ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಂಕನಿಡಿಯೂರು ಪಂಚಾಯಿತಿಗೆ ಗ್ರಾಮಸ್ಥರ ಮುತ್ತಿಗೆ

ತ್ಯಾಜ್ಯ ವಿಲೇವಾರಿ ಘಟಕದ ಕಸವನ್ನು ಮಣ್ಣಿನಲ್ಲಿ ಹೂತಿರುವುದಕ್ಕೆ ಆಕ್ರೋಶ
Published 4 ಜುಲೈ 2024, 5:31 IST
Last Updated 4 ಜುಲೈ 2024, 5:31 IST
ಅಕ್ಷರ ಗಾತ್ರ

ಉಡುಪಿ: ತ್ಯಾಜ್ಯ ವಿಲೇವಾರಿ ಘಟಕದ ಕಸವನ್ನು ಮಣ್ಣಿನಲ್ಲಿ ಹೂತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಮತ್ತು ಬಿಜೆಪಿ ಬೆಂಬಲಿತ ಸದಸ್ಯರು ತೆಂಕನಿಡಿಯೂರು ಗ್ರಾಮ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ತ್ಯಾಜ್ಯ ವಿಲೇವಾರಿ ಘಟಕದಿಂದಾಗಿ ತೆಂಕನಿಡಿಯೂರು ವಿಷ್ಣಮೂರ್ತಿ ನಗರದ ನಿವಾಸಿಗಳಿಗೆ ಸಮಸ್ಯೆಯಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕೆಲ ದಿನಗಳ ಹಿಂದೆ ಪಂಚಾಯಿತಿ ಅಧ್ಯಕ್ಷೆಯ ಸೂಚನೆ ಮೇರೆಗೆ ತ್ಯಾಜ್ಯ ಘಟಕದ ಬಳಿ ಜೆಸಿಬಿಯಿಂದ ಹೊಂಡ ತೋಡಿ, 50ರಿಂದ 60 ಲೋಡ್ ಕಸ ಮಣ್ಣಿನಡಿಯಲ್ಲಿ ಹೂತು ಹಾಕಲಾಗಿದೆ. ಕಸ ಹೂತು ಹಾಕಿದ ಸ್ಥಳದಲ್ಲಿ ಮಳೆನೀರು ಸಂಗ್ರಹಗೊಂಡು ಸಮೀಪದ ಕೊಳವೆಬಾವಿಯ ನೀರು ಕಲುಷಿತಗೊಂಡಿದೆ ಎಂದು ಆರೋಪಿಸಿದರು.

ತ್ಯಾಜ್ಯ ವಿಲೇವಾರಿ ಘಟಕದ ಪರಿಸರದ ನಿವಾಸಿಗಳ ಮನೆಯ ಬಾವಿಯ ನೀರು ಕಲುಷಿತಗೊಂಡಿದ್ದು, ರೋಗ ಭೀತಿ ಸೃಷ್ಟಿಯಾಗಿದೆ. ಮಣ್ಣಿನಲ್ಲಿ ಹೂತುಹಾಕಿದ ಕಸ ಶೀಘ್ರ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳ ಗಮನಕ್ಕೂ ತಾರದೆ ಕಸ ಹೂತು ಹಾಕಲು ಅಧ್ಯಕ್ಷೆ ಸೂಚನೆ ನೀಡಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪಂಚಾಯಿತಿ ಸದಸ್ಯರು, ಗ್ರಾಮಸ್ಥರ ಮೇಲೆ ಜಾತಿ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವಿನೋದ್‌ ಸುವರ್ಣ ಆರೋಪಿಸಿದರು.

ತ್ಯಾಜ್ಯ ಹೂತು ಹಾಕಿರುವ ಸ್ಥಳವು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ. ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಜನರ ಆರೋಗ್ಯದ ಕುರಿತು ಕಾಳಜಿ ವಹಿಸಬೇಕೆಂದು ಆಗ್ರಹಿಸಿದರು.

ನಿಮ್ಮ ನಿಮ್ಮ ನಡುವಿನ ಸಮಸ್ಯೆಗಳನ್ನು ನೀವು ನೀವೇ ಪರಿಹರಿಸಿಕೊಳ್ಳಿ ಅದನ್ನು ನಮ್ಮ ಮೇಲೆ ಹಾಕಬೇಡಿ. ತ್ಯಾಜ್ಯ ಘಟಕದಿಂದಾಗಿ ಜನರ ಆರೋಗ್ಯ ಹದಗೆಡುತ್ತಿದೆ. ನಮಗೆ ತೊಂದರೆ ಕೊಡಬೇಡಿ. ಶೀಘ್ರ ಸಮಸ್ಯೆಗೆ ಪರಿಹಾರ ಒದಗಿಸಿ ಎಂದು ಗ್ರಾಮಸ್ಥ ರಾಜ ಒತ್ತಾಯಿಸಿದರು.

ಪಂಚಾಯಿತಿ ಕಚೇರಿಯೊಳಗಿರುವ ಅಧ್ಯಕ್ಷೆ ಪ್ರತಿಭಟನೆ ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದೂ ಗ್ರಾಮಸ್ಥರು ಆಗ್ರಹಿಸಿದರು. ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಿಜಯಾ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಹೂತು ಹಾಕಿರುವ ಕಸ ವಾರದೊಳಗೆ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಡಿ. ನಾಯ್ಕ್ ಅವರು ಕೂಡ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದರು.

ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರಾದ ವಿಕಿತಾ ಸುರೇಶ್‌, ಗೀತಾ ಶೆಟ್ಟಿ, ಮಾಲಿನಿ, ಅರುಣ್‌ ಜತ್ತನ್ನ, ಸತೀಶ್‌ ಪೂಜಾರಿ, ಪ್ರಶಾಂತ್‌ ಹೆಬ್ಬಾರ್‌, ಪ್ರದೀಪ್‌ ಶೆಟ್ಟಿ, ರೇಖಾ, ಗ್ರಾಮಸ್ಥರಾದ ಅಲ್ತಾಫ್‌, ದಿನೇಶ್‌, ಚರಣ್‌ರಾಜ್‌, ಸುರಕ್ಷಾ ಇದ್ದರು.

ಪ್ರತಿಭಟನಕಾರರು ಪಿಡಿಒ ಬಳಿ ಅಳಲು ತೋಡಿಕೊಂಡರು
ಪ್ರತಿಭಟನಕಾರರು ಪಿಡಿಒ ಬಳಿ ಅಳಲು ತೋಡಿಕೊಂಡರು

‘ರಾಜಕೀಯ ಪ್ರೇರಿತ ಪ್ರತಿಭಟನೆ’ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತವಿರುವಾಗಲೇ ತ್ಯಾಜ್ಯ ವಿಲೇವಾರಿ ಘಟಕ ಗೋಮಾಳದಲ್ಲಿ ಸ್ಥಾಪಿಸಲಾಗಿದೆ. ಇದರ ಸತ್ಯಾಸತ್ಯತೆ ತಿಳಿಯಲು ತನಿಖೆಯಾಗಲಿ. ಹಲವು ವರ್ಷಗಳಿಂದಲೂ ಇದೇ ರೀತಿ ಹಸಿ ಕಸವನ್ನು ಮಣ್ಣಿನಲ್ಲಿ ಹೂತು ಹಾಕಲಾಗುತ್ತಿತ್ತು. ಈಗ ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ತ್ಯಾಜ್ಯ ಘಟಕದ ಬಳಿ ಇರುವ ಕೊಳವೆಬಾವಿಯ ನೀರನ್ನು ಯಾರೂ ಉಪಯೋಗಿಸುತ್ತಿಲ್ಲ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಹೇಗೆ ಸೃಷ್ಟಿಯಾಯಿತು. ನಾನು ಅಧ್ಯಕ್ಷೆಯಾಗಿ ಆರು ತಿಂಗಳಾಯಿತಷ್ಟೇ. ನನ್ನನ್ನು ಆಡಳಿತ ನಡೆಸಲು ಬಿಡುವುದಿಲ್ಲ. ತ್ಯಾಜ್ಯ ಘಟಕದ ಸಮೀಪವಿರುವ ಔಷಧ ಫ್ಯಾಕ್ಟರಿ ಬಳಿಯ ತೋಡು ಕಟ್ಟಿ ನಿಂತಿದ್ದರಿಂದ ಮಳೆ ನೀರು ಸಂಗ್ರಹವಾಗುತ್ತಿತ್ತು. ಈಗ ಈ ಸಮಸ್ಯೆ ಪರಿಹರಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಡಿ. ನಾಯ್ಕ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT