ಹಿರಿಯಡಕ: ಕರ್ನಾಟಕ ಪಬ್ಲಿಕ್ ಸ್ಕೂಲ್, ಪರ್ಕಳ ರೋಟರಿ ಕ್ಲಬ್ ಮತ್ತು ಪೊಲೀಸ್ ಠಾಣೆ ಆಶ್ರಯದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆ ಈಚೆಗೆ ನಡೆಯಿತು.
ಡಾ. ಎ.ವಿ ಬಾಳಿಗಾ ಆಸ್ಪತ್ರೆಯ ಮನಃಶಾಸ್ತ್ರಜ್ಞ ನಾಗರಾಜ ಮೂರ್ತಿ ಮಾತನಾಡಿ, ‘ಮೊಬೈಲ್ ಮತ್ತು ಇಂಟರ್ನೆಟ್‌ನಿಂದಾಗಿ ಹದಿಹರೆಯದ ವಿದ್ಯಾರ್ಥಿಗಳಿಗೆ ಮಾಹಿತಿ ದೊರೆಯುವ ವ್ಯವಸ್ಥೆ ವೇಗವಾಗಿದೆ. ಇದರಿಂದಾಗಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಪಿಯುಸಿ ಹಂತದ ವಿದ್ಯಾರ್ಥಿಗಳನ್ನು ವಯೋ ಸಹಜ ಬದಲಾವಣೆಗೆ ಹೊಂದಿಕೊಳ್ಳುವಂತೆ ಮಾಡ ಬೇಕಾದದ್ದು ಪೋಷಕರ ಕರ್ತವ್ಯ. ಪಾಲಕರು ಪ್ರತಿದಿನ ಮಕ್ಕಳ ಜೊತೆ ಕನಿಷ್ಠ 20 ನಿಮಿಷ ಮಾತನಾಡಿ, ತಮ್ಮ ಮನೆಯ ಸಣ್ಣ ಪುಟ್ಟ ಕೆಲಸಗಳಿಗೆ ಅವರನ್ನು ತೊಡಗಿಸಬೇಕು. ಮಕ್ಕಳ ಮೊಬೈಲ್ ಮೇಲೆ ನಿಗಾ ಇಡುವ ಆ್ಯಪ್‌ಗಳನ್ನು ಬಳಸುವುದು ಉತ್ತಮ’ ಎಂದರು.
ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ‘ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ’ ಕುರಿತು ಮಾತನಾಡಿ, ‘ವಿದ್ಯಾರ್ಥಿಗಳ ಅತಿರೇಕದ ಸಿಟ್ಟು ಅಪಾಯಕಾರಿ. ಮಕ್ಕಳ ಭಯ, ಆತಂಕಗಳನ್ನು ಪ್ರತಿದಿನ ಗಮನಿಸಿ. ಸಾಮಾಜಿಕ ಜಾಲತಾಣಗಳ ಅತಿ ಬಳಕೆಯಿಂದ ವಿದ್ಯಾರ್ಥಿಗಳ ಕಲಿಕಾ ಕೌಶಲ ಕಡಿಮೆಯಾಗುತ್ತಿದೆ. ಅತಿಯಾದ ಮೊಬೈಲ್ ಬಳಕೆ ಕಂಡು ಬಂದಲ್ಲಿ ಆಪ್ತ ಸಮಾಲೋಚರನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂದರು.
ಹಿರಿಯಡಕ ಪೊಲೀಸ್ ಠಾಣೆಯ ಸಿಬ್ಬಂದಿ ಜ್ಯೋತಿ ಮಾತನಾಡಿ, ವಿದ್ಯಾರ್ಥಿಗಳು ಪರವಾನಗಿ ಇಲ್ಲದೆ ಬೈಕ್ ಓಡಿಸುವುದರಿಂದ ಪಾಲಕರು ಕಾನೂನಿನ ಸುಳಿಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ ಎಂದರು. ಸಂಸ್ಥೆಯ ಪ್ರಾಂಶುಪಾಲ ಮಂಜುನಾಥ ಭಟ್ ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ನಿರಂತರ ಉಪನ್ಯಾಸಕರ ಜೊತೆ ಸಂಪರ್ಕದಲ್ಲಿರುವಂತೆ ತಿಳಿಸಿದರು.
ರೋಟರಿ ಕ್ಲಬ್ ಪರ್ಕಳದ ಅಧ್ಯಕ್ಷ ಸತ್ಯಾನಂದ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎಲ್. ವಿಶ್ವಾಸ, ಸದಸ್ಯರಾದ ಅಶೋಕ್ ಜೋಗಿ, ವಿಜೇತ ಕುಮಾರ್, ಸುಬ್ರಹ್ಮಣ್ಯ ರಾವ್, ನಿತ್ಯಾನಂದ ನಾಯಕ, ಉಪನ್ಯಾಸಕಿ ವೀಣಾ ಡಿ ನಾಯಕ ಇದ್ದರು. ಉಪನ್ಯಾಸಕ ದೇವದಾಸ್ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಪಾಲಕರು ಪ್ರತಿನಿತ್ಯ ಮಕ್ಕಳ ಜೊತೆ ಮಾತನಾಡಿ ಅತಿರೇಕದ ಸಿಟ್ಟು ಅಪಾಯಕಾರಿ ಉಪನ್ಯಾಸಕರ ಜೊತೆ ಪೋಷಕರು ನಿರಂತರ ಸಂಪರ್ಕದಲ್ಲಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.