ರಾಮರಾಜ್ಯದಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು: ವಿದ್ಯಾಧೀಶ ಶ್ರೀ

7
‘ಪಾಕಿಸ್ತಾನ ಚೀನಾದಲ್ಲಿ ರಾಮಮಂದಿರ ಕಟ್ಟಿ ಎಂದು ಕೇಳಿಲ್ಲ'

ರಾಮರಾಜ್ಯದಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು: ವಿದ್ಯಾಧೀಶ ಶ್ರೀ

Published:
Updated:
Deccan Herald

ಉಡುಪಿ: ಪಾಕಿಸ್ತಾನ, ಚೀನಾದಲ್ಲಿ ರಾಮಮಂದಿರ ನಿರ್ಮಿಸಿ ಎಂದು ನಾವು ಕೇಳುತ್ತಿಲ್ಲ. ರಾಮನ ರಾಜ್ಯದಲ್ಲಿ ರಾಮಮಂದಿರ ನಿರ್ಮಿಸಿ ಎಂಬುದಷ್ಟೆ ನಮ್ಮ ಬೇಡಿಕೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಒತ್ತಾಯಿಸಿದರು.

ವಿಶ್ವಹಿಂದೂ ಪರಿಷತ್‌ನಿಂದ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್‌ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ‘ರಾಮಮಂದಿರ ಕಟ್ಟಿ ಎಂದು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ. ಪ್ರಜಾಪ್ರಭುತ್ವ ಸರ್ಕಾರದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಭು ಸಂಹಿತೆಯಲ್ಲಿ ಪ್ರಜೆಗಳ ಬೇಡಿಕೆಯನ್ನು ಈಡೇರಿಸಲೇಬೇಕು. ರಾಮಮಂದಿರ ನಿರ್ಮಾಣವಾಗಲೇಬೇಕು’ ಎಂದು ಪಲಿಮಾರು ಶ್ರೀಗಳು ಹೇಳಿದರು.

ಶ್ರೀಕೃಷ್ಣನ ಸನ್ನಿಧಾನದಲ್ಲಿ ಅಖಂಡ ಭಜನೆ ನಡೆಯಬೇಕು. ಇದರ ಫಲಶ್ರುತಿಯಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಪರ್ಯಾಯ ಕುಳಿತ ಸಮಯದಲ್ಲಿ ಸಂಕಲ್ಪ ಮಾಡಲಾಗಿತ್ತು. ಸಂಕಲ್ಪ ನೆರವೇರುವ ಸಮಯ ಬಂದಿದೆ. ರಾಮಮಂದಿರಕ್ಕೆ ಎಲ್ಲರೂ ಕಟಿಬದ್ಧರಾಗೋಣ ಎಂದರು.

ರಾಮಮಂದಿರಕ್ಕೆ ಯಾರ ವಿರೋಧವೂ ಇಲ್ಲ. ರಾಮ ಭಕ್ತರಿಗೆ ರಹೀಂ ಭಕ್ತರ ಸಹಕಾರವೂ ಇದೆ. ಹಿಂಸೆಯ ಹಾದಿ ಹಿಡಿಯದೆ ಪ್ರೀತಿಯಿಂದ ರಾಮಮಂದಿರ ಕಟ್ಟೋಣ ಎಂದು ಶ್ರೀಗಳು ಸಲಹೆ ನೀಡಿದರು.

ರಾಮಮಂದಿರ ಕಾನೂನುಬದ್ಧವಾಗಿ ನಿರ್ಮಾಣವಾಗಬೇಕಿತ್ತು. ಆದರೆ, ನ್ಯಾಯಾಲಯದಿಂದ ನ್ಯಾಯ ಸಿಗುತ್ತಿಲ್ಲ. ಈಗ ಸಂಸತ್ತಿನ ಮೂಲಕವೇ ರಾಮಮಂದಿರ ನಿರ್ಮಾಣ ಮಾಡುವುದು ಉಳಿದಿರುವ ದಾರಿ. ಪರ್ಯಾಯದ ಅವಧಿಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ನನ್ನ ಸ್ವಾರ್ಥ ಎಂದು ಪಲಿಮಾರು ಶ್ರೀಗಳು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸ್ವಾತಂತ್ರ್ಯ ಬಂದ ಕೂಡಲೇ ರಾಮಮಂದಿರ ನಿರ್ಮಾಣವಾಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ, ಜಾತ್ಯತೀತತೆ ಹೆಸರಿನಲ್ಲಿ ಬಂದ ಸರ್ಕಾರಗಳು ರಾಮಮಂದಿರ ನಿರ್ಮಾಣ ಮಾಡಲಿಲ್ಲ. ಇದರ ಪರಿಣಾಮವಾಗಿ ಕರಸೇವೆಯ ಮೂಲಕ ಬಾಬ್ರಿಮಸೀದಿಯನ್ನು ಕೆಡವಬೇಕಾಯಿತು ಎಂದರು.

ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿ ಅವರ ನೇತೃತ್ವದಲ್ಲಿ ಹೋರಾಟ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ರಾಮಮಂದಿರ ನಿರ್ಮಾಣಕ್ಕಾಗಿ ನ್ಯಾಯಾಲಯದಲ್ಲಿ ಸೆಣೆಸುತ್ತಿದೆ. ಆದರೆ, ಪ್ರಯತ್ನಕ್ಕೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಅಂತಿಮವಾಗಿ ಸುಗ್ರೀವಾಜ್ಞೆ ಮೂಲಕ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ಜನರ ಭಾವನೆಯನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸುತ್ತೇನೆ ಎಂದು ಶೋಭಾ ಹೇಳಿದರು.

ದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರ ಹಿಂದೆ ರಾಮ ಭಕ್ತರ ಕೊಡುಗೆ ದೊಡ್ಡದಿದೆ. ರಾಮನ ಭಕ್ತರ ಭಾವನೆಗಳಿಗೆ ಕೇಂದ್ರ ಸರ್ಕಾರ ಬೆಲೆ ಕೊಡಲಿದೆ ಎಂದು ಹೇಳಿದರು.

ಬಜರಂಗದಳದ ಪ್ರಾಂತ ಸಂಚಾಲಕ ಕೆ.ಆರ್‌.ಸುನೀಲ್ ಮಾತನಾಡಿ, ಹಿಂದೂಗಳ ಸ್ವಾಭಿಮಾನ ಫಲವಾಗಿ ಅವಮಾನದ ಪ್ರತೀಕವಾಗಿದ್ದ ಬಾಬ್ರಿ ಮಸೀದಿಯನ್ನು ಕೆಡವಲಾಯಿತು. ಆ ದಿನ ಹಿಂದೂಗಳ ಪಾಲಿಗೆ ಸ್ವಾಭಿಮಾನದ ದಿನವಾಗಿತ್ತು ಎಂದರು.

ರಾಮಮಂದಿರ ಕಟ್ಟುವ ವಿಚಾರವಾಗಿ ನಿರಂತರವಾಗಿ ಕಾನೂನು ಹೋರಾಟ ನಡೆಯುತ್ತಲೇ ಇದೆ. ಕಾನೂನಿಗಿಂತ ಮಿಗಿಲಾಗಿರುವುದು ಹಿಂದೂಗಳ ಭಾವನೆ ಹಾಗೂ ಶ್ರದ್ಧೆ. ಸುಪ್ರೀಂಕೋರ್ಟ್‌ ಹಿಂದೂಗಳ ಭಾವನೆಗೆ ಬೆಲೆ ಕೊಡಬೇಕಿತ್ತು. ಆದರೆ, ನೀಡಲಿಲ್ಲ. ಹಾಗಾಗಿ, ದೇಶದ ಸಾಧು ಸಂತರು ಒಟ್ಟುಗೂಡಿ ರಾಮಮಂದಿರ ನಿರ್ಮಾಣಕ್ಕಾಗಿ ನಿರ್ಣಯತೆಗೆದುಕೊಂಡು ದೇಶದಾದ್ಯಂತ ಬೃಹತ್ ಜನಾಗ್ರಹ ಸಭೆಗಳು ನಡೆಯುತ್ತಿದೆ ಎಂದರು.

ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ, ಆನೆಗುಂದಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಬಾಳೆಕುದ್ರು ಮಠದ ನರಸಿಂಹಾಶ್ರಮ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್‌ ಸಹ ಕಾರ್ಯದರ್ಶಿ ರಾಘವಲು, ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್‌, ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಆರ್‌ಎಸ್‌ಎಸ್‌ ಜಿಲ್ಲಾ ಕಾರ್ಯವಾಹಕ ಯೋಗೀಶ್‌ ನಾಯಕ್‌, ದುರ್ಗಾ ವಾಹಿನಿ ಸಂಚಾಲಕಿ ರಮಾ.ಜೆ.ರಾವ್‌ ಉಪಸ್ಥಿತರಿದ್ದರು.

ಬಜರಂಗದಳದ ಸಂಚಾಲಕ ದಿನೇಶ್‌ ಮೆಂಡನ್‌ ಮನವಿ ವಾಚಿಸಿದರು. ಪ್ರಮೋದ್‌ ಮಂದಾರ್ತಿ ಸ್ವಾಗತಿಸಿದರು, ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !