ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಗುತಿಟ್ಟು ಯಕ್ಷಗಾನದ ಆರ್ಗೋಡು ಮೋಹನ್‌ದಾಸ್‌ ಶೆಣೈಗೆ ಸಂದ ರಾಜ್ಯೋತ್ಸವ ಪ್ರಶಸ್ತಿ

Published 31 ಅಕ್ಟೋಬರ್ 2023, 13:27 IST
Last Updated 31 ಅಕ್ಟೋಬರ್ 2023, 13:27 IST
ಅಕ್ಷರ ಗಾತ್ರ

ಕುಂದಾಪುರ: ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಬಡಗುತಿಟ್ಟು ಯಕ್ಷಗಾನ ಕಲಾವಿದ ಆರ್ಗೋಡು ಮೋಹನ್‌ದಾಸ್‌ ಶೆಣೈ ಕುಂದಾಪುರ ತಾಲ್ಲೂಕಿನ ಕಮಲಶಿಲೆ ಗ್ರಾಮದ ಆರ್ಗೋಡು ಎಂಬ ಸಣ್ಣ ಊರಿನವರು.

150ಕ್ಕಿಂತ ಅಧಿಕ ವರ್ಷಗಳಿಂದ ಅವರ ಮನೆಯಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತಿತ್ತು. ಈ ವೇಳೆ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಳೆ, ತಂದೆಯ ಕಲಾಸಕ್ತಿ ಪ್ರೇರಣೆಗಳೆ ಅವರನ್ನು ಯಕ್ಷರಂಗಕ್ಕೆ ಕರೆದು ತಂದಿತ್ತು. ಯಕ್ಷಗಾನದ ಕಂಪು ಹರಡಿದ್ದ ಮನೆಯೇ ಮೋಹನ್‌ದಾಸ್ ಶೆಣೈ ಅವರಲ್ಲಿ ಹುದುಗಿದ್ದ ಯಕ್ಷಗಾನ ಸೇವಾಸಕ್ತಿಗೆ ಆಡಂಬೊಲವಾಗಿತ್ತು. ತಂದೆ ಆರ್ಗೋಡು ಗೋವಿಂದರಾಯ್ ಶೆಣೈ ಅವರು 50 ವರ್ಷಗಳ ಕಾಲ ಯಕ್ಷಗಾನ ಸೇವೆ ಸಲ್ಲಿಸಿದ ಭಾಗವತರು. ತಾಯಿ ಮುಕ್ತಾಬಾಯಿ ಕಲಾ ಪೋಷಕರಾಗಿದ್ದರು. ಈ ಕಾರಣದಿಂದಲೋ ಏನೋ ಮೋಹನ್‌ದಾಸ್‌ ಅವರು ಪಿಯುಸಿ ನಂತರದ ವಿದ್ಯಾಭ್ಯಾಸಕ್ಕೆ ಕಡಿವಾಣ ಹಾಕಿ ಯಕ್ಷಸೇವೆಗೆ ಅರ್ಪಿಸಿಕೊಳ್ಳುವ ನಿರ್ಧಾರ ಮಾಡಿದ್ದರು.

ದೊಡ್ಡಪ್ಪಂದಿರಾದ ರಾಮಚಂದ್ರ ಶೆಣೈ, ನರಸಿಂಹ ಶೆಣೈ ಅವರಿಂದ ಮಾತುಗಾರಿಕೆ ಕಲಿತ ಅವರಿಗೆ ಹೆಜ್ಜೆ ಕಲಿಸಿದವರು ಪ್ರಸಿದ್ಧ ಹಾಸ್ಯ ಕಲಾವಿದರಾಗಿದ್ದ ಕಮಲಶಿಲೆ ಮಹಾಬಲ ದೇವಾಡಿಗ.  ಮೋಹನದಾಸ್‌ ಅವರ 42 ವರ್ಷಗಳ ಯಕ್ಷಸೇವೆಯಲ್ಲಿ ಹಿರಿಯಡಕ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಕುಮಟಾ, ಅಮೃತೇಶ್ವರಿ ಹಾಗೂ ಕಮಲಶಿಲೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಧನ್ವದಿಂದ ಆರಂಭವಾದ ಅವರ ವೇ‍ಷಾಭಿನಯ ದಶರಥ, ಭೀಷ್ಮ, ರಾಮ, ಪರಶುರಾಮ, ಶಂತನು ದೇವವೃತ, ಉಗ್ರಸೇನ, ಅಕ್ರೂರ, ನಾರದ, ಭೀಮ, ವಲಲ, ನಳ, ಋತುವರ್ಣ, ಬಾಹುಕ, ಕಮುಲಭೂಪ, ಹನುಮಂತ, ನರಕಾಸುರ, ಶುಂಭಾಸುರ, ಬ್ರಹ್ಮ, ವಿಷ್ಣು, ರಾವಣ, ಅರ್ಜುನ, ಹರೀಶ್ಚಂದ್ರ, ದುಷ್ಟಬುದ್ಧಿ, ವೀರಮಣಿ, ರುಕ್ಮಾಂಗದ, ವಿಶ್ರವಸು, ಜಮದಗ್ನಿ, ಮೈತ್ರೇಯ (ವಸಂತಸೇನಾ -ಐತಿಹಾಸಿಕ) ಸೇರಿದಂತೆ ಬಹುತೇಕ ಪೌರಾಣಿಕ, ಸಾಮಾಜಿಕ ಹಾಗೂ ಐತಿಹಾಸಿಕ ಪಾತ್ರಗಳಿಗೆ ಬಣ್ಣ ಹಾಕಿದ್ದಾರೆ.

ಯಕ್ಷಗಾನಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಸಂತೃಪ್ತಿ ಇದೆ. ಈ ಕ್ಷೇತ್ರ ಎಲ್ಲವನ್ನೂ ನೀಡಿದೆ. ಆರ್ಗೋಡು ಎಂಬ ಹೆಸರು ಕಲಾದೇವಿ ಮಡಿಲಲ್ಲಿ ಅಚ್ಚೊತ್ತಲು ಯಕ್ಷಗಾನವೇ ಕಾರಣ ಎನ್ನುವ ಹೆಮ್ಮೆ ಇದೆ.
ಆರ್ಗೋಡು ಮೋಹನ್‌ದಾಸ್‌ ಶೆಣೈ, ರಾಜ್ಯೋತ್ಸವ ಪ್ರಶಸ್ತಿ ವಿಜೇತ

ಸ್ವಪ್ನ ಸಾಮ್ರಾಜ್ಯ, ರಕ್ತ ತಿಲಕ, ಮೃಗನಯನೆ, ಯಶೋಧ-ಕೃಷ್ಣ, ಪಾರ್ಥಿವಾಗ್ರಣಿ, ಕರ್ಣಕಥಾಮೃತಂ ಎನ್ನುವ ಅದ್ಭುತ ಕೃತಿಗಳು ಆರ್ಗೋಡು ಅವರ ಲೇಖನಿಯಿಂದ ಹೊರ ಬಂದಿವೆ.

ಪದ್ಯ ರಚನೆ

ಬೆಳ್ಳಿ ನಕ್ಷತ್ರ, ಶಿವಭೈರವಿ, ವರ್ಣ ವೈಭವ, ವಜ್ರ ಕೀರಿಟ, ರಾಣಿ ಮೃಣಾಲಿನಿ, ನಾಗನಯನೆ, ಅಮರದೀಪ, ಸೌಮ್ಯಸೌಂದರ್ಯ, ಅವನಿ-ಅಂಬರ ಸೇರಿದಂತೆ ಯಕ್ಷರಂಗದಲ್ಲಿ ಪ್ರಸಿದ್ಧಿ ಪಡೆದ ಹಲವು ಪ್ರಸಂಗಗಳಿಗೆ ಪದ್ಯಗಳನ್ನು ರಚನೆ ಮಾಡುವ ಮೂಲಕ ತಾನೊಬ್ಬ ಪರಿಪೂರ್ಣ ಯಕ್ಷಗಾನ ತಪಸ್ವಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕುಶ ಲವ ಕಾಳಗ, ಶ್ರೀರಾಮಾಂಜನೇಯ, ಕೃಷ್ಣಾರ್ಜುನ, ಜಾಂಬವತಿ ಕಲ್ಯಾಣ, ಸುಧನ್ವ ಕಾಳಗ, ವೀರಮಣಿ, ಮಹಿಷಾಮರ್ದಿನಿ, ಮಧುರಾ ಮಹೀಂದ್ ಹಾಗೂ ಕರ್ಣಾರ್ಜುನ ಪ್ರಸಂಗಗಳಿಗೆ ಅರ್ಥ ಬರೆದಿದ್ದಾರೆ.

ಪ್ರಶಸ್ತಿಗಳು

ಕೆ.ಎಸ್. ನಿಡಂಬೂರು ಪ್ರಶಸ್ತಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ಶಿರಿಯಾರ ಮಂಜುನಾಥ ನಾಯ್ಕ್ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಬೈಕಾಡಿ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಜಿ.ಎಸ್‌.ಬಿ ಕಲಾರತ್ನ, ಡೊಂಬಿವಿಲಿ ಕರ್ನಾಟಕ ಸಂಘ ಮುಂಬೈ, ಬಂಟರ ಸಂಘ ಮುಂಬೈ, ಮೊಗವೀರ ಸಂಘ ದೆಂಗಳೂರು, ಅಗ್ನಿಸೇವಾ ಟ್ರಸ್ಟ್, ನವನೀತ ಯಕ್ಷಗಾನ ಮಂಡಳಿ, ಶೇಣಿ ಕಲೋತ್ಸದ ಪ್ರಶಸ್ತಿಗಳು ಸೇರಿ ಅನೇಕ ಪ್ರಶಸ್ತಿ, ಸನ್ಮಾನಗಳು ಅವರ ಮುಡಿಗೇರಿದೆ.

ಶೋತೃಗಳ ಆಸಕ್ತಿಗೆ ಅನುಗುಣವಾಗಿ ಗಾನ್ಯ, ನಾಟ್ಯ, ಮಾತುಗಾರಿಕೆ, ವೇಷ, ಲಯ, ತಾಳ ಎಲ್ಲವನ್ನೂ ಮೇಳೈಸಿಕೊಂಡಿರುವ ಕರಾವಳಿಯ ಗಂಡುಕಲೆ ಎನಿಸಿಕೊಂಡಿರುವ ಯಕ್ಷಗಾನದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೆ, ಶುದ್ಧ, ಸರಳ ನಿರರ್ಗಳವಾಗಿ ಕನ್ನಡದಲ್ಲಿ ಅಹೋರಾತ್ರಿ ಮಾತನಾಡಿ ಶೋತ್ರಗಳ ಮನಗೆಲ್ಲುವ ಯಕ್ಷಗಾನ ಕಲಾವಿದರ ಪರಂಪರೆಯಲ್ಲಿ ಕಲಾವಿದ ಎನ್ನುವ ಹೆಗ್ಗಳಿಕೆ ಜೊತೆ ಯಕ್ಷ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಆರ್ಗೋಡು ಮೋಹನ್‌ದಾಸ್ ಶೆಣೈ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅವರ ಅಭಿಮಾನಿಗಳಿಗೆ ಹರ್ಷ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT