ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಬಾಹಿರ ಲೈಟ್‌ ಫಿಶಿಂಗ್‌ ಬೇಡ: ಅಧಿಕಾರಿಗಳಿಗೆ ದಿಗ್ಭಂಧನ

ಮಲ್ಪೆ ಬಂದರಿನಲ್ಲಿ ಕಡಲ ಮಕ್ಕಳ ಆಕ್ರೋಶ
Last Updated 29 ಜನವರಿ 2019, 12:00 IST
ಅಕ್ಷರ ಗಾತ್ರ

ಉಡುಪಿ: ಪರ್ಸಿನ್‌ ಬೋಟ್‌ ಮೀನುಗಾರರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಲೈಟ್ ಫಿಶಿಂಗ್‌ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಮಂಗಳವಾರ ಮಲ್ಪೆ ಬಂದರಿನಲ್ಲಿ ತೀವ್ರ ಪ್ರತಿಭಟನೆ ನಡೆಸಿತು.

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮೀನುಗಾರರು ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿಯಮಬಾಹಿರ ಲೈಟ್ ಫಿಶಿಂಗ್‌ಗೆ ಅವಕಾಶ ನೀಡಬಾರದು ಎಂದು ಘೋಷಣೆ ಕೂಗಿದರು.

2017ರಲ್ಲಿ ಲೈಟ್‌ ಫಿಶಿಂಗ್ ಮೀನುಗಾರಿಕೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ನಿಷೇಧಿಸಿತ್ತು. ಬಳಿಕ ಮಲ್ಪೆಯ ಅಖಿಲ ಕರ್ನಾಟಕ ಪರ್ಸಿನ್‌ ಮೀನುಗಾರರ ಸಂಘವು ನ್ಯಾಯಾಲಯದ ಮೊರೆ ಹೋಗಿ, 2016ರಲ್ಲಿ ರಾಜ್ಯ ಸರ್ಕಾರ ಲೈಟ್‌ ಫಿಶಿಂಗ್ ಮೀನುಗಾರಿಕೆಗೆ ವಿಧಿಸಿದ್ದ ಷರತ್ತುಗಳನ್ನು ಪಾಲಿಸುವುದಾಗಿ ಮನವಿ ಸಲ್ಲಿಸಿತ್ತು.

ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಲಯ ಷರತ್ತು ಹಾಗೂ ನಿಬಂಧನೆಗೊಳಪಟ್ಟು ಲೈಟ್‌ ಫಿಶಿಂಗ್ ನಡೆಸುವಂತೆ ಆದೇಶ ನೀಡಿತ್ತು. ಆದರೆ, ಈಗ ಕೋರ್ಟ್‌ ಆದೇಶವನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.

ಲೈಟ್ ಫಿಶಿಂಗ್‌ನಿಂದ ಸಮುದ್ರದಲ್ಲಿ ಮತ್ಸ್ಯಕ್ಷಾಮ ಎದುರಾಗಲಿದೆ. ಮೀನುಗಾರರು ಉದ್ಯೋಗ ಇಲ್ಲದೆ ನಿರ್ಗತಿಕರಾಗಬೇಕಾಗುತ್ತದೆ. ಮೀನುಗಳ ಸಂತೋನೋತ್ಪತ್ತಿ ಕುಂಠಿತವಾಗಲಿದೆ. ಅವೈಜ್ಞಾನಿಕ ಲೈಟ್‌ ಫಿಶಿಂಗ್‌ಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

2016ರ ರಾಜ್ಯ ಸರ್ಕಾರದ ಷರತ್ತುಗಳನ್ವಯ ಮೀನುಗಾರಿಕಾ ಋತುವಿನಲ್ಲಿ ತಿಂಗಳಿಗೆ 10 ದಿನ ಅಂದರೆ ಅಮಾವಾಸ್ಯೆಯ ಮೊದಲ 5 ದಿನ ಹಾಗೂ ನಂತರದ 5 ದಿನ ಮಾತ್ರ ನಡೆಸಬೇಕು. 12 ನಾಟಿಕಲ್‌ ಮೈಲುಗಳ ಆಚೆಗೆ ಮೀನು ಹಿಡಿಯಬೇಕು. ಪರ್ಸಿನ್‌ ಮೀನುಗಾರಿಕೆಗೆ ಅವಶ್ಯವಿರುವ ಪರವಾನಗಿಯನ್ನು ಪಡೆದುಕೊಳ್ಳಬೇಕು.

ಸರದಿ ಪ್ರಕಾರ ದಿನಕ್ಕೆ ಶೇ 20ರಷ್ಟು ಬೋಟ್‌ಗಳು ಮಾತ್ರ ಮೀನುಗಾರಿಕೆಗೆ ಇಳಿಯಬೇಕು. ಹೀಗೆ ಹಲವು ನಿಯಮಗಳಿದ್ದು, ಎಲ್ಲವನ್ನೂ ಉಲ್ಲಂಘಿಸಲಾಗಿದೆ ಎಂದು ಸಾಂಪ್ರದಾಯಿಕ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಕು ಮೀನುಗಾರಿಕೆಗೆ ಬಳಸುತ್ತಿರುವ ಬೋಟ್‌ನಲ್ಲಿ ಮೆಸ್ಕಾಂ ಅನುಮತಿ ಪಡೆಯದೆ ಅಧಿಕ ಸಾಮರ್ಥ್ಯದ ಜನರೇಟರ್‌ಗಳನ್ನು ಅಳವಡಿಸಲಾಗಿದೆ. ಲೈಟ್‌ ಫಿಶಿಂಗ್ ಪರಿಶೀಲಿಸಿ ವರದಿ ನೀಡಬೇಕಿದ್ದಕರಾವಳಿ ಕಾವಲು ಪಡೆಯ ಅಧಿಕಾರಿಗಳೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮೀನುಗಾರರು ಆರೋಪಿಸಿದರು.

ಲೈಟ್ ಫಿಷಿಂಗ್‌ಗೆ ಅವಕಾಶ ನೀಡುವುದಕ್ಕೂ ಮುನ್ನ ಅಧಿಕಾರಿಗಳು ಮೀನುಗಾರರ ಸಭೆ ಕರೆಯಬೇಕಿತ್ತು. ನಿಯಮಗಳನ್ನು ಉಲ್ಲಂಘಿಸದಂತೆ ಸೂಚನೆ ನೀಡಬೇಕಿತ್ತು. ಇಂತಹ ಯಾವುದೇ ಕ್ರಮಗಳನ್ನು ಮೀನುಗಾರಿಕಾ ಇಲಾಖೆ ಮಾಡಿಲ್ಲ. ಏಕಾಏಕಿ ಅನುಮತಿ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನಧಿಕೃತ ಲೈಟ್‌ ಫಿಶಿಂಗ್‌ಗೆ ಕಡಿವಾಣ ಹಾಕದಿದ್ದರೆ ಸಾಂಪ್ರದಾಯಿಕ ಮೀನುಗಾರರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ. ಅಳಿವೆಯಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನಾಡದೋಣಿ ಮೀನುಗಾರರ ಒಕ್ಕೂಟ ಹಾಗೂ ಆಳಸಮುದ್ರ ಮೀನುಗಾರರ ಸಂಘದ ಸದಸ್ಯರು, ಮುಖಂಡರಾದ ಆನಂದ್ ಖಾರ್ವಿ, ಕಿಶೋರ್ ಡಿ.ಸುವರ್ಣ, ಮಂಜು ಬಿಲ್ಲವ, ಚಂದ್ರಕಾಂತ್ ಕರ್ಕೇರಾ ಅವರೂ ಇದ್ದರು.

ಏನಿದು ಲೈಟ್ ಫಿಶಿಂಗ್‌ ?
ಸಮುದ್ರಾಳದಲ್ಲಿ ಬೆಳಕಿನ ಸಹಾಯದಿಂದ ಮೀನುಗಾರಿಕೆ ಮಾಡುವ ವಿಧಾನವನ್ನು ಲೈಟ್‌ ಫಿಶಿಂಗ್ ಎನ್ನಲಾಗುತ್ತದೆ. ಇದೊಂದು ಅಸಾಂಪ್ರದಾಯಿಕ ಮೀನುಗಾರಿಕೆಯ ವಿಧಾನ. ಇದರಿಂದ ಕ್ರಮೇಣ ಮತ್ಸ್ಯ ಸಂತತಿ ನಾಶವಾಗುತ್ತದೆ ಎಂಬ ಆರೋಪಗಳಿವೆ. ಬೆಳಕನ್ನು ಆಕರ್ಷಿಸಿ ಬರುವ ರಾಶಿಗಟ್ಟಲೆ ಮೀನನ್ನು ಹಿಡಿಯಲಾಗುತ್ತದೆ. ಲೈಟ್‌ ಫಿಶಿಂಗ್‌ನಲ್ಲಿ 25 ಕೆ.ವಿ. ಗಿಂತ ಕಡಿಮೆ ಸಾಮರ್ಥ್ಯದ ಜನರೇಟರ್ ಬಳಸಬೇಕು, 45 ಎಂಎಂ ಗಿಂತ ಸಣ್ಣ ಬಲೆಗಳನ್ನು ಬಳಸಬಾರದು ಎಂಬ ನಿಯಮಗಳಿದ್ದರೂ ಪಾಲನೆಯಾಗುತ್ತಿಲ್ಲ. ಮೀನುಗಳ ಸಂತಾನೋತ್ಪತ್ತಿಗೆ ಇದರಿಂದ ತೊಂದರೆಯಾಗಲಿದೆ. ಸಾಂಪ್ರದಾಯಿಕ ಮೀನುಗಾರರಿಗೆ ಮೀನುಗಳು ದೊರೆಯುವುದಿಲ್ಲ ಎಂಬ ಆರೋಪಗಳಿವೆ.

ಅಧಿಕಾರಿಗಳಿಗೆ ದಿಗ್ಭಂಧನ

ಮಲ್ಪೆ ಬಂದರಿನ ಮುಖ್ಯದ್ವಾರದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿನೀಡಿದ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್ ಹಾಗೂ ಸಹಾಯಕ ನಿರ್ದೇಶಕ ಚಂದ್ರಶೇಖರ್ ಅವರಿಗೆ ಮೀನುಗಾರರು ದಿಗ್ಭಂಧನ ಹಾಕಿದರು. ಒಂದು ತಾಸಿಗೂ ಹೆಚ್ಚುಕಾಲ ರಸ್ತೆಯಲ್ಲೇ ನಿಲ್ಲಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಅಕ್ರಮ ಲೈಟ್‌ ಫಿಶಿಂಗ್ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ಏಕೆ ಎಂದು ಪ್ರಶ್ನಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT