ಭಾನುವಾರ, ಏಪ್ರಿಲ್ 11, 2021
29 °C
ದೇಶದ 12 ಬೀಚ್‌ಗಳನ್ನು ಆಯ್ಕೆಮಾಡಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಪಡುಬಿದ್ರಿ ಬೀಚ್‌ಗೆ ಶೀಘ್ರ ‘ಬ್ಲೂ ಫ್ಲಾಗ್’ ಗರಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಬೀಚ್‌ಗೆ ಪ್ರತಿಷ್ಠಿತ ‘ಬ್ಲೂಫ್ಲಾಗ್ ಮಾನ್ಯತೆ‍’ಯ ಹಿರಿಮೆ ಸಧ್ಯದಲ್ಲೇ ಸಿಗಲಿದೆ. ಕೇಂದ್ರ ಪರಿಸರ, ಅರಣ್ಯ ಹಾಗೂ ವಾತಾವರಣ ಬದಲಾವಣೆ ಮಂತ್ರಾಲಯ ದೇಶದ 12 ಬೀಚ್‌ಗಳನ್ನು ಬ್ಲೂಫ್ಲಾಗ್ ಮಾನ್ಯತೆಗೆ ಆಯ್ಕೆ ಮಾಡಿದ್ದು, ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ಪಡುಬಿದ್ರಿ ಬೀಚ್‌ ಕೂಡ ಸೇರಿವೆ.

ಏನಿದು ಬ್ಲೂ ಫ್ಲಾಗ್:

ಕಡಲತೀರದ ಗುಣಮಟ್ಟ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿದ್ದರೆ ಡೆನ್ಮಾರ್ಕ್‌ನ ಫೌಂಡೇಷನ್‌ ಫಾರ್ ಎನ್‌ವಿರಾನ್‌ಮೆಂಟ್‌ ಎಜುಕೇಷನ್‌ ಎಂಬ ಸ್ವಯಂ ಸೇವಾ ಸಂಸ್ಥೆ ಬ್ಲೂಫ್ಲಾಗ್ ಮಾನ್ಯತೆ ನೀಡುತ್ತದೆ. ಸಧ್ಯ ಭಾರತದ ಯಾವ ಬೀಚ್‌ಗಳು ಬ್ಲೂಫ್ಲಾಗ್ ಮಾನ್ಯತೆ ಪಡೆದಿಲ್ಲ ಎಂಬುದು ವಿಶೇಷ.

ಬೀಚ್‌ನಲ್ಲಿ ಯಾವ ಸೌಲಭ್ಯಗಳು ಇರಬೇಕು:

ಬ್ಲೂಫ್ಲಾಗ್ ಮಾನ್ಯತೆ ಪಡೆಯಬೇಕಾದರೆ ಬೀಚ್‌ನಲ್ಲಿ ಕಂಟೇನರ್ ಬೇಸಡ್‌ ಟಾಯ್ಲಟ್ ಬ್ಲಾಕ್ಸ್‌, ಬಟ್ಟೆ ಬದಲಾವಣೆಗೆ ಕೋಣೆ, ಸ್ನಾನ ಗೃಹಗಳು ಇರಬೇಕು. ನೀರು ಶುದ್ಧೀಕರಣ ಘಟಕ, ಘನತ್ಯಾಜ್ಯ ನಿರ್ವಹಣಾ ಘಟಕ, ಸೋಲಾರ್ ವ್ಯವಸ್ಥೆ, ಶುದ್ಧೀಕರಿಸಿದ ನೀರಿನ ಘಟಕಗಳನ್ನು ಅಳವಡಿಸಬೇಕು.

ಬೀಚ್‌ನಿಂದ ಸ್ನಾನದ ಗೃಹಗಳಿಗೆ ತೆರಳಲು ಪ್ರತ್ಯೇಕ ದಾರಿ, ಎಲ್‌ಇಡಿ ಲೈಟಿಂಗ್ ವ್ಯವಸ್ಥೆ, ಕೂರಲು ನೈಸರ್ಗಿಕ ಬಂಬೂವಿನಿಂದ ಮಾಡಿದ ಬೆಂಚ್‌ಗಳು, ಬಿಸಿಲಿನಿಂದ ರಕ್ಷಣೆ ಪಡೆಯಲು ಛತ್ರಿಗಳ ವ್ಯವಸ್ಥೆ ಇರಬೇಕು.

ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಜಾಗ, ಬೀಚ್‌ಗೆ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಕೇಂದ್ರ, ಬೀಚ್‌ನ ಮಾಹಿತಿ ತಿಳಿಸುವ ಬೋರ್ಡ್‌ಗಳು, ಬೀಚ್‌ನ ಲೇಔಟ್‌ ಮ್ಯಾಪ್‌ಗಳ ವ್ಯವಸ್ಥೆ ಇರಬೇಕು.

ಮಾನ್ಯತೆ ನೀಡುವುದು ಹೇಗೆ ?

ಅಂತರರಾಷ್ಟ್ರೀಯ ಗುಣಮಟ್ಟದ ಕಡಲತೀರಗಳಲ್ಲಿ ಸಿಗುವ ಸೌಲಭ್ಯಗಳನ್ನು ಅಳವಡಿಸಿಕೊಂಡ ಬಳಿಕ ಕೇಂದ್ರ ಸರ್ಕಾರವು ಡೆನ್ಮಾರ್ಕ್‌ನ ಎಫ್‌ಇಇ ಸಂಸ್ಥೆಗೆ ಮಾಹಿತಿ ನೀಡುತ್ತದೆ. ಬಳಿಕ ಸಂಸ್ಥೆಯ ಪ್ರತಿನಿಧಿಗಳು ಖುದ್ದು ಭೇಟಿನೀಡಿ ಎಲ್ಲ ಮಾನದಂಡಗಳು ಪರಿಶೀಲಿಸಿ ಸರಿಯಾಗಿದ್ದರೆ ಬ್ಲೂಫ್ಲಾಗ್ ಮಾನ್ಯತೆ ನೀಡುತ್ತಾರೆ. ಕಾಲಕಾಲಕ್ಕೆ ಸಂಸ್ಥೆ ನಿರಂತರವಾಗಿ ಮೌಲ್ಯಮಾಪನ ನಡೆಸುತ್ತಾರೆ.

ಪಡುಬಿದ್ರಿ ಆಯ್ಕೆಯಾಗಿದ್ದು ಹೇಗೆ?

ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರ ದೇಶದ 13 ಬೀಚ್‌ಗಳನ್ನು ಬ್ಲೂಫ್ಲಾಗ್ ಮಾನ್ಯತೆಗೆ ಆಯ್ಕೆ ಮಾಡಲು ತೀರ್ಮಾನಿಸಿ, ಕರ್ನಾಟಕದಿಂದ ಒಂದು ಬೀಚ್‌ ಪಟ್ಟಿ ನೀಡಲು ಸೂಚಿಸಿತ್ತು. ಅದರಂತೆ ಕರಾವಳಿಯ ಸಂಭಾವ್ಯ ಬೀಚ್‌ಗಳ ಪಟ್ಟಿ ತಯಾರಿಸಿ ಮಲ್ಪೆ, ಪಡುಕೆರೆ, ಪಡುಬಿದ್ರಿ ಬೀಚ್‌ಗಳ ಪಟ್ಟಿ ನೀಡಲಾಗಿತ್ತು.

ಬ್ಲೂಫ್ಲಾಗ್ ಮಾನ್ಯತೆಗೆ ನೀರಿನ ಗುಣಮಟ್ಟ, ಫಿಸಿಕಲ್, ಕೆಮಿಕಲ್‌ ಹಾಗೂ ಮೈಕ್ರೋ ಬಯಾಲಜಿಕಲ್ ಅಂಶಗಳು ತುಂಬಾ ಮುಖ್ಯವಾಗಿದ್ದರಿಂದ ಮಲ್ಪೆ ಹಾಗೂ ಪಡುಕೆರೆ ಬೀಚ್‌ ಅನ್ನು ಪಟ್ಟಿಯಿಂದ ಕೈಬಿಡಲಾಯಿತು.

ಆದರೆ, ಪಡುಬಿದ್ರಿ ಬೀಚ್‌ನಲ್ಲಿ ಉತ್ತಮ ಗುಣಮಟ್ಟದ ನೀರು, ಸರ್ಕಾರಕ್ಕೆ ಸೇರಿದ ಜಾಗ, ಬಂಗಾರದ ಬಣ್ಣದ ಮರಳು, ಖಾಸಗಿತನಕ್ಕೆ ಒತ್ತು, 8 ರಿಂದ 10 ಅಡಿ ಆಳದ ಸಮುದ್ರ ತೀರ ಸೇರಿದಂತೆ ಬ್ಲೂಫ್ಲಾಗ್ ಮಾನ್ಯತೆಗೆ ಬೇಕಾದ ಎಲ್ಲ ಮಾನದಂಡಗಳು ಇದ್ದಿದ್ದರಿಂದ ಪಡುಬಿದ್ರಿ ಬೀಚ್‌ ಅನ್ನು ಆಯ್ಕೆ ಮಾಡಲಾಯಿತು ಎನ್ನುತ್ತಾರೆ ಅಧಿಕಾರಿಗಳು.

ಅಭಿವೃದ್ಧಿ ಕಾಮಗಾರಿ ಹೇಗೆ ?

ಪಡುಬಿದ್ರಿ ಬೀಚ್‌ ಅನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ₹ 10.68 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಈಗಾಗಲೇ ಕಾಮಗಾರಿಗಳು ನಡೆಯುತ್ತಿವೆ. ಬಹುಶಃ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.

ಪಡುಬಿದ್ರಿ ಬೀಚ್‌ನ ಜತೆಗೆ ಕಾರವಾರ ಜಿಲ್ಲೆಯ ಕಾಸರಕೋಡು ಬೀಚ್‌ ಕೂಡ ಆಯ್ಕೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು