ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ 12ರಂದು

7
ಉಡುಪಿಯಲ್ಲಿ ಪ್ರಥಮ ಬಾರಿಗೆ ಸಮಾರಂಭ; ಕರಾವಳಿಯ ಮೂವರಿಗೆ ಪ್ರಶಸ್ತಿ ಗೌರವ

ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ 12ರಂದು

Published:
Updated:

ಉಡುಪಿ: ಕರಾವಳಿಯನ್ನು ಪ್ರತಿನಿಧಿಸುವ ಯಕ್ಷಗಾನ, ಭೂತಾರಾಧನೆ, ನಟರಾಜನ ಕಟ್ಔಟ್‌ಗಳು, ಪ್ರವೇಶದ್ವಾರಕ್ಕೆ ಕರಾವಳಿಯ ಭೌಗೋಳಿಕ ಅಸ್ಮಿತೆ ಬಿಂಬಿಸುವ ಕಾಪು ದೀಪಸ್ತಂಭ, ಮೀನುಗಾರಿಕೆ ದೋಣಿ, ಕರಾವಳಿಯ ದ್ವೀಪದ ಬಂಡೆಗಳು...

ಹೀಗೆ ನಗರದ ಟೌನ್‌ಹಾಲ್‌ ಸಿಂಗಾರಗೊಂಡಿದೆ. ಉಡುಪಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ನಡೆಯಲಿದ್ದು, ಪುರಭವನ ಆಕರ್ಷಿಸುತ್ತಿದೆ.

ಸಂಜೆ 4.30ಕ್ಕೆ ವಿವಿಧ ರಂಗತಂಡಗಳಿಂದ ರಂಗಗೀತೆಗಳು ಸಮಾರಂಭಕ್ಕೆ ನಾಂದಿಯಾಗಲಿವೆ. ನಂತರ ಪ್ರಶಸ್ತಿ ಪುರಸ್ಕೃತರನ್ನು ಟೌನ್‌ ಹಾಲ್‌ ಮುಖ್ಯದ್ವಾರದಿಂದ ಜಾನಪದ ಕಂಗೀಲು, ಗುಮಟೆ ನೃತ್ಯಗಳ ಮೂಲಕ ಕರೆತರಲಾಗುವುದು. ಇದನ್ನು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯು ಪ್ರಾಯೋಜಿಸುತ್ತಿದೆ.

ನಂತರ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಚೆಂಡೆ ಬಾರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ರಂಗಕರ್ಮಿ ಎಂ.ಎಸ್‌.ಸತ್ಯು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ಆಶಯ ನುಡಿಗಳನ್ನು ಆಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಎನ್.ಆರ್‌.ವಿಶುಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಪದ್ಮಾ ಕೊಡಗು ಅವರ ‘ಉಡುಪಿ ಜಿಲ್ಲಾ ರಂಗಭೂಮಿ’, ಬಸವರಾಜ ಬೆಂಗೇರಿ ಅವರ ‘ಅವಿಭಜಿತ ಧಾರವಾಡ ಜಿಲ್ಲಾ ರಂಗಮಾಹಿತಿ’ ಹಾಗೂ ಗಣೇಶ ಅಮೀನಗಡ ಅವರ ‘ರಹಿಮಾನವ್ವ ಕಲ್ಮನಿ’ ಕೃತಿ ಬಿಡುಗಡೆಗೊಳ್ಳಲಿವೆ. ಕರಾವಳಿಯ ರಂಗಕರ್ಮಿಗಳಾದ ಪ್ರಭಾಕರ ಕಲ್ಯಾಣಿ, ಮೈಮ್‌ ರಮೇಶ್, ಮೋಹನ್‌ ಮಾರ್ನಾಡು ಹಾಗೂ ಉಷಾ ಭಂಡಾರಿ ಸೇರಿದಂತೆ 25 ರಂಗಕರ್ಮಿಗಳಿಗೆ ವಾರ್ಷಿಕ ಪ್ರಶಸ್ತಿ ಹಾಗೂ ನಾಲ್ಕು ದತ್ತಿ ಪುರಸ್ಕಾರಗಳು ಪ್ರದಾನವಾಗಲಿವೆ. ಜತೆಗೆ, ಪಿ.ಗಂಗಾಧರಸ್ವಾಮಿ ಅವರಿಗೆ ಗೌರವ ಪ್ರಶಸ್ತಿ ನೀಡಲಾಗುವುದು.

ಸುದೇಶ್‌ ಮಹಾನ್‌ ಅವರು ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನಕ್ಕೆಂದೇ ರಚಿಸಿದ ವಿಶಿಷ್ಟ ಕಲಾಕೃತಿಯನ್ನು ಪ್ರಶಸ್ತಿ ಫಲಕವಾಗಿ, ನಟರಾಜ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಲಾಗುವುದು. ‌

ರಂಗಭೂಮಿ ಉಡುಪಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ‘ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉಡಪಿಯಲ್ಲಿ ಆಯೋಜಿಸಿರುವುದಕ್ಕೆ ಖುಷಿಯಾಗಿದೆ. ಕರಾವಳಿಯ ಪ್ರೀತಿ, ಅಭಿಮಾನ ಹೀಗೆಯೇ ಮುಂದುವರಿಯಲಿ’ ಎಂದು ಆಶಿಸಿದರು. 

ಸರ್ಕಾರದ ಅನುದಾನ ನಿರೀಕ್ಷಿಸದೆ ನಿರಂತರವಾಗಿ ರಂಗಭೂಮಿಯ ಚಟುವಟಿಕೆಗಳು ಉಡುಪಿಯಲ್ಲಿ ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಿಂದ ‌ರಂಗ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗಿದೆ. ರಂಗತಂಡಗಳಿಗೆ ಶಕ್ತಿ ಮೂಡಬಹುದು ಎಂದು ರಂಗಭೂಮಿ ಉಡುಪಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಚಂದ್ರ ಕುತ್ಪಾಡಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !