ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸೋಂಕಿತರ ಜೀವ ಉಳಿಸುವ ಪ್ರಾಣವಾಯುವಿಗಿಲ್ಲ ಕೊರತೆ

ಜಿಲ್ಲಾ ಆಸ್ಪತ್ರೆಯಲ್ಲಿ 50 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಸ್ಥಾವರ ನಿರ್ಮಾಣ; ಶೀಘ್ರ ಉದ್ಘಾಟನೆ
Last Updated 21 ಅಕ್ಟೋಬರ್ 2020, 16:21 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ತಿಂಗಳ ಹಿಂದೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕ ಸಿಲಿಂಡರ್‌ಗಳ ಸಮಸ್ಯೆ ಎದುರಾಗಿತ್ತು. ಈಗ ಸಮಸ್ಯೆ ನಿವಾರಣೆಯಾಗಿದ್ದು, ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 6,000 ಲೀಟರ್‌ ಸಾಮರ್ಥ್ಯದ ದ್ರವರೂಪದ ಆಮ್ಲಜನಕ ಸ್ಥಾವರ ನಿರ್ಮಿಸಲಾಗಿದೆ.

₹ 50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ಥಾವರದಲ್ಲಿ ಬರೋಬ್ಬರಿ 660 ಜಂಬೋ ಸಿಲಿಂಡರ್‌ಗಳಲ್ಲಿ ತುಂಬಿಸುವಷ್ಟು ಆಮ್ಲಜನಕವನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಈ ಮೂಲಕ ಆಮ್ಲಜನಕದ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ ಎನ್ನುತ್ತಾರೆ ಜಿಲ್ಲಾ ಸರ್ಜನ್‌ ಡಾ.ಮಧುಸೂದನ್ ನಾಯಕ್‌.

ಕೊರೊನಾಗಿಂತ ಮುಂಚೆ ಜಿಲ್ಲಾ ಆಸ್ಪತ್ರೆಯಲ್ಲಿ 10 ರಿಂದ 15 ಆಮ್ಲಜನಕ ಸಿಲಿಂಡರ್‌ಗಳು ಬಳಕೆಯಾಗುತ್ತಿದ್ದವು. ಕೋವಿಡ್‌ ವ್ಯಾಪಕವಾದ ನಂತರ ಸೋಂಕಿತರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾದ ಪರಿಣಾಮ ಆಮ್ಲಜನಕಕ್ಕೆ ದಿಢೀರ್ ಬೇಡಿಕೆ ಹೆಚ್ಚಾಯಿತು. ದಿನಕ್ಕೆ 30 ರಿಂದ 40 ಸಿಲಿಂಡರ್‌ಗಳ ಅವಶ್ಯಕತೆ ಬೀಳುತ್ತಿತ್ತು. ಪ್ರತಿದಿನ ಸಿಲಿಂಡರ್ ಹೊಂದಿಸುವುದೇ ಕಷ್ಟವಾಗುತ್ತಿತ್ತು. ಈಗ ಆ ಸಮಸ್ಯೆ ಇಲ್ಲ ಎಂದರು ಸರ್ಜನ್‌.

ಬಳ್ಳಾರಿಯ ತಯಾರಿಕಾ ಘಟಕದಿಂದ ದ್ರವರೂಪದ ಆಮ್ಲಜನಕವನ್ನು ತರಿಸಿಕೊಂಡು ಸ್ಥಾವರದಲ್ಲಿ ಸಂಗ್ರಹಿಸಲಾಗುತ್ತದೆ. ಹಿಂದೆ, ಶುಶ್ರೂಷಕರು ಸಿಲಿಂಡರ್‌ ಖಾಲಿಯಾದ ಕೂಡಲೇ ತಕ್ಷಣ ಬದಲಿಸಬೇಕಿತ್ತು. ಈಗ ಆ ಸಮಸ್ಯೆಯಿಲ್ಲ. ಸ್ಥಾವರದಿಂದ ನೇರವಾಗಿ ಪೈಪ್‌ಗಳ ಮೂಲಕ ಆಸ್ಪತ್ರೆಯಲ್ಲಿ ಆಮ್ಲಜನಕ ವ್ಯವಸ್ಥೆ ಹೊಂದಿರುವ ಬೆಡ್‌ಗಳಿಗೆ ಅನಿಲ ರೂಪದ ಆಕ್ಷಿಜನ್‌ ಪೂರೈಕೆಯಾಗುತ್ತದೆ. ಈ ವ್ಯವಸ್ಥೆಯಿಂದ ರೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ ಮಧುಸೂದನ್ ನಾಯಕ್‌.

ರಾಜ್ಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾಗಿ ಬೇಕಿದ್ದ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಎದುರಾದಾಗ ರಾಜ್ಯ ಸರ್ಕಾರ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರ ನಿರ್ಮಾಣ ಮಾಡಲು ಆದೇಶಿಸಿತ್ತು. ಅದರಂತೆ, ನಿರ್ಮಿಸಲಾಗಿದೆ. ಇದರಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕೊರೊನಾ ರೋಗಿಗಳ ಜೀವ ಉಳಿಸಲು ಸಹಕಾರಿಕಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT