ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ವೈಫಲ್ಯ ಮರೆಮಾಚಲು ಪ್ರತಿಭಟನೆ ನಾಟಕ: ಕೋಟ ಶ್ರೀನಿವಾಸ ಪೂಜಾರಿ ಟೀಕೆ

Published 8 ಫೆಬ್ರುವರಿ 2024, 16:27 IST
Last Updated 8 ಫೆಬ್ರುವರಿ 2024, 16:27 IST
ಅಕ್ಷರ ಗಾತ್ರ

ಉಡುಪಿ: ಬರ ನಿರ್ವಹಣೆ, ಆಡಳಿತ ನಿರ್ವಹಣೆಯ ವೈಫಲ್ಯವನ್ನು ಮರೆಮಾಚಿಕೊಳ್ಳಲು, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಗುರುವಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಕೇಂದ್ರ ಸರ್ಕಾರ 2004 ರಿಂದ 2014ರವರೆಗೆ ₹81,798 ಕೋಟಿ ಅನುದಾನ ನೀಡಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ 10 ವರ್ಷಗಳಲ್ಲಿ ₹2,82,791 ಕೋಟಿ ಅನುದಾನ ನೀಡಿದೆ. 

ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ₹6,750 ಕೋಟಿ ಬಿಡುಗಡೆಯಾಗಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹13,500 ಕೋಟಿ ನೀಡಿದೆ. ರೈಲ್ವೆ ಯೋಜನೆಗಳಿಗೆ ಯುಪಿಎ ಸರ್ಕಾರ ₹835 ಕೋಟಿ ಬಿಡುಗಡೆ ಮಾಡಿದ್ದರೆ, ಬಿಜೆಪಿ ಸರ್ಕಾರ ₹18224 ಕೋಟಿ ಬಿಡುಗಡೆ ಮಾಡಿದೆ.

ಎಲ್ಲ ರಂಗಗಳಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಅಸಹಾಯಕತೆಯಿಂದ ಕೇಂದ್ರದ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡುತ್ತಿದೆ ಎಂದು ಕೋಟ ದೂರಿದರು.

ರಾಜ್ಯದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಡಿ.ಕೆ.ಸುರೇಶ್‌ ದೇಶ ವಿಭಜನೆ ಹೇಳಿಕೆ ನೀಡುವ ಮೂಲಕ ದೇಶವನ್ನು ಒಡೆಯುವ ಮಾತನಾಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ದೇಶ ಒಡೆಯುವವರ ಹಾಗೂ ದೇಶ ಕಟ್ಟುವವರ ನಡುವೆ ನಡೆಯಲಿದೆ ಎಂದರು.

ರಾಜ್ಯದಲ್ಲಿ 17 ಸಾವಿರ ಹಾಲು ಉತ್ಪಾದಕರ ಸಂಘಗಳಿದ್ದು 10 ಲಕ್ಷ ಹೈನುಗಾರರು ಇದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೈನುಗಾರರಿಗೆ ಸಬ್ಸಿಡಿ ಬಿಡುಗಡೆ ಮಾಡಿಲ್ಲ. ಸರ್ಕಾರ ₹750 ಕೋಟಿ ಸಬ್ಸಿಡಿ ಬಾಕಿ ಇರಿಸಿಕೊಂಡಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆ ಜಾರಿಗೊಳಿಸುವುದಾಗಿ ಪಾದಯಾತ್ರೆ ಮಾಡಿದ ಕಾಂಗ್ರೆಸ್‌ ಅಧಿಕಾರಕ್ಕೇರಿದ ಬಳಿಕ ಕೈಕಟ್ಟಿ ಕುಳಿತಿದೆ.

ರಾಜ್ಯದಲ್ಲಿ ತೀವ್ರ ಬರದಿಂದ ರೈತರು ಕಂಗಾಲಾಗಿದ್ದಾರೆ, ಪರಿಶಿಷ್ಟರಿಗೆ ಮೀಸಲಿರಿಸಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಹಳಿ ತಪ್ಪಿವೆ, ಗೃಹಲಕ್ಷ್ಮಿ ಯೋಜನೆ ಅರ್ಹರಿಗೆ ಮುಟ್ಟಿಲ್ಲ, ಶಕ್ತಿ ಯೋಜನೆಯಡಿ ಅಗತ್ಯಕ್ಕೆ ತಕ್ಕಷ್ಟು ಬಸ್‌ಗಳನ್ನು ಓಡಿಸುತ್ತಿಲ್ಲ. ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

‘ಹೈನುಗಾರರ ಹಿತ ಕಾಯದ ರಾಜ್ಯ ಸರ್ಕಾರ’ ‘ತೀವ್ರ ಬರ: ರೈತರ ನೆರವಿಗೆ ಧಾವಿಸದೆ ನಿರ್ಲಕ್ಷ್ಯ’ ಕರ್ನಾಟಕ್ಕೆ ಬರಬೇಕಾದ ಜಿಎಸ್‌ಟಿ ಬಂದಿದೆ: ಕೋಟ
‘ಜನಸ್ಪಂದನ ಪ್ರಯೋಜನಕ್ಕಿಲ್ಲ’
ರಾಜ್ಯ ಸರ್ಕಾರದ ಜನಸ್ಪಂದನ ಕಾರ್ಯಕ್ರಮದಿಂದ ತಾಲ್ಲೂಕು ಕಚೇರಿಗಳಿಗೆ ಕಡತಗಳು ವರ್ಗಾವಣೆಯಾಗುವುದು ಬಿಟ್ಟರೆ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಗ್ರಾಮ ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ವಿಫಲವಾಗಿದ್ದು ರಾಜ್ಯಮಟ್ಟದಲ್ಲೂ ಪ್ರಯೋಜನಕ್ಕೆ ಬಾರದಂತಾಗಿದ್ದು ಪ್ರಚಾರ ಪಡೆಯುವ ತಂತ್ರವಷ್ಟೆ ಎಂದು ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT