ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಳೆಗೆ ನಲುಗಿದ ಉಡುಪಿ: 2 ದಿನ ರೆಡ್‌ ಅಲರ್ಟ್‌

ಎನ್‌ಡಿಆರ್‌ಎಫ್‌ನಿಂದ ರಕ್ಷಣಾ ಕಾರ್ಯಾಚರಣೆ; 2,874 ಜನರ ರಕ್ಷಣೆ
Last Updated 20 ಸೆಪ್ಟೆಂಬರ್ 2020, 15:44 IST
ಅಕ್ಷರ ಗಾತ್ರ

ಉಡುಪಿ: ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ ಉಡುಪಿ ಜಿಲ್ಲೆ ನಲುಗಿ ಹೋಗಿದೆ. ಉಡುಪಿಯ ಹಲವು ಬಡಾವಣೆಗಳು ದ್ವೀಪದಂತಾಗಿದ್ದು, ಭಾಗಶಃ ಮುಳುಗಡೆಯಾಗಿವೆ.

2,874 ಜನರ ರಕ್ಷಣೆ

ಶನಿವಾರ ಮಧ್ಯಾಹ್ನ ಆರಂಭವಾದ ಮಳೆ ಬಿಡುವಿಲ್ಲದೆ ಸುರಿದ ಪರಿಣಾಮ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲ್ಲೂಕಿನ ಬಹುತೇಕ ಗ್ರಾಮಗಳು ಜಲಾವೃತವಾಗಿವೆ. ಮನೆಗಳಿಂದ ಹೊರಗೆ ಬರಲಾಗದೆ ಸಾರ್ವಜನಿಕರು ಜಲದಿಗ್ಬಂಧನದಲ್ಲಿ ಸಿಲುಕಿದ್ದರು.

ಮಧ್ಯರಾತ್ರಿ ಅಗ್ನಿಶಾಮಕ ದಳದ ಸಿಬ್ಬಂದಿ, ಕೋಸ್ಟ್‌ಗಾರ್ಡ್ ಹಾಗೂ ಸ್ಥಳೀಯರು ದೋಣಿಗಳನ್ನು ಬಳಸಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಿದರು. ಭಾನುವಾರ ಬೆಳಿಗ್ಗೆ ಮಂಗಳೂರಿನಿಂದ ಬಂದ ಎನ್‌ಡಿಆರ್‌ಎಫ್‌ ತಂಡ ನೆರೆಯಲ್ಲಿ ಸಿಲುಕಿದ್ದ 785 ಕುಟುಂಬಗಳ 2,874 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತು. ಜಿಲ್ಲೆಯಲ್ಲಿ 1,201 ಜನರಿಗೆ ಜಿಲ್ಲಾಡಳಿತ ಊಟ ಹಾಗೂ ವಾಸ್ತವ್ಯ ವ್ಯವಸ್ಥೆ ಮಾಡಿದೆ.

ಸ್ವರ್ಣಾ, ಸೀತಾ, ಪುತ್ತಿಗೆ ಹೊಳೆ, ಮಡಿಸಾಲು, ಎಣ್ಣೆಹೊಳೆ, ಶಾಂಭವಿ ನದಿ ತುಂಬಿ ಹರಿಯುತ್ತಿದ್ದುಉಡುಪಿ– ಶಿವಮೊಗ್ಗ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 169 ‘ಎ’ ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್‌ ಆಗಿತ್ತು. ಉಡುಪಿಯ ಕೃಷ್ಣಮಠ ಹಾಗೂ ಹಿರಿಯಡ್ಕ ಸಮೀಪದ ಪುತ್ತಿಗೆ ಮಠ ಜಲಾವೃತಗೊಂಡಿದೆ.

44.9 ಸೆಂಮೀ ದಾಖಲೆ ಮಳೆ

ಉಡುಪಿ ತಾಲ್ಲೂಕಿನ ಐರೋಡಿಯಲ್ಲಿ ರಾಜ್ಯದಲ್ಲೇ ಗರಿಷ್ಠ 44.9 ಸೆಂ.ಮೀ ಮಳೆ ಬಿದ್ದಿದೆ. ಬ್ರಹ್ಮಾವರದಲ್ಲಿ 35.2, ಉಡುಪಿಯಲ್ಲಿ 42.2, ಕಾಪುವಿನಲ್ಲಿ 33.6 ಹಾಗೂ ಕಾರ್ಕಳದಲ್ಲಿ 25.4 ಸೆಂ.ಮೀ ಮಳೆಯಾಗಿದೆ.

ಬಜೆ ಜಲಾಶಯ ಭರ್ತಿ

ಉಡುಪಿ ನಗರ ಹಾಗೂ ಹಲವು ಗ್ರಾಮಗಳಿಗೆ ನೀರು ಪೂರೈಸುವ ಬಜೆ ಕಿರು ಜಲಾಶಯ ತುಂಬಿ ತುಳುಕುತ್ತಿದೆ. ಜಲಾಶಯದ ಪಂಪ್‌ನಿಂದ ನೀರೆತ್ತಲು ಸಾದ್ಯವಾಗದೆ ನಗರಕ್ಕೆ ನೀರು ಸರಬರಾಜು ನಿಲ್ಲಿಸಲಾಗಿದೆ. ಜಲಾಶಯದ ಕಿರು ವಿದ್ಯುತ್ ಸ್ಥಾವರದಲ್ಲಿ ಸಿಲುಕಿದ್ದ ಇಬ್ಬರನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮಳೆ ಹೆಚ್ಚಾದರೆ ರಕ್ಷಣಾ ಕಾರ್ಯಾಚರಣೆಗೆ ಬೆಂಗಳೂರಿನಿಂದ 2, ಕಾರವಾರದ ನೌಕಾನೆಲೆಯಿಂದ 2 ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT