ಶನಿವಾರ, ಜನವರಿ 29, 2022
22 °C
ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮನವಿ

ಸರಳ ಪರ್ಯಾಯೋತ್ಸವಕ್ಕೆ ಭಕ್ತರು ಸಹಕರಿಸಿ: ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕೋವಿಡ್‌ ಮಹಾವ್ಯಾಧಿಯ ಹಿನ್ನೆಲೆಯಲ್ಲಿ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವವನ್ನು ಸರಳ ಹಾಗೂ ಸಂಪ್ರದಾಯ ಬದ್ಧವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಭಕ್ತರು ಸಹಕಾರ ನೀಡಬೇಕು ಎಂದು ವಿದ್ಯಾಸಾಗರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಮಧ್ವಾಚಾರ್ಯರು ಹಾಗೂ ವಾದಿರಾಜ ಗುರುಗಳು ಹಾಕಿಕೊಟ್ಟ ಸತ್ಸಂಪ್ರದಾಯದಂತೆ ಹರಿವಾಯು ಗುರುಗಳ ಅನುಗ್ರಹದಿಂದ ಕೃಷ್ಣನ ಪೂಜಾ ದ್ವೈವಾರ್ಷಿಕ ಸರದಿಯಂತೆ ಮುಂದಿನ ಎರಡು ವರ್ಷಗಳ ಕಾಲ ಮಧ್ವಕರಾರ್ಚಿತ ಸೇವೆ ನಡೆಸುವ ಭಾಗ್ಯ ಪಡೆಯುತ್ತಿರುವುಕ್ಕೆ ಅತೀವ ಸಂತಸ ಇದೆ.

ಹಿಂದೆಲ್ಲ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿದ್ದ ಪರ್ಯಾಯ ಪೂಜಾ ಹಸ್ತಾಂತರ ವಿಧಿಯು ಕಾಲಕ್ರಮದಲ್ಲಿ ಭಕ್ತರ ಆಶಯ, ಅಪೇಕ್ಷೆಯಂತೆ ಉತ್ಸವದ ಸ್ವರೂಪ ಪಡೆದು, ಹಲವು ವರ್ಷಗಳಿಂದ ಭಕ್ತರು, ಜನರು ಹಾಗೂ ಸರ್ಕಾರಗಳ ಸಹಭಾಗಿತ್ವದೊಂದಿಗೆ ವೈಭವದಿಂದ ನಡೆಯುತ್ತಿದೆ.

ಆದರೆ, ಎರಡು ವರ್ಷಗಳಿಂದ ಜಗತ್ತು ಕಂಡು ಕೇಳರಿಯದ ಭೀಕರ ವ್ಯಾಧಿಯ ಕಾರಣದಿಂದ ಗಂಭೀರ ವಿಪತ್ತು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ವ್ಯಾದಿ ಮುಕ್ತಿಗಾಗಿ ಸರ್ಕಾರಗಳು, ವಿಜ್ಞಾನಿಗಳು ಪ್ರಯತ್ನಿಸುತ್ತಿರುವುದರಿಂದ, ಇಂತಹ ಆತಂಕದ ಹೊತ್ತಲ್ಲೂ ಸಂಭ್ರಮಾಚರಣೆ ತರವೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.

ಈ ಹೊತ್ತಿನಲ್ಲಿ ಮಹಾವ್ಯಾಧಿಯಿಂದ ಜಗತ್ತನ್ನು ಪಾರುಮಾಡಿ ಲೋಕಕ್ಕೆ ಕ್ಷೇಮ ಸಮೃದ್ಧಿ ಕರುಣಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುವುದು ಮತ್ತು ಸರ್ಕಾರ ಮತ್ತು ಸಾಮಾಜಿಕ ವ್ಯವಸ್ಥೆಯೊಂದಿಗೆ ಸಹಕರಿಸುವುದು ನಮ್ಮೆಲ್ಲರ ಪ್ರಥಮ ಆದ್ಯತೆಯಾಗಬೇಕು. ಆದ್ದರಿಂದ, ಪರ್ಯಾಯೋತ್ಸವದ ಹೊತ್ತಿನಲ್ಲಿ ನಾಡಿನ‌ ಹಿತಕ್ಕಾಗಿ ಕೈಗೊಳ್ಳುವ ಉಪಕ್ರಮಗಳಿಗೆ ಸಹಕರಿಸಲೇಬೇಕಾಗಿದೆ.‌ ಅದು ಅನಿವಾರ್ಯವೂ ಅಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ತೀರಾ ಸಾಂಪ್ರದಾಯಿಕ ವಿಧಿಗಳಿಗೆ ಒತ್ತು ಕೊಟ್ಟು ಸರಳವಾಗಿ ಪರ್ಯಾಯೋತ್ಸವ ನಡೆಸುವ ಬಗ್ಗೆ ಸಮಿತಿಯ ತೀರ್ಮಾನಕ್ಕೆ ಉಡುಪಿಯ ನಾಗರಿಕರು ಸಮಸ್ತ ಕೃಷ್ಣ ಭಕ್ತರು ಸಹಕಾರ ನೀಡಿ ಸಹಕರಿಸಬೇಕು. ಸರ್ಕಾರ ನೀಡುವ ಸೂಚನೆ ಹಾಗೂ ಮಾರ್ಗದರ್ಶನವನ್ನೂ ಚಾಚೂ ತಪ್ಪದೇ ಪಾಲಿಸುವಂತೆ ಅಪೇಕ್ಷಿಸುತ್ತೇವೆ.

ಶೀಘ್ರ ಜಗತ್ತು ಕೊರೊನಾ ವ್ಯಾದಿಯಿಂದ ಮುಕ್ತವಾಗಬೇಕು, ಸಕಲರಿಗೂ ಆರೋಗ್ಯಪೂರ್ಣ ಆಯುಷ್ಯ ಶ್ರೇಯಸ್ಸು ಲಭಿಸಲಿ. ಜಗತ್ತಿಗೆ ಒಳಿತಾಗಲಿ ಎಂದು ಆರಾಧ್ಯ ಮೂರ್ತಿ ಕಾಲೀಯಮರ್ದನ ಕೃಷ್ಣ, ನೃಸಿಂಹ ಹಾಗೂ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸುವುದಾಗಿ ಕೃಷ್ಣಾಪುರ ಮಠ ವಿದ್ಯಾಸಾಗರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.