ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಾಗದ ಬೋಟ್‌: 6ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧಾರ
Last Updated 2 ಜನವರಿ 2019, 18:37 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ 7 ಮೀನುಗಾರರ ನಾಪತ್ತೆಯಾಗಿ 15 ದಿನಗಳು ಕಳೆದಿವೆ. ಮೀನುಗಾರರ ಪತ್ತೆಗೆ ಗಂಭೀರ ಪ್ರಯತ್ನಗಳು ನಡೆದಿಲ್ಲ. ಹಾಗಾಗಿ, ಜ.6ರಂದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ರಾಷ್ಟ್ರೀಯ ಹೆದ್ದಾರಿ 66 ತಡೆದು ಹೋರಾಟ ನಡೆಸಲಾಗುವುದು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.

ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರಿಕೆಗೆ ಸಂಬಂಧಿಸಿದ ಸಂಘಟನೆಗಳು ಬುಧವಾರ ಮಲ್ಪೆ ಬಂದರಿನಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಒಕ್ಕೊರಲಿನ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದರು.

ಏಳು ಮಂದಿ ಮೀನುಗಾರರನ್ನು ಹೊತ್ತು ಡಿ.12ರಂದು ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಆಳಸಮುದ್ರ ಬೋಟ್‌ ಡಿ.15ರ ಮಧ್ಯರಾತ್ರಿ ನಾಪತ್ತೆಯಾಗಿದೆ. ಈ ದುರ್ಘಟನೆ ಸಂಭವಿಸಿ 16 ದಿನಗಳು ಕಳೆದರೂ ಸುಳಿವು ಲಭ್ಯವಾಗಿಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕುಂದರ್‌ ಬೇಸರ ವ್ಯಕ್ತಪಡಿಸಿದರು.

ಜ.6ರಂದು ಉಡುಪಿ, ಮಂಗಳೂರು, ಕಾರವಾರ ಭಾಗದ ಮೀನುಗಾರರು ಬೆಳಿಗ್ಗೆ 8.30ಕ್ಕೆ ಮಲ್ಪೆ ಬಂದರಿನಲ್ಲಿ ಜಮಾಯಿಸಿ, ಅಲ್ಲಿಂದ ಪಾದಯಾತ್ರೆಯ ಮೂಲಕ ಕರಾವಳಿ ಬೈಪಾಸ್‌ಗೆ ತೆರಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು. ಮೂರು ಜಿಲ್ಲೆಯ 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕರಾವಳಿಯ ಮೀನುಗಾರರು ಒಂದಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ಈ ಹೋರಾಟ ಕೊನೆಯಲ್ಲ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವಾಗಬೇಕು. ಜೀವವನ್ನು ಪಣಕ್ಕಿಟ್ಟು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರ ರಕ್ಷಣೆ ಮುಖ್ಯ ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಮಾತನಾಡಿ, ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈವರೆಗೆ ಮೀನುಗಾರಿಕಾ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಸಭೆ ಕರೆದು ಮೀನುಗಾರರೊಂದಿಗೆ ಚರ್ಚಿಸದಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೋಟ್‌ ನಾಪತ್ತೆ ಪ್ರಕರಣ ಮೀನುಗಾರರಲ್ಲಿ ಆತಂಕ ತಂದೊಡ್ಡಿದೆ. ನಾಪತ್ತೆಯಾದ ಮೀನುಗಾರರ ಕುಟುಂಬದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ರಾಜ್ಯ ಸರ್ಕಾರದ ಗಮನ ಸೆಳೆಯಲು ದಕ್ಷಿಣ ಕನ್ನಡ, ಕಾರವಾರ ಹಾಗೂ ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಒಟ್ಟಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟನ್ನು ಪ್ರದರ್ಶಿಸಬೇಕಾಗಿದೆ ಎಂದರು.

ಮೀನುಗಾರರ ಮುಖಂಡ ರವಿರಾಜ್‌ ಸುವರ್ಣ ಮಾತನಾಡಿ, ಮೀನುಗಾರರು ಪ್ರಾಣವನ್ನು ಉಳಿಸಿಕೊಳ್ಳಲು ಬೀದಿಗೆ ಬರುವಂತಾಗಿದೆ. 45 ಲಕ್ಷ ಜನಸಂಖ್ಯೆ ಹೊಂದಿರುವ ಮೀನುಗಾರರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಮುಂದೆ ರಾಜ್ಯ ಸರ್ಕಾರಕ್ಕೆ ಉಳಿಗಾಲ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.

ಮಂಗಳೂರು ಪರ್ಸಿನ್ ಮೀನುಗಾರರ ಸಂಘದ ಇಬ್ರಾಹಿಂ ಬೆಂಗ್ರೆ, ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಬೈಂದೂರು ವಲಯ ನಾಡದೋಣಿ ಸಂಘದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ರಾಮ ಕಾಂಚನ್, ರಾಮ ಅಮೀನ್, ಗೋಪಾಲ್ ಭಟ್ಕಳ್, ನಿತೀಶ್ ಕುಮಾರ್, ವಾಸುದೇವ ಬೊಳೂರು, ಗುರುದಾಸ್ ಬಂಗೇರ, ಬಿ.ಬಿ. ಕಾಂಚನ್, ರಮೇಶ್ ಗಂಗೊಳ್ಳಿ, ಮಂಜು ಬಿಲ್ಲವ, ರವಿರಾಜ್ ಸುವರ್ಣ, ಗುಂಡು ಬಿ.ಅಮೀನ್ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಹಸಿ ಮೀನುಗಾರ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್, ಸಂಘಟನೆಗಳ ಮುಖಂಡರಾದ ಹರಿಶ್ಚಂದ್ರ ಕಾಂಚನ್, ಸುಧಾಕರ್ ಕುಂದರ್, ರಾಘವ, ರವಿ ಸುವರ್ಣ, ಜನಾರ್ದನ ತಿಂಗಳಾಯ, ಜಲಜ ಕೋಟ್ಯಾನ್, ನಾಗರಾಜ್ ಸುವರ್ಣ, ನಿತಿನ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT