ವಕೀಲರ ಮೇಲೆ ಹಲ್ಲೆಗೆ ಖಂಡನೆ: ಪ್ರತಿಭಟನೆ

ಉಡುಪಿ: ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಜಿಲ್ಲಾ ವಕೀಲರ ಸಂಘದಿಂದ ಗುರುವಾರ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ನ್ಯಾಯವಾದಿಯನ್ನು ದೇಶದ್ರೋಹಿಯ ರೀತಿ ನಡೆಸಿಕೊಂಡಿರುವ ಪೊಲೀಸರ ಕ್ರಮ ಖಂಡನೀಯ. ಕಾನೂನು ಉಲ್ಲಂಘಿಸಿ ಅಮಾನವೀಯವಾಗಿ ನಡೆದುಕೊಂಡಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ವಕೀಲರ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳನ್ನು ಅಮಾನತು ಮಾಡುವುದರ ಜತೆಗೆ, ಇಲಾಖಾ ತನಿಖೆ ನಡೆಸಿ ಕೆಲಸದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಮಾತನಾಡಿ, ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನಾಲ್ಡ್ ಪ್ರವೀಣ್ ಕುಮಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಸಂಜೀವ ಶಾಂತಾರಾಮ ಶೆಟ್ಟಿ, ವಕೀಲರಾದ ಶ್ರೀಧರ, ದಿವಾಕರ್ ಶೆಟ್ಟಿ, ಕೆ.ಎಂ.ಶೆಣೈ, ದಿನೇಶ್ ಶೆಟ್ಟಿ, ಆನಂದ್ ಮಡಿವಾಳ, ಪೂರ್ಣಿಮಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.