ಪಡುಬಿದ್ರಿ: ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್‌ಫೇರ್ ಟ್ರಸ್ಟ್, ಸಿರಿಮುಡಿ ದತ್ತಿನಿಧಿಯ ಸಹಭಾಗಿತ್ವದಲ್ಲಿ ನೀಡುವ ‘ಶ್ರೀಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ’ಯನ್ನು ಬೆಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಪಡುಬಿದ್ರಿಯ ಅಭಿಮಾನಿ ಬಳಗದ ಪ್ರೀತಿ ಅಮೋಘವಾಗಿದೆ. ಇಂದಿನ ನಿತ್ಯಾನಂದಾನುಗ್ರಹ ಪ್ರಶಸ್ತಿ ಸನ್ಮಾನವು ಅವಿಸ್ಮರಣೀಯ. ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಇಲ್ಲಿನ ದೇವಳದ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗೋಣ. ಇದಕ್ಕಾಗಿ ₹5 ಕೋಟಿ ದೇಣಿಗೆ ನೀಡಲಿದ್ದೇನೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು’ ಎಂದು ಕರೆ ನೀಡಿದರು.
ಬೆಂಗಳೂರು ಬಂಟ್ಸ್ ಸಂಘದ ಅಧ್ಯಕ್ಷ ಸಿ.ಎ ಅಶೋಕ್ ಶೆಟ್ಟಿ ‘ಸೋಶಿಯಲ್ ವೆಲ್‌ಫೇರ್ ಕಾರ್ಯಕ್ರಮ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿ ಅವರು, ‘ದೇಶ–ವಿದೇಶಗಳ ಬಂಟ ಬಾಂಧವರಿಂದಲೂ ಸಹಾಯ ಪಡೆದು ವಿದ್ಯಾರ್ಥಿಗಳಿಗೆ ಹಂಚೋಣ. ವಿದ್ಯಾಭ್ಯಾಸದಿಂದಲೂ ಸಮಾಜ ಬಲಯುತವಾಗಬಲ್ಲದು’ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ‘ನಮ್ಮ ಬದುಕು ಸಮಾಜದ ಋಣ ತೀರಿಸುವ ಬದುಕಾಗಬೇಕು. ಪ್ರಕಾಶ ಶೆಟ್ಟಿ ಅವರಂತಹ ಅದರ್ಶ ವ್ಯಕ್ತಿತ್ವಗಳು ಮತ್ತಷ್ಟು ಮೂಡಿಬರಲಿ’ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ‘ಮಾನವ ಸಂಪನ್ಮೂಲ ಸದ್ಬಳಕೆಯಲ್ಲಿ ಬಂಟ ಸಮಾಜ ಮುಂಚೂಣಿಯಲ್ಲಿದೆ. ವಿದ್ಯಾರ್ಥಿವೇತನ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಕೊಡುಗೆಯಿತ್ತವರನ್ನು ಮರೆಯಬಾರದು’ ಎಂದರು.
ಕರುಣಾಕರ ಅರ್. ಶೆಟ್ಟಿ, ಪುಣೆ ಉದ್ಯಮಿ ಎರ್ಮಾಳು ಪುಚ್ಚೊಟ್ಟು ಸೀತಾರಾಮ ಶೆಟ್ಟಿ, ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಎರ್ಮಾಳ್ ಶಶಿಧರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಶ್ರೀನಾಥ್ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷೆ ನವೀನ್ ಎನ್. ಶೆಟ್ಟಿ ಇದ್ದರು.
ಸಿರಿಮುಡಿ ದತ್ತಿನಿಧಿಯ ಸ್ಥಾಪಕಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಪ್ರಸ್ತಾವಿಸಿದರು. ಜಯ ಶೆಟ್ಟಿ ಪದ್ರ, ಡಾ.ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Cut-off box - ಕಾರ್ಯಕ್ರಮದ ವಿಶೇಷತೆಗಳು ಪಡುಬಿದ್ರಿ–ಕಾರ್ಕಳ ರಾಜ್ಯ ಹೆದ್ದಾರಿಯಿಂದ ಬಂಟರ ಭವನದವರೆಗೆ ವಿವಿಧ ಟ್ಯಾಬ್ಲೊಗಳೊಂದಿಗೆ ಕೆ.ಪ್ರಕಾಶ್ ಶೆಟ್ಟಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ₹15 ಲಕ್ಷ ವಿದ್ಯಾರ್ಥಿ ವೇತನ ವಿಧವಾ ವೇತನ ವಿಶೇಷ ಚೇತನರಿಗೆ ಧನಸಹಾಯ ವಿತರಿಸಲಾಯಿತು. ಬಂಟಾಶ್ರಯ ಯೋಜನೆಗಾಗಿ ಸ್ಥಳವನ್ನಿತ್ತ ಮಾರ್ಕ್ಸ್ ಡಿಸೋಜಗೆ ಮುಂಬೈ ಉದ್ಯಮಿ ಎಲ್ಲೂರು ಗುತ್ತು ಪ್ರವೀಣ್ ಭೋಜ ಶೆಟ್ಟಿ ಅವರ ಪರವಾಗಿ ಮುಂಗಡ ಹಣ ಹಸ್ತಾಂತರಿಸಲಾಯಿತು. ಸಿರಿಮುಡಿ ಕ್ರೆಡಿಟ್ ಕೋ–ಆಪರೇಟಿವ್ ಸಂಘ ಅಂತರ್ ರಾಜ್ಯ ಬಂಟ ಕ್ರೀಡೋತ್ಸವದ ಮಾಹಿತಿ ಕೈಪಿಡಿ ಸಿಡಿಮುಡಿ ದತ್ತಿನಿಧಿ ಕೋ-ಆಪರೇಟಿವ್ ಸೊಸೈಟಿಯ ಠೇವಣಾತಿ ಪತ್ರ ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.