಳಿಗೆ ತಿಳಿಸಲಾಗಿದೆ. ಟಿವಿ ವ್ಯವಸ್ಥೆ ಇಲ್ಲದ ಮಕ್ಕಳನ್ನು ಹೊರತುಪಡಿಸಿ ಉಳಿದ ಎಲ್ಲ ವಿದ್ಯಾರ್ಥಿಗಳಿಗೂ ಇದರ ಪ್ರಯೋಜನ ಸಿಗಲಿದೆ ಎಂದರು.

‌ಪಠ್ಯಪುಸ್ತಕ ಬಂದಿಲ್ಲ:

ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳು ಬಂದಿಲ್ಲ. ಸಮಸ್ಯೆಗೆ ಪರಿಹಾರವಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಪಠ್ಯಪುಸ್ತಕ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಹಿಂದಿನ ವರ್ಷ ಕಲಿತಿರುವ ವಿದ್ಯಾರ್ಥಿಗಳಿಂದ ಪಠ್ಯ ಪುಸ್ತಕಗಳನ್ನು ಪಡೆದು, ಮುಂದಿನ ತರಗತಿಗೆ ತೆರಳುವ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದೆ. ಆಗಸ್ಟ್‌ನಲ್ಲಿ ಸರ್ಕಾರದಿಂದ ಪುಸ್ತಕಗಳು ಬರಲಿದ್ದು, ಅಲ್ಲಿಯವರೆಗೂ ಸೇತುಬಂಧ ಕಾರ್ಯಕ್ರಮ ನಡೆಯಲಿದೆ ಎಂದರು ಡಿಡಿಪಿಐ.

ಬಾಕಿ ಶುಲ್ಕ ಕಟ್ಟದಿದ್ದರೆ ಆನ್‌ಲೈನ್‌ ಕ್ಲಾಸ್‌ ಇಲ್ಲ:

ಇವೆಲ್ಲವುಗಳ ನಡುವೆ ಕಳೆದ ವರ್ಷದ ಶುಲ್ಕ ಪಾವತಿಸದಿದ್ದರೆ ಆನ್‌ಲೈನ್ ತರಗತಿಗೆ ಹಾಜರಾಗುವಂತಿಲ್ಲ ಎಂದು ಶಾಲಾ ಮುಖ್ಯಸ್ಥರು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಸರ್ಕಾರ ಶೇ 70ರಷ್ಟು ಶುಲ್ಕ ಪಡೆಯುವಂತೆ ಮೌಖಿಕ ಆದೇಶ ನೀಡಿದ್ದರೂ ಖಾಸಗಿ ಶಾಲೆಗಳು ಪೂರ್ಣ ಶುಲ್ಕ ವಸೂಲು ಮಾಡುತ್ತಿವೆ. ಕೇಳಿದರೆ ಸರ್ಕಾರದಿಂದ ಯಾವ ಆದೇಶವೂ ಬಂದಿಲ್ಲ ಎಂದು ಉಡಾಫೆಯಿಂದ ಉತ್ತರಿಸುತ್ತಾರೆ ಎನ್ನುತ್ತಾರೆ ಪೋಷಕರಾದ ಮಹಾಲಿಂಗು.

ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಮಾನವೀಯತೆ ದೃಷ್ಟಿಯಿಂದ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು. ಶುಲ್ಕ ಪಾವತಿಗೆ ಸುಲಭ ಕಂತುಗಳನ್ನು ನೀಡಬೇಕು. ಇಲ್ಲವಾದರೆ, ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಶಿಕ್ಷಣ ವಂಚಿತರಾಗಬೇಕಾಗುತ್ತದೆ ಎನ್ನುತ್ತಾರೆ ಪೋಷಕರಾದ ರಾಜಶೇಖರ್‌.

‘ಶುಲ್ಕ ವಸೂಲಿಗೆ ಬಲವಂತ ಮಾಡುವಂತಿಲ್ಲ’

ಶಾಸಗಿ ಶಾಲೆಗಳು ಪೋಷಕರಿಂದ ಬಲವಂತವಾಗಿ ಶುಲ್ಕ ವಸೂಲಿ ಮಾಡುವಂತಿಲ್ಲ. ಕಳೆದ ವರ್ಷದ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಮುಂದಿನ ವರ್ಷಕ್ಕೆ ಪ್ರವೇಶಾತಿ ನಿರಾಕರಿಸುವಂತಿಲ್ಲ. ಶುಲ್ಕ ಪಾವತಿಸದ ಕಾರಣಕ್ಕೆ ಆನ್‌ಲೈನ್‌ ಕಲಿಕೆ ನೀಡಲು ನಿರಾಕರಿಸಿದರೆ, ಪೋಷಕರು ಶಿಕ್ಷಣ ಇಲಾಖೆಗೆ ಲಿಖಿತ ದೂರು ಸಲ್ಲಿಸಬಹುದು. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ದೂರುಗಳನ್ನು ಪರಿಶೀಲಿಸಿ ಪೋಷಕರ ಆರೋಪ ಸಾಬೀತಾದರೆ ಖಾಸಗಿ ಶಾಲೆಗಳ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.

–ಎನ್‌.ಎಚ್‌.ನಾಗೂರ, ಡಿಡಿಪಿಐ‌

****

ಸರ್ಕಾರಿ, ಅನುದಾನಿತ, ಖಾಸಗಿ ಪ್ರೌಢಶಾಲೆಗಳ ವಿವರ

ಮೊಬೈಲ್ ಸಂಪರ್ಕ ಇಲ್ಲದ, ಚಂದನ ವಾಹಿನಿ ಲಭ್ಯತೆ ಇಲ್ಲದ ವಿದ್ಯಾರ್ಥಿಗಳ ಸಂಖ್ಯೆ–560

ಚಂದನ ವಾಹಿನಿ ಮಾತ್ರ ಲಭ್ಯತೆ ಇರುವ ವಿದ್ಯಾರ್ಥಿಗಳು–4880

ಕೀಪ್ಯಾಡ್‌ ಮೊಬೈಲ್ ಇರುವ ವಿದ್ಯಾರ್ಥಿಗಳು–3394

ಇಂಟರ್‌ನೆಟ್‌, ಸ್ಮಾರ್ಟ್‌ ಫೋನ್‌, ಲ್ಯಾಪ್‌ಟಾಪ್ ಸೌಲಭ್ಯ ಇರುವ ವಿದ್ಯಾರ್ಥಿಗಳು–36,562

ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಶಾಲೆಗಳ ವಿವರ

–––––––––––––––––––––––––––––––––––––

ಮೊಬೈಲ್ ಸಂಪರ್ಕ ಇಲ್ಲದ, ಚಂದನ ವಾಹಿನಿ ಲಭ್ಯತೆ ಇಲ್ಲದ ವಿದ್ಯಾರ್ಥಿಗಳ ಸಂಖ್ಯೆ–2,128

ಚಂದನ ವಾಹಿನಿ ಮಾತ್ರ ಲಭ್ಯತೆ ಇರುವ ವಿದ್ಯಾರ್ಥಿಗಳು–21,152

ಕೀಪ್ಯಾಡ್‌ ಮೊಬೈಲ್ ಇರುವ ವಿದ್ಯಾರ್ಥಿಗಳು–9,730

ಇಂಟರ್‌ನೆಟ್‌, ಸ್ಮಾರ್ಟ್‌ ಫೋನ್‌, ಲ್ಯಾಪ್‌ಟಾಪ್ ಸೌಲಭ್ಯ ಇರುವ ವಿದ್ಯಾರ್ಥಿಗಳು–84,876

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT