ಕಾಪು (ಪಡುಬಿದ್ರಿ): ಪಾದೂರು ಗ್ರಾಮದಲ್ಲಿ ಜಲ್ಲಿ ಕ್ರಷರ್ ನಿರ್ಮಾಣವಾಗಬಾರದು. ಇದರಿಂದ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಜೂರು ಗ್ರಾಮಸ್ಥರು ಇಲ್ಲಿನ ಜಲಂಚಾರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರು.
ಜಲ್ಲಿ ಕ್ರಷರ್ ನಿರ್ಮಾಣವಾದರೆ ಪರಿಸರದ ಮೇಲೆ, ಜನರು, ಜೀವಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಈಗಾಗಲೇ ಕೆಲವೇ ಕಿ.ಮೀ. ದೂರದಲ್ಲಿರುವ ಬೃಹತ್ ಯೋಜನೆಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರಿದೆ. ಜಲ್ಲಿ ಕ್ರಷರ್ ನಿರ್ಮಾಣ ಮಾಡಲು ಜಿಲ್ಲಾಡಳಿತ ಅವಕಾಶ ನೀಡಬಾರದು. ಇಲ್ಲದಿದ್ದರೆ ಸ್ಥಳೀಯ ಜನ ಜಾಗೃತಿ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು, ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಯಾವುದೇ ಜನವಿರೋಧಿ ಯೋಜನೆಗೆ ಅವಕಾಶ ನೀಡುವುದಿಲ್ಲ. ನಮ್ಮ ನೆಲ, ಜಲ, ಪ್ರಕೃತಿ, ಬದುಕಿನ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಯೋಜನೆಗಳು ಶೂನ್ಯ ಮಾಲಿನ್ಯವಾಗಬೇಕು, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಬೇಕು. ಯೋಜನೆ ವಿರುದ್ಧ ಹೋರಾಟದಲ್ಲಿ ಜನರ ಜೊತೆ ಇರುತ್ತೇನೆಂದು ಭರವಸೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅಶ್ವಿನಿ ಮಾತನಾಡಿ, ಬೆಂಗಳೂರಿನ ಲಕ್ಷ್ಮೀ ಟ್ರಾವೆಲ್ಸ್ ಕಂಪನಿಯಲ್ಲಿ ಕ್ರಶರ್ ನಿರ್ಮಾಣಕ್ಕೆ ಐಎಸ್‌ಪಿಆರ್‌ಎಲ್ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಯಾವುದೇ ಅನುಮತಿ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ. ಸ್ಥಳೀಯರ ವಿರೋಧದ ಬಗ್ಗೆ ಅವರ ಗಮನಕ್ಕೆ ತರಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಮಾತನಾಡಿ, ಯೋಜನೆಯಿಂದ ಸ್ಥಳೀಯ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗಲಿದ್ದು, ಈ ನಿಟ್ಟಿನಲ್ಲಿ ಹೋರಾಟಕ್ಕೂ ಸಿದ್ಧ ಎಂದರು.
ಗ್ರಾಮಸ್ಥರಾದ ರಿರ‍್ಡ್ ಕರ‍್ಡ, ಪ್ರಸನ್ನ, ಶಂಕರ್ ಶೆಟ್ಟಿ, ಪ್ರವೀಣ್ ಶೆಟ್ಟಿ, ರವಿರಾಜ್ ಶೆಟ್ಟಿ ಮಾತನಾಡಿದರು. ನೋಡೆಲ್ ಅಧಿಕಾರಿಯಾಗಿ ಅರುಣ್ ಹೆಗ್ಡೆ, ಉಪಾಧ್ಯಕ್ಷೆ ಮಂಜುಲಾ ಆಚಾರ್ಯ, ಪಿಡಿಒ ವಿಲಾಸಿನಿ, ಸಂದೀಪ್ ರಾವ್, ಕಾರ್ಯದರ್ಶಿ ಪ್ರಸಾದ್ ಭಂಡಾರಿ ಇದ್ದರು.
ನನ್ನ ಮತ್ತು ಜನರ ವಿರೋಧವಿದೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅವರೊಂದಿಗೆ ಮಾಹಿತಿ ಪಡೆಯುತ್ತಿದ್ದ ವೇಳೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಇಲ್ಲಿ ಕ್ರಷರ್ ನಿರ್ಮಾಣಕ್ಕೆ ನನ್ನ ಹಾಗೂ ಗ್ರಾಮಸ್ಥರ ವಿರೋಧವಿದೆ. ಜನರಿಗೆ ಸಮಸ್ಯೆ ಆಗುವುದಾದರೆ ಮೊದಲು ವಿರೋಧ ವ್ಯಕ್ತಪಡಿಸುತ್ತೇನೆ. ಇದನ್ನು ಅಧಿಕಾರಿಗಳ, ಕಂಪನಿ ಗಮನಕ್ಕೆ ತನ್ನಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.