ಗ್ರಾಮೀಣ ಭಾಗಕ್ಕೆ ವೈದ್ಯರ ಸೇವೆ ಅಗತ್ಯ

7
ವಿಶ್ವ ವೈದ್ಯ ದಿನಾಚರಣೆಯಲ್ಲಿ ಶಾಸಕ ಕೆ.ರಘುಪತಿಭಟ್‌ ಅಭಿಮತ

ಗ್ರಾಮೀಣ ಭಾಗಕ್ಕೆ ವೈದ್ಯರ ಸೇವೆ ಅಗತ್ಯ

Published:
Updated:
ವೈದ್ಯದಿನಾಚರಣೆ ಅಂಗವಾಗಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಸನ್ಮಾನಿಸಲಾಯಿತು.  ಪ್ರಜಾವಾಣಿ ಚಿತ್ರ

ಉಡುಪಿ: ‘ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂಜರಿಯುತ್ತಿರುವುದರಿಂದ ಎಷ್ಟೋ ಬಡಜನರು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ’ ಎಂದು ಶಾಸಕ ಕೆ.ರಘುಪತಿ ಭಟ್‌ ತಿಳಿಸಿದರು.

ವೈದ್ಯ ದಿನಾಚರಣೆ ಅಂಗವಾಗಿ ಆದರ್ಶ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ವೈದ್ಯರ ದಿನಾಚರಣೆಯನ್ನು ಪ್ರತಿಯೊಬ್ಬರೂ ಆಚರಿಸಬೇಕು. ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಕೂಡ ವೈದ್ಯರ ಅವಶ್ಯಕತೆ ಇಲ್ಲದೆ ಬದಕಲು ಸಾಧ್ಯವಿಲ್ಲ. ಒಂದು ಸಣ್ಣ ಕೆಮ್ಮಿನಿಂದ ಹಿಡಿದು ಅತಿದೊಡ್ಡ ಕಾಯಿಲೆಗೆ ಚಿಕಿತ್ಸೆ ಪಡೆಯುವುದಕ್ಕೆ ನಾವು ವೈದ್ಯರನ್ನೇ ಅವಲಂಬಿಸ ಬೇಕಾಗುತ್ತದೆ. ಉಡುಪಿ ಜಿಲ್ಲೆಯ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ಅಂತಹ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ವಿದ್ಯಾಲಯಗಳು ಮತ್ತು ದೊಡ್ಡದೊಡ್ಡ ಖಾಸಗಿ ಆಸ್ಪತ್ರೆಗಳು ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಸಮಾಜದ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವಂತಾಗಬೇಕು’ ಎಂದು ತಿಳಿಸಿದರು.

‘ಇಂದಿನ ಯುವ ವೈದ್ಯರು ಮೂಲಸೌಲಭ್ಯ ಕೊರತೆ ಸೇರಿದಂತೆ ನೂರಾರು ಸಬೂಬುಗಳನ್ನು ಹೇಳಿ ಗ್ರಾಮೀಣ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತುಂಬಲು ಇಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡಲಾಗಿದೆ. ಉತ್ತರ ಕನ್ನಡದಂತಹ ಪ್ರದೇಶದ ಕೆಲವೊಂದು ಹಳ್ಳಿಗಳಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ ಇದೆ. ಸರ್ಕಾರ ಒದಗಿಸುವ ಆರೋಗ್ಯ ಯೋಜನೆಗಳೂ ಕೂಡ ಅವರಿಗೆ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ನೀಡಲು ಮುಂದೆ ಬರಬೇಕು’ ಎಂದು ಹೇಳಿದರು.

ಆದರ್ಶ ಆಸ್ಪತ್ರೆ ನಿರ್ದೇಶಕ ಡಾ.ಜಿ.ಎಸ್‌ ಚಂದ್ರಶೇಖರ್‌ ಮಾತನಾಡಿ, ‘‘ವೈದ್ಯೋ ನಾರಾಯಣ ಹರಿ’ ಈ ಮಾತು ಅಕ್ಷರಶಃ ಸತ್ಯ. ಯಾವುದಾದರೂ ಕಾಯಿಲೆ ಬಂದಾಗ ಅಥವಾ ಅಪಘಾತವಾದಾಗ ಇನ್ನೇನು ಜೀವ ಹೋಗುತ್ತದೆ ಎನ್ನುವ ಪ್ರಾಣ ಸಂಕಟದಲ್ಲಿರುವಾಗ ಜನರು ನಂಬುವುದು ಕಣ್ಣಿಗೆ ಕಾಣದ ಆ ದೇವರನ್ನು ಮತ್ತು ಕಣ್ಣೆದುರಿಗೆ ಇರುವ ಈ ವೈದ್ಯ ದೇವರನ್ನು. ಆದ್ದರಿಂದಲೇ ವೈದ್ಯ ವೃತ್ತಿಗೆ ಅಷ್ಟೊಂದು ಗೌರವವಿದೆ’’ ಎಂದು ಹೇಳಿದರು.

‘‘ಒಮ್ಮೊಮ್ಮೆ ಜನಸಾಮಾನ್ಯರು ಕೂಡ ವೈದ್ಯರ ಬಳಿ ಕೆಲವೊಮ್ಮೆ ತುಂಬ ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ. ಚಿಕಿತ್ಸೆ ಫಲಕಾರಿಯಾಗದಿದ್ದಾಗ ಕೂಗಾಡಿ, ಹಾರಾಡುತ್ತಾರೆ. ಜೀವ ಉಳಿಸಿದ ಡಾಕ್ಟರ್‌ಗಳ ಬಗ್ಗೆ ಬಹಳ ಕೇವಲವಾಗಿ ಮಾತನಾಡುತ್ತಾರೆ. ‘ಅವರು ಸುಮ್ಮನೆ ಮಾಡಿದ್ರಾ, ದುಡ್ಡು ತಗೊಂಡು ತಾನೆ ಚಿಕಿತ್ಸೆ ಮಾಡಿದ್ದು’ ಎಂದು ವ್ಯಂಗ್ಯವಾಡುತ್ತಾರೆ. ಹೀಗೆ ಹೇಳುವವರು ಒಂದು ಕ್ಷಣ ಯೋಚಿಸಬೇಕು; ಬರೀ ದುಡ್ಡಿದ್ದರೆ ಜೀವ ಉಳಿಸಲು ಸಾಧ್ಯವಿಲ್ಲ’’ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ವೆಂಕಟಗಿರಿ ರಾವ್‌, ಡಾ.ರಮೇಶ್‌ ರಾವ್, ಡಾ.ನಿತ್ಯಾನಂದ ನಾಯಕ್‌, ಡಾ.ನೀನಾ ರಾಣಿ ಹೆಗ್ಡೆ, ಡಾ.ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು. ನರರೋಗ ಶಸ್ತ್ರಚಿಕಿತ್ಸಕ ಪ್ರೊ.ಎ.ರಾಜ, ಡಾ.ಮಧುಸೂದನ್ ನಾಯಕ್ ಉಪಸ್ಥಿತರಿದ್ದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !