ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡುಬಿದ್ರಿ: ಹಕ್ಕುಪತ್ರದ ನಿರೀಕ್ಷೆಯಲ್ಲಿ ನಡಿಪಟ್ಣದ 23 ಕುಟುಂಬ

Published 29 ಜನವರಿ 2024, 6:54 IST
Last Updated 29 ಜನವರಿ 2024, 6:54 IST
ಅಕ್ಷರ ಗಾತ್ರ

ಪಡುಬಿದ್ರಿ: ‘40 ವರ್ಷಗಳಿಂದ ಈ ಜಾಗದಲ್ಲಿ ವಾಸಿಸುತ್ತಿದ್ದೇವೆ. ಮನೆ ತೆರಿಗೆ ಕಟ್ಟುತ್ತಿದ್ದೇವೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇದೆ. ಆದರೆ ಹಕ್ಕುಪತ್ರ ಮಾತ್ರ ಇನ್ನೂ ಆಗಿಲ್ಲ. ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೆ ಭರವಸೆ ಮಾತ್ರ ಸಿಗುತ್ತಿದೆ, ಸ್ಪಂದನೆ ದೊರೆಯುತ್ತಿಲ್ಲ’

ಇದು ಹಕ್ಕುಪತ್ರಕ್ಕಾಗಿ 4 ದಶಕಗಳಿಂದ ಮನವಿ ಸಲ್ಲಿಸಿ ಇಂದು ಸಿಗಬಹುದು, ನಾಳೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿರುವ ಪಡುಬಿದ್ರಿಯ ಕಡಲು ಮತ್ತು ನದಿ ತೀರದ 23 ಕುಟುಂಬಗಳ ನೋವಿನ ಮಾತು. ‌ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡ್ಸಾಲು ಗ್ರಾಮದ ನಡಿಪಟ್ಣದಲ್ಲಿ ಮೊಗವೀರ, ಬಿಲ್ಲವ ಸಮುದಾಯದ ಈ ಕುಟುಂಬಗಳು 40 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ನೆಲೆಸಿದ್ದಾರೆ. ಮೀನುಗಾರಿಕೆ, ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದಾರೆ.

ಸರ್ಕಾರಿ ದಾಖಲೆಯ ಪ್ರಕಾರ 1989–90ರಿಂದ ಈ ಕುಟುಂಬಗಳು 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸುತ್ತಾ ಬಂದಿವೆ. ಹಕ್ಕುಪತ್ರ ನೀಡಿ ಸಮಸ್ಯೆ ಪರಿಹರಿಸಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 4 ತಿಂಗಳ ಹಿಂದೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪಹಣಿಯಲ್ಲಿ ಈ ಜಾಗ ಪೊರಂಬೋಕು, ಮೀನು ಒಣಗಿಸಲು ಮನ್ನಾ ಇಟ್ಟ ಸ್ಥಳ ಹಾಗೂ ಹೊಳೆ ಎಂದು ನಮೂದಾಗಿದೆ. ಈ ತಾಂತ್ರಿಕ ಕಾರಣದಿಂದ ಹಕ್ಕುಪತ್ರ ನೀಡಲು ಅಸಾಧ್ಯವಾಗಿದೆ. ಜಮೀನನ್ನು ಪೊರಂಬೋಕು ಶೀರ್ಷಿಕೆಯಿಂದ ವಿರಹಿತಗೊಳಿಸಲು ಸರ್ಕಾರ ಮಟ್ಟದಲ್ಲಿ ಪರಿಹರಿಸುವಂತೆ ಪ್ರಸ್ತಾವನೆ ಸಲ್ಲಿಸುವ ಭರವಸೆ ನೀಡಿದ್ದರು. ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಜಿಲ್ಲಾಧಿಕಾರಿ ಅವರು ನಡಿಪಟ್ಣದ ಕುಟುಂಬಗಳು ವಾಸಿಸುವ ಸ್ಥಳವು ಮೀನು ಒಣಗಿಸುವ ಸ್ಥಳ ಪೊರಂಬೋಕು ಶೀರ್ಷಿಕೆ ವಿರಹಿತಗೊಳಿಸುವಂತೆ ಪತ್ರಬರೆದಿದ್ದರು.

ಸರ್ಕಾರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯವಿದ್ದು, ಪಹಣಿಯಲ್ಲಿ ಮೀನು ಒಣಗಿಸುವ ಸ್ಥಳ, ಪೊರಂಬೂಕು ಎಂದು ಉಲ್ಲೇಖಿಸಿರುವುದರಿಂದ ವಿರಹಿತಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಈ ತಾಂತ್ರಿಕ ಸಮಸ್ಯೆ ಸರಿಪಡಿಸಿದ ಬಳಿಕ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತದೆ, ಮುಂದೆ ಆಗುವ ಸಾಧ್ಯತೆ ಇದೆ ಎಂದು ತಹಶೀಲ್ದಾರ್ ಪ್ರತಿಭಾ ಆರ್. ತಿಳಿಸಿದ್ದಾರೆ.‌

ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಅವರು ಮುಖ್ಯಕಾರ್ಯದರ್ಶಿಗಳಿಗೆ ಪತ್ರಬರೆದಿದ್ದಾರೆ. ಮುಖ್ಯಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಶೀಘ್ರ ಇಲ್ಲಿನ ನಿವಾಸಿಗಳ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಶಾಸಕ ಗುರ್ಮೆ‌ ಸುರೇಶ್ ಶೆಟ್ಟಿ ಭರವಸೆ ನೀಡಿದ್ದಾರೆ.

Highlights - null

Quote - ಜನಪ್ರತಿನಿಧಿಗಳು ಅಧಿಕಾರಿಗಳು 4 ದಶಕಗಳ ನಮ್ಮ ಕೂಗಿಗೆ ಶೀಘ್ರ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಸಂತೋಷ್ ಸಾಲ್ಯಾನ್ ಸ್ಥಳೀಯ ನಿವಾಸಿ

Quote - ‘ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಹಕ್ಕುಪತ್ರ ನೀಡಲು ಮನವಿ ಸಲ್ಲಿಸಿದ್ದು ಇದುವರೆಗೂ ಪ್ರಯೋಜನವಾಗಿಲ್ಲ. ಚುನಾವಣೆ ಬಂದಾಗ ಭರವಸೆ ನೀಡುವ ಜನಪ್ರತಿನಿಧಿಗಳು ಚುನಾವಣೆ ಮುಗಿದ ಬಳಿಕ ಮೌನಕ್ಕೆ ಶರಣಾಗುತ್ತಾರೆ ‌ಕಿರಣ್ ಸ್ಥಳೀಯ ನಿವಾಸಿ

Cut-off box - ‘ಅಸಹಾಯಕ ಪ‍ರಿಸ್ಥಿತಿ’ 40 ವರ್ಷಗಳಿಂದ ನಾವು ಇದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ಅಂದು ನಿರ್ಮಾಣಗೊಂಡಿರುವ ಮನೆ ನಾದುರಸ್ಥಿಯಲ್ಲಿದ್ದು ದುರಸ್ಥಿಗೊಳಿಸಲು ಹಕ್ಕುಪತ್ರ ಇಲ್ಲದೆ ಇರುವುದರಿಂದ ಬ್ಯಾಂಕ್ ಸಾಲ ಅಲ್ಲದೆ ಸರ್ಕಾರದ ಯೋಜನೆ ಪಡೆಯಲು ಆಗುತ್ತಿಲ್ಲ. ಮಳೆಗಾಲ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮನೆ ಹಾನಿಗೂ ಸರ್ಕಾರದ ಯಾವುದೇ ಪರಿಹಾರ ದೊರಕುತ್ತಿಲ್ಲ ಎಂದು ನಿವಾಸಿ ಲಕ್ಷ್ಮಿ ಕೋಟ್ಯಾನ್ ಅಲವತ್ತುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT