ಶುಕ್ರವಾರ, ಮಾರ್ಚ್ 24, 2023
22 °C
ಎಂಜಿಎಂ ಕಾಲೇಜು, ಕೃಷ್ಣಮಠದ ರಾಜಾಂಗಣದಲ್ಲಿ ಪವಿತ್ರ ವಸ್ತ್ರ ಅಭಿಯಾನ ಆರಂಭ: ನಾಲ್ಕು ದಿನ ಪ್ರದರ್ಶನ

ಖಾದಿ ಪವಿತ್ರ, ಶಕ್ತಿಶಾಲಿ ವಸ್ತ್ರ: ದೇವಿದಾಸ್ ನಾಯಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನೈಸರ್ಗಿಕ ಬಣ್ಣ ಹಾಗೂ ಕೈಮಗ್ಗದಿಂದ ತಯಾರಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಚರಕ ಸಂಸ್ಥೆಯ ಖಾದಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ‘ಪವಿತ್ರ ವಸ್ತ್ರ ಅಭಿಯಾನ’ ಸೋಮವಾರ ನಗರದ ಎಂಜಿಎಂ ಕಾಲೇಜಿನಲ್ಲಿ ಆರಂಭವಾಯಿತು.

ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ದೇವಿದಾಸ್ ನಾಯಕ್, ಚರಕ ಸಂಸ್ಥೆಯ ನಾಲ್ಕು ದಿನಗಳ ಖಾದಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಕಾಲೇಜಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಹಿಂದೆ ಕಾಲೇಜಿನಲ್ಲಿ ನಡೆದ ಪುಸ್ತಕ ಮೇಳ ಮತ್ತು ಕೃಷಿ ಸಮ್ಮಿಲನ ಕಾರ್ಯಕ್ರಮಕ್ಕೆ ನೀಡಿದ ಪ್ರೋತ್ಸಾಹವನ್ನು ಸಾರ್ವಜನಿಕರು ಪವಿತ್ರ ವಸ್ತ್ರ ಅಭಿಯಾನಕ್ಕೂ ನೀಡಬೇಕು ಎಂದು ಮನವಿ ಮಾಡಿದರು.

ಖಾದಿ ಪವಿತ್ರ ಹಾಗೂ ಬಹಳ ಶಕ್ತಿಶಾಲಿಯಾದ ವಸ್ತ್ರ. ಸ್ವಾತಂತ್ರ್ಯ ಹೋರಾಟದ ಸಂದರ್ಭ ಖಾದಿ ದೇಶದಲ್ಲಿ ಸಂಚಲನ ಮೂಡಿಸಿ, ಸ್ವಾತಂತ್ರ್ಯ ಸಿಗಲು ಪ್ರಮುಖ ಪಾತ್ರ ವಹಿಸಿತ್ತು. ಚರಕ ಸಂಸ್ಥೆ ಖಾದಿ ಉತ್ಪನ್ನಗಳ ಹಾಗೂ ನೇಕಾರರನ್ನು ಉಳಿಸಲು ರಾಜ್ಯಾದ್ಯಂತ ಪವಿತ್ರ ವಸ್ತ್ರ ಅಭಿಯಾನ ಆಯೋಜಿಸಿ, ಖಾದಿಗೆ ಮರುಜೀವ ಕೊಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕೃಷ್ಣಮಠದ ರಾಜಾಂಗಣದಲ್ಲಿಯೂ ಪವಿತ್ರ ವಸ್ತ್ರ ಅಭಿಯಾನ ಮೇಳ ನಡೆಯುತ್ತಿದ್ದು, ಪರ್ಯಾಯ ಪೀಠಾಧೀಶರಾದ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮೇಳವನ್ನು ವೀಕ್ಷಿಸಿದರು. ಚರಕ ಸಂಸ್ಥೆಯ ಪ್ರಸನ್ನ ಇದ್ದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ನೇಕಾರರ ಸಂಘದ ಅಧ್ಯಕ್ಷ ಪವನ್, ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಾಂಶುಪಾಲೆ ಮಾಲತಿದೇವಿ, ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕಿ ಪದ್ಮಶ್ರೀ ಇದ್ದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು