ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಗುರು ತತ್ವದಡಿ ಚುನಾವಣೆ ಎದುರಿಸುವೆ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್
Last Updated 2 ಮೇ 2019, 16:36 IST
ಅಕ್ಷರ ಗಾತ್ರ

ಉಡುಪಿ: ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರ ತತ್ವದಡಿಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಎದುರಿಸುವುದಾಗಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಿಳಿಸಿದರು.‌

ಸೋಮವಾರ ಉಡುಪಿಯ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಅವರು, ರೈತರ, ಯುವಕರ, ಮಹಿಳೆಯರ ಹಾಗೂ ಕರಾವಳಿಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಬದ್ಧನಿದ್ದೇನೆ. ವೈಮನಸ್ಸು ಬಿಟ್ಟು ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ದುಡಿಯಬೇಕು ಎಂದು ಮನವಿ ಮಾಡಿದರು.

‘ಈ ಬಾರಿ ನಾನೂ ಸೇರಿದಂತೆ ಮಧು ಬಂಗಾರಪ್ಪ, ಮಿಥುನ್‌ ರೈ, ಆನಂದ್ ಅಸ್ನೋಟಿಕರ್ ಸಂಸತ್ ಪ್ರವೇಶಿಸುವುದು ಖಚಿತ. ಇದಕ್ಕೆ ಮತದಾರರ ಸಹಕಾರ ಅಗತ್ಯ’ ಎಂದು ಮನವಿ ಮಾಡಿದರು.

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ‘ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್‌ ಒಟ್ಟಾಗಿವೆ. ಇಲ್ಲಿ ಅಭ್ಯರ್ಥಿ ಯಾರು ಎಂಬುದು ಮುಖ್ಯವಲ್ಲ; ಬಿಜೆಪಿಯ ಸೋಲು ಮುಖ್ಯ’ ಎಂದರು.

ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳನ್ನು ಆರಿಸಿ ಕಳುಹಿಸಬೇಕು. ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕು ಎಂದು ಕಾರ್ಯರ್ತರಿಗೆ ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಜಯಮಲಾ ಮಾತನಾಡಿ, ಕಾಂಗ್ರೆಸ್‌–ಜೆಡಿಎಸ್‌ ಹೊಂದಾಣಿಕೆಯ ಹಿಂದೆ ಹಲವು ರಹಸ್ಯ ಹಾಗೂ ಸತ್ಯಗಳಿವೆ. ಮಧ್ವರಾಜ್ ಅವರ ಗೆಲುವಿಗೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಒಟ್ಟಾಗಿ ಶ್ರಮಿಸಬೇಕು. ಮತದಾರರು ಗೊಂದಲಕ್ಕೀಡಾಗದಂತೆ ತಿಳಿವಳಿಕೆ ಮೂಡಿಸಬೇಕು ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ‘ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಜೆಡಿಎಸ್‌ಗೆ 54 ಸಾವಿರ ಮತಗಳು ಬಿದ್ದಿವೆ. ಕಾಂಗ್ರೆಸ್‌ ಕಾರ್ಯಕರ್ತರ ಹಾಗೂ ಮುಖಂಡರ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದರು.

2014ರ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಮೂರನೇ ಸ್ಥಾನದಲ್ಲಿತ್ತು. ಯಡಿಯೂರಪ್ಪ 3.5 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. 2018ರ ಉಪ ಚುನಾವಣೆಯಲ್ಲಿ ಗೆಲುವಿನ ಅಂತರವನ್ನು 50 ಸಾವಿರಕ್ಕೆ ಇಳಿಸಿದ್ದೇವೆ. ಕೇವಲ 13 ದಿನಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್ ಕಾರ್ಯಕರ್ತರಿಂದ ಇದು ಸಾಧ್ಯವಾಗಿದೆ. ಈ ಬಾರಿ ಬೈಂದೂರು ಕ್ಷೇತ್ರದಿಂದ 80 ರಿಂದ 90 ಸಾವಿರ ಮತ ಸಿಗುವ ವಿಶ್ವಾಸ ಇದೆ ಎಂದರು.

ಸಭೆಯಲ್ಲಿ ಶೃಂಗೇರಿ ಶಾಸಕ ರಾಜೇಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿಜಯ್‌ ಕುಮಾರ್, ಮುಖಂಡರಾದ ಯು.ಆರ್.ಸಭಾಪತಿ, ಗೋಪಾಲ್‌ ಪೂಜಾರಿ, ಎಂ.ಎ.ಗಫೂರ್, ಜನಾರ್ದನ ತೋನ್ಸೆ, ಪ್ರಖ್ಯಾತ್ ಶೆಟ್ಟಿ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ವಿಶ್ವಾಸ್ ಅಮೀನ್‌, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT