ಗುರುವಾರ , ಆಗಸ್ಟ್ 11, 2022
20 °C
ರಾಜ್ಯ ಬಂದ್‌ ಬೆಂಬಲಿಸಿ ಹಲವು ಸಂಘಟನೆಗಳಿಂದ ಪ್ರತಿಭಟನೆ

‘ರೈತ, ಕಾರ್ಮಿಕ, ಜನ ವಿರೋಧಿ ಸರ್ಕಾರ ಉಳಿಯುವುದಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರೈತ, ಕಾರ್ಮಿಕ ಹಾಗೂ ಜನವಿರೋಧಿ ನೀತಿ ಅನುಸರಿಸಿದ ಸರ್ಕಾರಗಳು ಬಹುಕಾಲ ಉಳಿದಿಲ್ಲ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರಕ್ಕೂ ಮುಂದಿನ ಚುನಾವಣೆಯಲ್ಲಿ ದುಡಿಯುವ ವರ್ಗ ತಕ್ಕ ಪಾಠ ಕಲಿಸಲಿದೆ ಎಂದು ಸಿಪಿಐ(ಎಂ) ರಾಜ್ಯ ಮುಖಂಡ ಕೆ.ಶಂಕರ್ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ರೈತ ಸಂಘಟನೆಗಳು ಕರೆನೀಡಿದ್ದ ರಾಜ್ಯ ಬಂದ್‌ನ ಭಾಗವಾಗಿ ಹುತಾತ್ಮರ ಸ್ಮಾರಕದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಬಹುರಾಷ್ಟ್ರೀಯ ಕಂಪನಿಗಳಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ದುಡಿಯುವ ವರ್ಗದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ದೇಶಕ್ಕೆ ಅನ್ನಹಾಕುವ ರೈತರ ಪರವಾಗಿ ನಿಲ್ಲಬೇಕಾದ ಸರ್ಕಾರ, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿರುವುದು ಖಂಡನೀಯ ಎಂದರು.

ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್‌ ಕಂಪನಿಗಳ ಕೈಗೆ ಕೊಟ್ಟು ರೈತರನ್ನು ಬೀದಿಗೆ ತಳ್ಳುವ ಹುನ್ನಾರ ನಡೆದಿದೆ. ವಿದ್ಯುತ್ ಉತ್ಪಾದನಾ ಕ್ಷೇತ್ರವನ್ನು ಖಾಸಗೀಕರಣಗೊಳಿಸಿ ರೈತರಿಗೆ ಬಡವರಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಅನ್ನು ನಿಲ್ಲಿಸಲು ವಿದ್ಯುತ್‌ಚ್ಛಕ್ತಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ ಎಂದು ಆರೋಪಿಸಿದರು.

ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ದೇಶದ ಮೂಲೆಮೂಲೆಗಳಿಂದ ಹೋರಾಟದ ಸಾಗರವಾಗಿ ದೆಹಲಿ ಸೇರುತ್ತಿರುವ ರೈತರ ಮೇಲೆ ಸರ್ಕಾರ ಜಲಫಿರಂಗಿ ದಾಳಿ ನಡೆಸುತ್ತಿರುವುದು ಖಂಡನೀಯ. ಕೇಂದ್ರದ ಪ್ರತಿರೋಧದ ನಡುವೆಯೂ ರೈತರ ಹೋರಾಟದ ಕಾವು ಹೆಚ್ಚಾಗುತ್ತಿರುವುದು ಅನ್ನದಾತರ ಹೋರಾಟಕ್ಕಿರುವ ಶಕ್ತಿಯನ್ನು ತೋರಿಸುತ್ತಿದೆ’ ಎಂದರು.

ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರ ಅದಾನಿ, ಅಂಬಾನಿ ಪರವಾಗಿ ನಿಂತಿದೆ. ವಿದ್ಯುತ್‌ಚ್ಛಕ್ತಿ ಕಾಯ್ದೆಗೆ ತಿದ್ದುಪಡಿ ತಂದು ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಕಡಿತಕ್ಕೆ ಮುಂದಾಗಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು ಉದ್ಯಮಿಗಳಿಗೆ ನೀಡಲು ಮುಂದಾಗಿದೆ ಎಂದರು.

ಕಾಂಗ್ರೆಸ್‌ ಮುಖಂಡ ಅಣ್ಣಯ್ಯ ಶೇರಿಗಾರ್ ಮಾತನಾಡಿ, ‘ದೇಶಕ್ಕೆ ಅನ್ನಹಾಕುವ ರೈತರ ಬೆನ್ನುಮೂಳೆಯನ್ನೇ ಮುರಿಯಲು ಹೊರಟಿರುವ ಕೇಂದ್ರ ಸರ್ಕಾರ ಹೆಚ್ಚುಕಾಲ ಉಳಿಯುವುದಿಲ್ಲ. ರೈತ ವಿರೋಧಿ ಕಾಯ್ದೆಗಳನ್ನು ರೈತರು ಮಾತ್ರವಲ್ಲ; ಎಲ್ಲರೂ ಒಟ್ಟಾಗಿ ವಿರೋಧಿಸದಿದ್ದರೆ, ಭವಿಷ್ಯದಲ್ಲಿ ಆಹಾರದ ಸಮಸ್ಯೆ ಎದುರಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ, ‘ಕೇಂದ್ರ ಸರ್ಕಾರ ಕನಿಷ್ಠ ರೈತ ಮುಖಂಡರ ಜೊತೆಗೆ ಚರ್ಚಿಸದೆ ಏಕಾಏಕಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದು ಸರ್ವಾಧಿಕಾರಿ ಧೋರಣೆ. ರೈತರನ್ನು ಲಘುವಾಗಿ ಪರಿಗಣಿಸಿದ ಕೇಂದ್ರ ಸರ್ಕಾರದ ವಿರುದ್ಧ ರೈತ ಹೋರಾಟ ದಿನೇ ದಿನೇ ಪ್ರಬಲಗೊಳ್ಳುತ್ತಿದ್ದು, ಸರ್ಕಾರ ಅಲುಗಾಡುತ್ತಿದೆ’ ಎಂದರು.

ಮುಖಂಡ ಯಾಸೀನ್ ಮಲ್ಪೆ ಮಾತನಾಡಿ, ‘ಬಿಜೆಪಿ ಸರ್ಕಾರಕ್ಕೆ ರೈತರ ಪರವಾಗಿ ನಿಜವಾದ ಕಾಳಜಿ ಇದ್ದರೆ, ಕಾಯ್ದೆ ಜಾರಿಗೂ ಮುನ್ನ ರೈತರ ಜತೆ ಚರ್ಚಿಸಬೇಕಿತ್ತು. ಬದಲಾಗಿ ಕೋವಿಡ್‌ ಸಂದರ್ಭವನ್ನು ಬಳಸಿಕೊಂಡು ತರಾತುರಿಯಲ್ಲಿ ಕಾಯ್ದೆ ಜಾರಿಗೆ ಹೊರಟಿದ್ದು ಏಕೆ. ನಿಜವಾದ ದೇಶಪ್ರೇಮಿಗಳು ರೈತರು ಮಾತ್ರ. ಬಿಜೆಪಿ ನಾಯಕರು ದೇಶ ಪ್ರೇಮದ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ದೇಶವನ್ನು ಮಾರಲು ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸಲಾಯಿತು. ಮುಖಂಡರಾದ ಸುಂದರ ಮಾಸ್ತರ್‌, ಶಶಿಧರ್ ಶೆಟ್ಟಿ, ಸುರೇಶ್ ನಾಯಕ್‌, ಇಸ್ಮಾಯಿಲ್ ಆತ್ರಾಡಿ, ಸೌರಭ್ ಬಲ್ಲಾಳ್‌, ಗೀತಾ ವಾಗ್ಲೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.