ಮಂಗಳವಾರ, ಜನವರಿ 19, 2021
21 °C

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಸೋಂಕಿತರ ಶವ ಸಾಗಿಸಿದ ಸಾರಥಿ ಸುಮಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌–19 ವ್ಯಾಪಕವಾಗಿದ್ದ ಸಂದರ್ಭ ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗೆ ಕರೆತರುವ ಹಾಗೂ ಮೃತ ಸೋಂಕಿತರ ಶವಗಳನ್ನು ಅಂತ್ಯಕ್ರಿಯೆ ನಡೆಯುವ ಸ್ಥಳಗಳಿಗೆ ತಲುಪಿಸುವ ಜವಾಬ್ದಾರಿ ಆರೋಗ್ಯ ಇಲಾಖೆಯ ಮೇಲಿತ್ತು. ಈ ಮಹತ್ವದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದವರು ಜಿಲ್ಲಾ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಸುಮಂತ್‌.

ಸೋಂಕಿತರ ಶವಗಳಿಂದ ಸೋಂಕು ಹರಡುತ್ತದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾದ ಸಂದರ್ಭ ಜಿಲ್ಲೆಯಲ್ಲಿ ಸ್ವತಃ ವೈದ್ಯರು ಕೂಡ ಶವಗಳನ್ನು ಮುಟ್ಟಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭ ಧೃತಿಗೆಡದೆ ನೂರಾರು ಶವಗಳನ್ನು ಅಂತ್ಯಸಂಸ್ಕಾರ ನಡೆಯುವ ಸ್ಥಳಗಳಿಗೆ ಕೊಂಡೊಯ್ಯುವ ಮೂಲಕ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದವರು ಸುಮಂತ್‌.

ಸೋಂಕಿತರ ಶವಗಳನ್ನು ಸ್ವೀಕರಿಸಲು ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಂಬಂಧಿಗಳು ಮುಂದೆ ಬಾರದಿದ್ದಾಗ ಹಲವು ಇಲಾಖೆಗಳ ಸಹಕಾರ ಪಡೆದು ಅಂತ್ಯಕ್ರಿಯೆಗೆ ನೆರವಾಗಿದ್ದಾರೆ. ಕುಟುಂಬದ ಸದಸ್ಯರ
ಸ್ಥಾನದಲ್ಲಿ ನಿಂತು ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಅಂತ್ಯಕ್ರಿಯೆಗೂ ಮುನ್ನ ಕುಟುಂಬದ ಸದಸ್ಯರಿಗೆ ಶವದ ಅಂತಿಮ ದರ್ಶನ ಮಾಡಿಸುವ ಕಾರ್ಯ ಮಾಡಿದ್ದಾರೆ. ಜಿಲ್ಲೆಯಲ್ಲಿ ನೂರಾರು ಸೋಂಕಿತರ ಶವಗಳನ್ನು ಸುರಕ್ಷಿತವಾಗಿ ಸಾಗಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.‌

ಕರ್ತವ್ಯದಲ್ಲಿ ನಿರತರಾಗಿದ್ದ ಕಾರಣ ಎರಡೂವರೆ ತಿಂಗಳ ಕಾಲ ಮನೆಗೂ ಹೋಗದೆ, ಕುಟುಂಬದ ಸದಸ್ಯರನ್ನೂ ಭೇಟಿ ಮಾಡದೆ ಏಕಾಂಗಿಯಾಗಿ ಉಳಿದುಕೊಂಡಿದ್ದರು ಸುಮಿತ್. ಕೆಲವೊಮ್ಮೆ ದಿನಕ್ಕೆ ಐದಾರು ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದು ಉಂಟು. ಲಾಕ್‌ಡೌನ್ ಅವಧಿಯಲ್ಲಿ ಹೋಟೆಲ್‌ಗಳು ಮುಚ್ಚಿದ್ದರಿಂದ ಹಲವರು ಬಾರಿ ಊಟಕ್ಕೆ ಸಮಸ್ಯೆಯಾಗಿತ್ತು. ನಿರಂತರ ಕೆಲಸದ ಒತ್ತಡದಿಂದ ಮಾನಸಿಕವಾಗಿಯೂ ಒತ್ತಡಕ್ಕೆ ಸಿಲುಕಿದ್ದೆ. ವೈಯಕ್ತಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸಿದರೂ ಇಲಾಖೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಿದ ತೃಪ್ತಿ ಇದೆ ಎನ್ನುತ್ತಾರೆ ಸುಮಂತ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು