ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಪರ್ಯಾಯ ಪಂಚ ಶತಮಾನೋತ್ಸವ 16ರಿಂದ 23ರವರೆಗೆ

ಕೃಷ್ಣಮಠದಲ್ಲಿ ದ್ವೈವಾರ್ಷಿಕ ಪರ್ಯಾಯ ಆರಂಭವಾಗಿ 500 ವರ್ಷ
Last Updated 14 ಜನವರಿ 2021, 13:23 IST
ಅಕ್ಷರ ಗಾತ್ರ

ಉಡುಪಿ: ಕೃಷ್ಣಮಠದಲ್ಲಿ ದ್ವೈವಾರ್ಷಿಕ ಪರ್ಯಾಯ ಪೂಜಾ ವ್ಯವಸ್ಥೆ ಆರಂಭವಾಗಿ 500 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅದಮಾರು ಮಠದಿಂದ ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದ ವ್ಯವಸ್ಥಾಪಕ ಗೋವಿಂದ್‌ ರಾಜ್‌ ತಿಳಿಸಿದರು.

ಗುರುವಾರ ಕೃಷ್ಣಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷ್ಣಮಠದಲ್ಲಿ 1,522ರಲ್ಲಿ ವಾದಿರಾಜ ಶ್ರೀಗಳಿಂದ ಆರಂಭವಾದ ದ್ವೈವಾರ್ಷಿಕ ಪರ್ಯಾಯೋತ್ಸವ 2022ರ ಜ.18ಕ್ಕೆ 500 ವರ್ಷಗಳು ತುಂಬಲಿವೆ. ಅದಮಾರು ಪರ್ಯಾಯದ ಅವಧಿಯಲ್ಲಿ ಪರ್ಯಾಯ ಪಂಚ ಶತಮಾನೋತ್ಸವ ನಡೆಯುತ್ತಿರುವುದರಿಂದ ಜ.16ರಿಂದ 23ರವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜ.16ರಂದು ಮಧ್ಯಾಹ್ನ 3ಕ್ಕೆ ರಾಜಾಂಗಣದ ನರಹರಿ ತೀರ್ಥ ವೇದಿಕೆಯಲ್ಲಿ ಅದಮಾರು ಮಠದ ಆನಂದ ಪ್ರಕಾಶನದಿಂದ ಪ್ರಕಟಿತ ಪಲಿಮಾರು ಮಠದ ಹಿರಿಯ ಶ್ರೀಗಳಾದ ವಿದ್ಯಾಧೀಶ ತೀರ್ಥರಿಂದ ರಚಿತವಾದ ಭಾಗವತ ಪ್ರವಚನಗಳ ಸಂಗ್ರಹ ಕೃತಿ ‘ದಿನಕ್ಕೊಂದು ಭಾಗವತಾಮೃತ ಬಿಂದುಗಳು’ ಪುಸ್ತಕ ಲೋಕಾರ್ಪಣೆಯಾಗಲಿದೆ.

ಅಂದು ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳಕ್ಕೆ ಚಾಲನೆ ಸಿಗಲಿದೆ. ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಹಾರಾಷ್ಟ್ರ ರಾಜ್ಯಗಳಿಂದ ಕರಕುಶಲಿಗರು ಭಾಗವಹಿಸಲಿದ್ದಾರೆ. ಬಿಹಾರದ ಮಧುಬನಿ ಕಲಾ ಪ್ರಕಾರ, ಮಿಥಿಲಾ, ಮಂಜುಷಾ, ಗೋದ್ನ, ಕಾಲಿಘಟ್‌ ಚಿತ್ರಗಳು, ಪಟಚಿತ್ರ, ಲೋಹಶಿಲ್ಪ, ಎರಕ ಶಿಲ್ಪ, ಗೊಂಡು ಕಲಾಕೃತಿ, ಮಣ್ಣು, ಹುಲ್ಲಿನ ಕಲಾಕೃತಿಗಳು ರಾಜ್ಯದ ವಿವಿಧ ಜಿಲ್ಲೆಗಳ ಕರಕುಶಲ ವಸ್ತುಗಳು, ಕಲಾಕೃತಿಗಳು ಮೇಳದ ವಿಶೇಷತೆ ಎಂದು ಮಾಹಿತಿ ನೀಡಿದರು.

17ರಂದು ಮಧ್ಯಾಹ್ನ 3ಕ್ಕೆ ‘ಅದಮಾರು ಮಠದ ಕುರಿತು’ ವಿಜಯಸಿಂಹ ಆಚಾರ್ಯ, ‘ಪರ್ಯಾಯ ನೆನಪಿನ ಪುಟ’ ಕುರಿತು ಲಕ್ಷ್ಮೀನಾರಾಯಣ ಮುಂಚಿತ್ತಾಯ ಹಾಗೂಗೋವಿಂದರಾಜ್‌ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 7ಕ್ಕೆ ಸುಚೇತನ್‌ ರಂಗಸ್ವಾಮಿ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಇರಲಿದೆ. 18ರಂದು ಮಧ್ಯಾಹ್ನ 3ಕ್ಕೆ ಪರ್ಯಾಯ ಮಹೋತ್ಸವ ನೆನಪಿಸುವ ಮೆರವಣಿಗೆ ನಡೆಯಲಿದೆ. ಮಧ್ವಾಚಾರ್ಯರ ಹಾಗೂ ವಾದಿರಾಜ ಆಚಾರ್ಯರ ಗ್ರಂಥಗಳನ್ನು ಮೇನೆಯಲ್ಲಿಟ್ಟು ಜೋಡುಕಟ್ಟೆಯಿಂದ ಕೃಷ್ಣಮಠಕ್ಕೆ ತರಲಾಗುವುದು. ಸ್ಥಳೀಯ ಭಜನಾ ತಂಡಗಳು, ವಿವಿಧ ರಾಜ್ಯಗಳ ಸಾಂಸ್ಕೃತಿ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದರು.

23ರವರೆಗೆ ನಿತ್ಯ ರಾಜಾಂಗಣದಲ್ಲಿ ವಿಶೇಷ ಗೋಷ್ಠಿಗಳು, ವಿದ್ವಾಂಸರಿಂದ ವಿಷಯ ಮಂಡನೆ, ಮಠದ ಇತಿಹಾಸ ಪರಿಚಯ, ಪರ್ಯಾಯೋತ್ಸವ ವಿಶೇಷತೆ, ಮಠಗಳ ಸಾಧನೆ ಹಾಗೂ ಇತರೆ ವಿಚಾರಗಳ ದಾಖಲೀಕರಣ ನಡೆಯಲಿದೆ. ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಉಪನ್ಯಾಸಗಳು ನಡೆಯಲಿದೆ ಗೋವಿಂದರಾಜ್‌ ವಿವರ ನೀಡಿದರು.

ಮಠಕ್ಕೆ ಮೂಲಸೌಕರ್ಯ
ಪರ್ಯಾಯ ಮಹೋತ್ಸವದ 1 ವರ್ಷದ ಅವಧಿಯನ್ನು ಈಶಪ್ರಿಯ ತೀರ್ಥ ಶ್ರೀಗಳ ಆಶಯದಂತೆ ಮಠಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ಮೀಸಲಿರಿಸಲಾಗಿತ್ತು. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಮಠಕ್ಕೆ ಬಣ್ಣ ಬಳಿಯುವುದು ಸೇರಿದಂತೆ ಹಲವು ದುರಸ್ತಿ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ ಎಂದರು.

ಸಂತೋಷ್‌ ಕುಮಾರ್ ಉದ್ಯಾವರ, ಕಲಾವಿದ ಪುರುಷೋತ್ತಮ ಅಡ್ವೆ, ಲೆಕ್ಕ ಪರಿಶೋಧಕ ಮಾಧವ ಉಪಾಧ್ಯಾಯ, ಪ್ರದೀಪ್‌ ರಾವ್‌, ವೈ.ಎನ್‌.ರಾಮಚಂದ್ರ ರಾವ್‌, ದಿವಾನರಾದ ಲಕ್ಷ್ಮೀನಾರಾಯಣ ಮುಂಚಿತ್ತಾಯ, ಮಾಧ್ಯಮ ಸಂಚಾಲಕರಾದ ಪರಶುರಾಮ್ ಭಟ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

ದರ್ಶನಕ್ಕೆ ವಿಶ್ವಪಥ ಮಾರ್ಗ
ಪರ ಊರುಗಳಿಂದ ಬರುವ ಭಕ್ತರಿಗೆ ಕೃಷ್ಣನ ದರ್ಶನದ ಜತೆಗೆ ಅಷ್ಠಮಠಗಳ ಪರಿಸರವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುವಂತೆ ಭಕ್ತರ ದರ್ಶನ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಮಧ್ವಸರೋವರದ ಪೂರ್ವ ಉತ್ತರ ಭಾಗದಲ್ಲಿ ‘ವಿಶ್ವಪಥ’ ಮಾರ್ಗ ನಿರ್ಮಿಸಲಾಗಿದ್ದು, ಇದರ ಮೂಲಕ ಭಕ್ತರು ಸಾಗಿದರೆ ಕಟ್ಟಿಗೆ ರಥದ ದರ್ಶನ ಪಡೆಯಬಹುದು. ಮಧ್ವಸರೋವರ, ರಥಬೀದಿಯ ಮೂರು ರಥಗಳ ವೀಕ್ಷಣೆ, ಅನಂತೇಶ್ವರ ಹಾಗೂ ಚಂದ್ರಮೌಳೇಶ್ವರ ದೇಗುಲಗಳ ದರ್ಶನ, ಅಷ್ಠಮಠಗಳ ಮಾಹಿತಿ, ಪಲಿಮಾರು ಮಠದ ಪರ್ಯಾಯದ ಅವಧಿಯಲ್ಲಿ ಕೃಷ್ಣನ ಗರ್ಭಗುಡಿಗೆ ಹೊದಿಸಲಾದ ಚಿನ್ನದ ಗೋಪುರವನ್ನು ವೀಕ್ಷಿಸಬಹುದು. ಬಳಿಕ ದೇವರ ದರ್ಶನ ಪಡೆದು, ಭೋಜನಾಲಯಕ್ಕೆ ತೆರಳಬಹುದು. ನೂಕು ನುಗ್ಗಲು ತಡೆಯಲು ಹಾಗೂ ಕೃಷ್ಣಮಠದ ಸಂಪೂರ್ಣ ಇತಿಹಾಸ ಹಾಗೂ ಸೌಂದರ್ಯವನ್ನು ಭಕ್ತರಿಗೆ ಪರಿಚಯಿಸಲು ಹೊಸ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಜ.18ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿಶ್ವಪಥ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ಗೋವಿಂದ್‌ರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT