ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರಿಸಿದ ವರುಣ: ಮನೆಗಳು ಜಲಾವೃತ

ಕೆರೆಯಂತಾದ ರಸ್ತೆಗಳು, ಹಲವೆಡೆ ಜನಜೀವನ ಅಸ್ತವ್ಯಸ್ತ
Last Updated 4 ಜುಲೈ 2020, 14:44 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಶನಿವಾರ ವರುಣ ಅಬ್ಬರಿಸಿದ್ದಾನೆ. ಎಡೆಬಿಡದೆ ಸುರಿದ ಮಳೆ ಅವಾಂತರ ಸೃಷ್ಟಿಸಿದೆ. ಮಳೆಯ ಆರ್ಭಟಕ್ಕೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿದ್ದು, ಕೆರೆಗಳಂತೆ ಕಾಣುತ್ತಿವೆ.

ಶುಕ್ರವಾರ ಮಧ್ಯರಾತ್ರಿ ಬಿರುಸುಗೊಂಡ ಮಳೆಯು ನಿರಂತರವಾಗಿ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು. ಶನಿವಾರ ಇಡೀದಿನ ಕಾರ್ಮೋಡ ಕವಿದು ಜಿಟಿಜಿಟಿ ಮಳೆ ಸುರಿಯುತ್ತಲೇ ಇತ್ತು. ಪರಿಣಾಮ ಬನ್ನಂಜೆ, ಮೂಡನಿಡಂಬೂರು, ಮಠದ ಬೆಟ್ಟು, ಕೃಷ್ಣಮಠದ ಪಾರ್ಕಿಂಗ್ ಪ್ರದೇಶ, ಬೈಲಕೆರೆ ಪ್ರದೇಶ ಭಾಗಶಃ ಜಲಾವೃತಗೊಂಡು ನಿವಾಸಿಗಳು ಸಂಕಷ್ಟ ಎದುರಿಸಬೇಕಾಯಿತು.

ನಗರದೊಳಗೆ ಹರಿಯುವ ಕಲ್ಸಂಕ ತೋಡು ತುಂಬಿ ಹರಿದು ಹಳ್ಳದ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿತ್ತು. ಚರಂಡಿಯ ತ್ಯಾಜ್ಯ ಮನೆಯೊಳಗೆ ಹರಿದು ಸಾರ್ವಜನಿಕರಿಗೆ ತೊಂದರೆಯಾಯಿತು. ಒಂದೇ ಸಮನೆ ಮಳೆ ಬೀಳುತ್ತಿದ್ದರಿಂದ ಹಲವು ಮನೆಗಳಿಗೆ ಜಲ ದಿಗ್ಭಂದನ ಹಾಕಿದಂತಾಗಿತ್ತು.

ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮಂಡಿಯುದ್ದ ನೀರು ನಿಂತಿತ್ತು. ಬೈಲಕೆರೆ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಮಣಿಪಾಲದ ಕೆಲವು ರಸ್ತೆಗಳು ಮುಳುಗಿದ್ದವು. ಉಡುಪಿ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಕರಾವಳಿ ಬೈಪಾಸ್‌ ಮೇಲ್ಸೇತುವೆ ಕೆಳಗೆ ನೀರು ತುಂಬಿ ವಾಹನ ಸವಾರರು ಪರದಾಡಿದರು.

ಮಣಿಪಾಲದ ಕೆಎಫ್‌ಸಿ ರೆಸ್ಟೊರೆಂಟ್‌ ಎದುರಿಗಿರುವ ಎತ್ತರದ ಪ್ರದೇಶದಿಂದ ಧುಮ್ಮಿಕ್ಕುತ್ತಿರುವ ಸಣ್ಣ ಝರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಸವಾರರ ಗಮನ ಸೆಳೆಯಿತು. ಈ ಭಾಗದಲ್ಲಿ ಗುಡ್ಡದ ಮಣ್ಣು ರಸ್ತೆಗೆ ಕುಸಿಯುವ ಅಪಾಯ ಎದುರಾಗಿದೆ.

ಸ್ವರ್ಣ ನದಿ ಪಾತ್ರದಲ್ಲಿ ಮಳೆ ಹೆಚ್ಚಾಗಿದ್ದು, ಬಜೆ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಉಡುಪಿ ತಾಲ್ಲೂಕಿನ ಹಲವೆಡೆ ಕೃಷಿ ಭೂಮಿಗಳು ಜಲಾವೃತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT