ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಕೈಕೊಟ್ಟ ಮಳೆ: ಬಜೆಯಲ್ಲಿ ನೀರಿನ ಮಟ್ಟ ಕುಸಿತ

Published 2 ಸೆಪ್ಟೆಂಬರ್ 2023, 6:46 IST
Last Updated 2 ಸೆಪ್ಟೆಂಬರ್ 2023, 6:46 IST
ಅಕ್ಷರ ಗಾತ್ರ

ಬಾಲಚಂದ್ರ ಎಚ್‌.

ಉಡುಪಿ: ಆಗಸ್ಟ್‌ನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುವ ಪರಿಣಾಮ ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡ್‌ಗಳು ಹಾಗೂ 6 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಹಿರಿಯಡಕದ ಬಜೆ ಕಿರು ಜಲಾಶಯದಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

6 ಮೀಟರ್ ಗರಿಷ್ಠ ಸಾಮರ್ಥ್ಯದ ಬಜೆ ಜಲಾಶಯದಲ್ಲಿ 2022ರ ಆಗಸ್ಟ್‌ನಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿತ್ತು. ಕಳೆದ ವರ್ಷ ಮಳೆ ನಿಯಮಿತವಾಗಿ ಸುರಿಯುತ್ತಿದ್ದರಿಂದ ಸ್ವರ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿ ಬಜೆ ಜಲಾಶಯ ತುಂಬಿತ್ತು. ಜನವರಿ ಅಂತ್ಯದವರೆಗೂ ಜಲಾಶಯಕ್ಕೆ ಒಳ ಹರಿವು ಇತ್ತು.

ಆದರೆ, ಈ ವರ್ಷ ಆಗಸ್ಟ್‌ನಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಹಂತಹಂತವಾಗಿ ಕುಸಿಯುತ್ತಿದೆ. ಸದ್ಯ 5.1 ಮೀಟರ್‌ ನೀರು ಲಭ್ಯವಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 6 ಮೀಟರ್ ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 0.9 ಮೀಟರ್‌ ನೀರಿನ ಸಂಗ್ರಹ ಕುಸಿತವಾಗಿದೆ.

ಸದ್ಯ ಜಲಾಶಯಕ್ಕೆ ಸ್ವರ್ಣಾ ನದಿಯ ಒಳ ಹರಿವಿನ ಪ್ರಮಾಣ ಇರುವುದರಿಂದ ನಗರಕ್ಕೆ ಕುಡಿಯುವ ನೀರು ಪೂರೈಸಲು ಸಮಸ್ಯೆಯಾಗುವುದಿಲ್ಲ. ಆದರೆ, ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಮಳೆ ಕೈಕೊಟ್ಟರೆ ವರ್ಷದ ಆರಂಭದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ.

ಉಡುಪಿ ನಗರಕ್ಕೆ ಪ್ರತಿದಿನ 28 ಎಂಎಲ್‌ಡಿ ನೀರು ಅಗತ್ಯವಿದ್ದು ಜಲಾಶಯದಲ್ಲಿ ಲಭ್ಯವಿರುವ ನೀರು ಮುಂದಿನ ನಾಲ್ಕು ತಿಂಗಳಿಗೆ ಸಾಲುತ್ತದೆ. ಡಿಸೆಂಬರ್‌ವರೆಗೂ ಮಳೆಗಾಲ ಇರುವುದರಿಂದ ಮುಂದೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ನಿರೀಕ್ಷೆ ಹುಸಿಯಾದರಷ್ಟೆ ಸಮಸ್ಯೆಯಾಗಲಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ನಗರಸಭೆ ಕ್ರಮ ಏನು

ಬಜೆ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಮನಗಂಡು ಜಲಾಶಯದಿಂದ ನೀರು ಹರಿದು ಹೋಗದಂತೆ ಗೇಟ್‌ ಹಾಕಲು ನಿರ್ಧರಿಸಲಾಗಿದೆ. ಜಲಾಶಯಕ್ಕೆ ಬಂಡುಗಳನ್ನು ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದ್ದು ಸೆಪ್ಟೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ನಗರಸಭೆ ಪೌರಾಯುಕ್ತರಾದ ರಾಯಪ್ಪ.

ಸಾಮಾನ್ಯವಾಗಿ ಪ್ರತಿವರ್ಷ ಮಾರ್ಚ್‌ನಲ್ಲಿ ಜಲಾಶಯದ ಗೇಟ್‌ ಬಂದ್ ಮಾಡಲಾಗುತ್ತಿತ್ತು. ಈ ವರ್ಷ ಮಳೆ ಕೈಕೊಟ್ಟಿರುವುದರಿಂದ ತುರ್ತು ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಟೆಂಡರ್ ಆಹ್ವಾನಿಸಲಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.

ಸವಾಲುಗಳು ಏನು

ಈ ವರ್ಷ ಜಿಲ್ಲೆಗೆ ಮುಂಗಾರು ತಡವಾಗಿ ಪ್ರವೇಶ ಮಾಡಿದ್ದರಿಂದ ಉಡುಪಿ ನಗರ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿತ್ತು. ನಗರಸಭೆಯ ವತಿಯಿಂದ ಒಂದು ತಿಂಗಳ ಕಾಲ ಟ್ಯಾಂಕರ್ ನೀರು ಪೂರೈಕೆ ಮಾಡಲಾಯಿತು. ಬಹುತೇಕ ನೀರಿನ ಮೂಲಗಳು ಬರಿದಾಗಿ ಟ್ಯಾಂಕರ್‌ಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ವರ್ಷ ಮಳೆಗಾಲ ಕೈಕೊಟ್ಟರೆ ನದಿ, ಕೆರೆಗಳು ಸೇರಿದಂತೆ ನೀರಿನ ಮೂಲಗಳೆಲ್ಲ ಬೇಸಿಗೆಯ ಆರಂಭದಲ್ಲಿಯೇ ಬರಿದಾಗಲಿದ್ದು ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಸಾರ್ವಜನಿಕರು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಜತೆಗೆ, ಹೋಟೆಲ್, ಲಾಡ್ಜ್‌ ಉದ್ಯಮಕ್ಕೂ ಪೆಟ್ಟು ಬೀಳಲಿದ್ದು ಪ್ರವಾಸೋದ್ಯಮಕ್ಕೆ ಆರ್ಥಿಕ ಹೊಡೆತ ಬೀಳಲಿದೆ.

ಸಂಭಾವ್ಯ ಜಲ ಸಂಕಷ್ಟಕ್ಕೆ ಈಗಿನಿಂದಲೇ ಪರಿಹಾರ ಹುಡುಕಬೇಕಾದ ಹೊಣೆಗಾರಿಕೆಯ ಬಗ್ಗೆ ನಗರಸಭೆ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.‌

ಪರ್ಯಾಯ ನೀರಿನ ಮೂಲವಿಲ್ಲ

ಉಡುಪಿ ನಗರಕ್ಕೆ ಬಜೆ ಹೊರತಾಗಿ ಕುಡಿಯುವ ನೀರಿನ ಪರ್ಯಾಯ ಮೂಲಗಳಿಲ್ಲ. ವರಾಹಿ ಯೋಜನೆ ಕುಂಟುತ್ತಾ ಸಾಗುತ್ತಿದ್ದು ಸದ್ಯಕ್ಕೆ ಮುಕ್ತಾಯವಾಗುವ ಲಕ್ಷಣಗಳು ಇಲ್ಲ. ಬೇಸಿಗೆಯಲ್ಲಿ ಬಜೆ ಜಲಾಶಯ ಪಾತ್ರದಲ್ಲಿ ಸಂಗ್ರಹವಾಗುವ ಹೊಂಡಗಳಿಂದ ನೀರೆತ್ತಿ ಸಾರ್ವನಿಕರಿಗೆ ವಿತರಿಸಲಾಗುತ್ತದೆ. ಪ್ರತಿ ಬೇಸಿಗೆಯಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆಗೆ ಪರ್ಯಾಯ ನೀರಿನ ಮೂಲ ಹುಡುಕಬೇಕಾದ ಅವಶ್ಯಕತೆ ಇದೆ. ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಯೋಜನೆ ಅನುಷ್ಠಾನಗೊಂಡರೆ ಸಮಸ್ಯೆಗೆ ಪರಿಹಾರವಾಗವಲ್ಲದು ಎನ್ನುತ್ತಾರೆ ತಜ್ಞರು.

‘ಅನಗತ್ಯ ನೀರು ಪೋಲು ಮಾಡಬೇಡಿ’

ಸಾರ್ವಜನಿಕರು ಅನವಶ್ಯಕವಾಗಿ ಕುಡಿಯವ ನೀರು ಪೋಲು ಮಾಡಬಾರದು ಮನೆಯ ಮುಂದಿನ ಉದ್ಯಾನಗಳಿಗೆ ವಾಹನಗಳನ್ನು ತೊಳೆಯಲು ಕುಡಿಯುವ ನೀರಿನ ಬಳಕೆ ಬೇಡ. ಬದಲಾಗಿ ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಯ ಮುಂದಿರುವ ಬಾವಿಗಳನ್ನು ಸ್ವಚ್ಛವಾಗಿಟ್ಟುಕೊಂಡು ಮಳೆನೀರು ಇಂಗಿಸಬೇಕು. –ರಾಯಪ್ಪ ಪೌರಾಯುಕ್ತರು 

ಬಜೆ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ

6 ಮೀಟರ್‌ ಸದ್ಯ ಜಲಾಶಯದಲ್ಲಿರುವ ನೀರಿನ ಸಂಗ್ರಹ;5.1 ಮೀಟರ್‌ ಉಡುಪಿ ನಗರಕ್ಕೆ ಪ್ರತಿದಿನ ಬೇಕಾಗಿರುವ ನೀರು;28 ಎಂಎಲ್‌ಡಿ ಜಲಾಶಯದ ಡೆಡ್ ಸ್ಟೋರೆಜ್ ಮಟ್ಟ;1.6 ಮೀಟರ್‌ ಉಡುಪಿ ನಗರದಲ್ಲಿರುವ ನಲ್ಲಿಗಳ ಸಂಪರ್ಕ;21000 ನಗರಸಭೆ ಅಧೀನದಲ್ಲಿರುವ ಬೋರ್‌ವೆಲ್‌ಗಳು;22 ನಗರಸಭೆ ಅಧೀನದಲ್ಲಿರುವ ಬಾವಿಗಳು;18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT