ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಣಿವರಿಯದೆ ಸುದ್ದಿ ಹಂಚುವ ಕಾಯಕ ಯೋಗಿಗಳು

ಇಂದು ಪತ್ರಿಕಾ ವಿತರಕರ ದಿನ, ಕೋವಿಡ್‌ ಸವಾಲುಗಳ ನಡುವೆ ಕಾರ್ಯ
Last Updated 4 ಸೆಪ್ಟೆಂಬರ್ 2021, 4:00 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲರೂ ಮನೆಯೊಳಗಿದ್ದರೆ ಒಂದು ವರ್ಗ ಮಾತ್ರ ದಣಿವರಿಯದೆ ದುಡಿಯುತ್ತಿತ್ತು. ಸೋಂಕಿನ ಭೀತಿ ಬದಿಗಿಟ್ಟು ಓದುಗರಿಗೆ ತಪ್ಪದೆ ನಿತ್ಯ ಸುದ್ದಿ ಹಂಚುವ ಕಾಯಕದಲ್ಲಿ ನಿರತವಾಗಿತ್ತು. ಅವರೇ ಪತ್ರಿಕಾ ವಿತರಕರು.

ಮಳೆ ಇರಲಿ, ಚಳಿ ಇರಲಿ, ಲಾಕ್‌ಡೌನ್‌ ಕಾಲದ ಸವಾಲಿನ ದಿನಗಳಿರಲಿ ಪತ್ರಿಕಾ ವಿತರಕರು ಒಂದು ದಿನವೂ ವೃತ್ತಿ ಮರೆತಿಲ್ಲ. ಸೂರ್ಯ ಉದಯಿಸುವ ಮುನ್ನವೇ ರಸ್ತೆಗಿಳಿಯುವ ಅವರು, ಸವಾಲುಗಳು ಮಧ್ಯೆಯೋ ಸಮಯಕ್ಕೆ ಸರಿಯಾಗಿ ಓದುಗರಿಗೆ ದಿನಪತ್ರಿಕೆಗಳನ್ನು ಮುಟ್ಟಿಸಿದ್ದಾರೆ. ಸೋಂಕು ತಗುಲುವ ಭಯವಿದ್ದರೂ ವೃತ್ತಿಗೆ ಬೆನ್ನುತೋರದೆ ಕಾರ್ಯ ನಿರ್ವಹಿಸಿದ್ದಾರೆ.

ಕೋವಿಡ್‌ನಿಂದ ಓದುಗರು ಆರ್ಥಿಕ ಸಮಸ್ಯೆಗೆ ಸಿಲುಕಿದಾಗ ತಿಂಗಳ ಚಂದಾ ಹಣವನ್ನು ತಡವಾಗಿ ಪಡೆದು ಸಹಕರಿಸಿದ್ದಾರೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಸಾಂಪ್ರದಾಯಿಕ ನೇರ ಚಂದಾ ಹಣ ಸ್ವೀಕರಿಸುವ ಪದ್ಧತಿಯಿಂದ ಆನ್‌ಲೈನ್‌ ಹಣ ಪಾವತಿ ವ್ಯವಸ್ಥೆಗೆ ಬದಲಾಗಿದ್ದಾರೆ. ವೈಯಕ್ತಿಕ ಹಾಗೂ ವೃತ್ತಿ ಸಂಕಷ್ಟಗಳನ್ನು ಮೆಟ್ಟಿನಿಂತು ಪತ್ರಿಕಾ ವಿತರಣೆ ವೃತ್ತಿಯನ್ನು ಗೌರವದಿಂದ ಮುಂದುವರಿಸಿದ್ದಾರೆ. ಕೋವಿಡ್ ಕಾಲದಲ್ಲಿ ಅವರು ಎದುರಿಸಿದ ಸವಾಲುಗಳು ಹಲವು.

‘ಜಿಲ್ಲೆಯಲ್ಲಿ ಕೋವಿಡ್–19 ಕಾಣಿಸಿಕೊಂಡಾಗ ಪತ್ರಿಕೆಯಿಂದ ಸೋಂಕು ಹರಡುತ್ತದೆ ಎಂಬ ವದಂತಿ ಹರಿದಾಡಿತು. ಇದನ್ನು ನಂಬಿ ಬಹಳಷ್ಟು ಓದುಗರು ಪತ್ರಿಕೆ ಹಾಕಿಸಿಕೊಳ್ಳುವುದನ್ನು ನಿಲ್ಲಿಸಿದರು. ಈ ಸಂದರ್ಭ ಅವರ ಮನವೊಲಿಸುವುದು ಸವಾಲಾಯಿತು. ಚಂದಾ ಹಣ ಪಾವತಿ ಮಾಡುವುದು ತಡವಾಯಿತು. ಚಂದಾ ಹಣ ಪಡೆಯಲು ಮನೆಯ ಬಳಿ ಹೋದರೆ ಬಾಗಿಲು ತೆರೆಯದಷ್ಟು ಭಯ ಅವರಲ್ಲಿತ್ತು. ಹಲವು ಕಡೆಗಳಲ್ಲಿ ಅಪಾರ್ಟ್‌ಮೆಂಟ್‌ ಹಾಗೂ ಮನೆಯೊಳಗೆ ಪ್ರವೇಶ ಇರುತ್ತಿರಲಿಲ್ಲ. ಇಂತಹ ಸವಾಲುಗಳನ್ನು ಧೈರ್ಯವಾಗಿ ಎದುರಿಸಿದ್ದೇವೆ. ಪತ್ರಿಕೆ ಹಂಚುವ ವೃತ್ತಿ ನಿಲ್ಲಿಸದೆ ಮುಂದುವರಿಸಿದ್ದೇವೆ ಎನ್ನುತ್ತಾರೆ ಮಣಿಪಾಲದ ಏಜೆಂಟರಾದ ಪ್ರಕಾಶ್ ನಾಯಕ್‌.

‘7 ದಶಕಗಳಿಗೂ ಹೆಚ್ಚು ಕಾಲ, ಎರಡು ತಲೆಮಾರಿನಿಂದಲೂ ಪತ್ರಿಕಾ ಏಜೆಂಟ್‌ ವೃತ್ತಿಯಲ್ಲಿ ಕುಟುಂಬ ತೊಡಗಿಸಿಕೊಂಡಿದೆ. ಕೋವಿಡ್‌ನಂತಹ ಸವಾಲುಗಳನ್ನು ಹಿಂದೆಂದೂ ಎದುರಿಸಿರಲಿಲ್ಲ. ಲಾಕ್‌ಡೌನ್‌ನಿಂದಾಗಿ ವ್ಯವಹಾರಕ್ಕೆ ದೊಡ್ಡ ಪೆಟ್ಟು ಬಿತ್ತು. ಪತ್ರಿಕೆ ಖರೀದಿಸುವವರ ಸಂಖ್ಯೆ ಕಡಿಮೆಯಾಯಿತು. ಆದರೂ, ವೃತ್ತಿಯಿಂದ ವಿಮುಖರಾಗದೆ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎನ್ನುತ್ತಾರೆ ಹಲವು ದಶಕಗಳಿಂದ ಉಡುಪಿಯ ರಥಬೀದಿಯಲ್ಲಿ ದಿನ ಪತ್ರಿಕೆಗಳನ್ನು ಮಾರಾಟ ಮಾಡುತ್ತಿರುವ ಗೋಕುಲ್ ದಾಸ್ ನಾಯಕ್‌.

ಪತ್ರಿಕಾ ವಿತರಕರು ಹಾಗೂ ಏಜೆಂಟರಿಗೆ ಕೋವಿಡ್‌ನಿಂದ ತುಂಬಾ ಸಮಸ್ಯೆಯಾಯಿತು. ಒಂದೆಡೆ ಸೋಂಕಿನ ಭೀತಿಯಾದರೆ, ನಿರಂತರ ಲಾಕ್‌ಡೌನ್‌ನಿಂದ ವ್ಯವಹಾರಕ್ಕೆ ಹೊಡೆತ ಬಿತ್ತು. ತಿಂಗಳ ಚಂದಾ ಹಣ ಕೊಡುವುದು ತಡವಾಗಿ ಆರ್ಥಿಕ ಸಮಸ್ಯೆ ಕಾಡಿತು. ಆದರೂ, ವೃತ್ತಿ ಘತನೆಯನ್ನು ಕಾಪಾಡಿಕೊಂಡು ಪತ್ನಿ ಸುಮಿತ್ರಾ ಅವರೊಂದಿಗೆ ಉದ್ಯಮ ಮುನ್ನಡೆಸಿ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎನ್ನುತ್ತಾರೆ ವಡಭಾಂಢೇಶ್ವರದ ಪತ್ರಿಕಾ ಏಜೆಂಟರಾದ ರಾಮನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT